ಮುಂಬೈ (ಮಹಾರಾಷ್ಟ್ರ): 2005ರಲ್ಲಿ ಭಾರತದಿಂದ ಪರಾರಿಯಾಗಿದ್ದ ಕುಮಾರ್ ಪಿಳ್ಳೈ ಗ್ಯಾಂಗ್ನ ಮುಖ್ಯಸ್ಥ ಪ್ರಸಾದ್ ಪೂಜಾರಿಯನ್ನು ವಾಪಸ್ ಕರೆತರುವಲ್ಲಿ ಮುಂಬೈ ಪೊಲೀಸರು ಯಶಸ್ವಿಯಾಗಿದ್ದಾರೆ. ಭೂಗತ ಪಾತಕಿ ಪ್ರಸಾದ್ ಪೂಜಾರಿಯನ್ನು ಚೀನಾದಿಂದ ಶನಿವಾರ ಬೆಳಗ್ಗೆ ಭಾರತಕ್ಕೆ ಕರೆತರಲಾಯಿತು.
ಕಳೆದ ವರ್ಷ, ಮುಂಬೈ ಪೊಲೀಸರು ಪ್ರಸಾದ್ ಪೂಜಾರಿಯನ್ನು ಹಸ್ತಾಂತರಿಸಲು ಚೀನಾದೊಂದಿಗೆ ದಾಖಲೆಗಳನ್ನು ರವಾನೆ ಮಾಡಿ, ಪ್ರಕ್ರಿಯೆ ಪ್ರಾರಂಭಿಸಿದ್ದರು. ಒಂದು ವರ್ಷದ ನಂತರ, ಮುಂಬೈನಲ್ಲಿ 15ಕ್ಕೂ ಹೆಚ್ಚು ಅಪರಾಧಗಳಲ್ಲಿ ಭಾಗಿಯಾಗಿದ್ದ ಗ್ಯಾಂಗ್‌ಸ್ಟರ್ ಪ್ರಸಾದ್ ಪೂಜಾರಿಯನ್ನು ಮರಳಿ ಕರೆತರುವಲ್ಲಿ ಮುಂಬೈ ಪೊಲೀಸರು ಯಶಸ್ವಿಯಾಗಿದ್ದಾರೆ.
ದರೋಡೆಕೋರ ಪ್ರಸಾದ್ ಪೂಜಾರಿಯನ್ನು ಮುಂಬೈ ಪೊಲೀಸರು ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಬೆಳಗಿನಜಾವ 2.00 ರಿಂದ 2.30 ರ ನಡುವೆ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ ದತ್ತಾ ನಲವಡೆ ತಿಳಿಸಿದ್ದಾರೆ.
ಚೀನಾದ ಮಹಿಳೆಯನ್ನು ಮದುವೆಯಾಗಿದ್ದ ಪ್ರಸಾದ್: ಚೀನಾದಲ್ಲಿ ತಲೆಮರೆಸಿಕೊಂಡಿದ್ದ ಪ್ರಸಾದ್ ಪೂಜಾರಿ ತನ್ನ ಸುರಕ್ಷತೆಗಾಗಿ ಚೀನಾದ ಮಹಿಳೆಯನ್ನು ವಿವಾಹವಾಗಿದ್ದ. ಪ್ರಸಾದ್ಗೆ ಚೈನೀಸ್ ಮಹಿಳೆಯಿಂದ ನಾಲ್ಕು ವರ್ಷದ ಮಗನಿದ್ದಾನೆ. ಅದೇ ರೀತಿ, ಪ್ರಸಾದ್ ಪೂಜಾರಿಯ ತಾಯಿಯನ್ನು 2020ರಲ್ಲಿ ಮುಂಬೈ ಪೊಲೀಸ್ ಕ್ರೈಂ ಬ್ರಾಂಚ್ ಬಂಧಿಸಿತ್ತು.
2005ರಲ್ಲಿ ಭಾರತದಿಂದ ಪರಾರಿಯಾಗಿದ್ದ ದರೋಡೆಕೋರ ಪ್ರಸಾದ್ ಪೂಜಾರಿಗೆ ಮಾರ್ಚ್ 2008ರಲ್ಲಿ ಚೀನಾದಲ್ಲಿ ತಾತ್ಕಾಲಿಕ ವೀಸಾ ನೀಡಿತ್ತು. 2012ರ ಮಾರ್ಚ್‌ನಲ್ಲಿ ತಾತ್ಕಾಲಿಕ ವೀಸಾ ಅವಧಿ ಮುಗಿದಿತ್ತು. ಚೀನಾದ ಮಹಿಳೆಯನ್ನು ಮದುವೆಯಾದ ನಂತರ ಆತ ಶೆನ್ಜೆನ್ ನಗರದ ಲುವೊಹು ಜಿಲ್ಲೆಯಲ್ಲಿ ವಾಸಿಸುತ್ತಿದ್ದ.
ಡಿಸೆಂಬರ್ 19, 2019 ರಂದು ವಿಕ್ರೋಲಿ ಪ್ರದೇಶದಲ್ಲಿ ಶಿವಸೇನಾ ಕಾರ್ಯಕರ್ತ ಚಂದ್ರಕಾಂತ್ ಜಾಧವ್ ಅವರ ಮೇಲೆ ಗುಂಡು ದಾಳಿ ನಡೆಸಲಾಗಿತ್ತು. ಆದ್ರೆ, ಈ ಗುಂಡಿನ ದಾಳಿಯಲ್ಲಿ, ಚಂದ್ರಕಾಂತ್ ಜಾಧವ್ ಅವರ ಪ್ರಾಣಾಪಾಯದಿಂದ ಪಾರಾಗಿದ್ದರು. ಈ ವೇಳೆ ಗ್ಯಾಂಗ್‌ಸ್ಟರ್ ಪ್ರಸಾದ್ ಪೂಜಾರಿ ಹೆಸರು ಹೊರಗೆ ಬಂದಿತ್ತು.
ಪ್ರಸಾದ್ ವಿರುದ್ಧ 15 ರಿಂದ 20 ಪ್ರಕರಣ: ಚೀನಾದಲ್ಲಿ ಬಂಧಿತನಾಗಿದ್ದ ಭೂಗತ ಪಾತಕಿ ಪ್ರಸಾದ್ ಪೂಜಾರಿಯನ್ನು ಮುಂಬೈ ಪೊಲೀಸರ ವಶಕ್ಕೆ ಒಪ್ಪಿಸುವ ಪ್ರಕ್ರಿಯೆಯು ಕಳೆದ ವರ್ಷದಿಂದ ವೇಗ ಪಡೆದುಕೊಂಡಿತ್ತು. ಮುಂಬೈ ಮತ್ತು ಥಾಣೆ ಜಿಲ್ಲೆಯಲ್ಲಿ ಪ್ರಸಾದ್ ಪೂಜಾರಿ ವಿರುದ್ಧ ಸುಮಾರು 15 ರಿಂದ 20 ಪ್ರಕರಣಗಳು ದಾಖಲಾಗಿವೆ.
ಪ್ರಸಾದ್ ಪೂಜಾರಿಯನ್ನು ಚೀನಾದ ಅಧಿಕಾರಿಗಳು ಮಾರ್ಚ್ 2023ರಲ್ಲಿ ಹಾಂಗ್ ಕಾಂಗ್‌ನಿಂದ ಬಂಧಿಸಿದ್ದರು. ಮುಂಬೈನಲ್ಲಿ ಪ್ರಸಾದ್ ಪೂಜಾರಿ ವಿರುದ್ಧ ಈಗಾಗಲೇ ಸುಲಿಗೆ, ಕೊಲೆ ಮತ್ತು ಕೊಲೆ ಯತ್ನದಂತಹ ವಿವಿಧ ಪ್ರಕರಣಗಳು ದಾಖಲಾಗಿವೆ. ಪ್ರಸಾದ್ ಪೂಜಾರಿ ಮೋಸ್ಟ್ ವಾಂಟೆಡ್ ಆರೋಪಿ ಆಗಿದ್ದಾನೆ. ನಕಲಿ ಪಾಸ್‌ಪೋರ್ಟ್ ಹೊಂದಿದ್ದ ಆರೋಪದ ಮೇಲೆ 2023ರ ಮಾರ್ಚ್‌ನಲ್ಲಿ ಹಾಂಕಾಂಗ್‌ನಲ್ಲಿ ಬಂಧನಕ್ಕೊಳಗಾಗಿದ್ದ ಪೂಜಾರಿಯನ್ನು ಹಸ್ತಾಂತರಿಸುವ ಪ್ರಕ್ರಿಯೆ ಪೂರ್ಣಗೊಂಡಿದೆ.
ಇದನ್ನೂ ಓದಿ: ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ: ಚೆನ್ನೈನಲ್ಲಿ ತಂಗಿದ್ದ ಶಂಕಿತರು- ಎನ್‌ಐಎ ತನಿಖೆ - RAMESWARAM CAFE BLAST