ನವದೆಹಲಿ: ವಿಶ್ವವನ್ನೇ ನಡುಗಿಸಿದ್ದ ಕೊರೊನಾ ಸೋಂಕು ಮಾದರಿಯಲ್ಲಿ ಮಂಕಿಪಾಕ್ಸ್ ಕಾಯಿಲೆಯೂ ಭೀತಿ ಹುಟ್ಟಿಸಿದೆ. ಇದರ ಹರಡುವಿಕೆ ವೇಗವೂ ಹೆಚ್ಚಾಗಿದೆ. ಆಫ್ರಿಕಾ ದೇಶದ ಕಾಂಗೋ ಇದರ ಮೂಲವಾಗಿದ್ದರೂ, ಇದೀಗ ರೋಗ ವಿಶ್ವವ್ಯಾಪಿಯಾಗುತ್ತಿದೆ ಎಂದು ಲ್ಯಾನ್ಸೆಂಟ್ ವರದಿ ಹೇಳಿದೆ.
ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಹೆಚ್ಒ) ಮಂಕಿಪಾಕ್ಸ್ ಬಾಧೆಯಿಂದಾಗಿ ತುರ್ತು ಪರಿಸ್ಥಿತಿ ಘೋಷಿಸಿದೆ. ಇದರಿಂದ ಎಲ್ಲ ರಾಷ್ಟ್ರಗಳು ಬಾಧಿತರ ಮೇಲೆ ಹೆಚ್ಚಿನ ನಿಗಾ ವಹಿಸಿದೆ. ಕೊರೊನಾ ಹೊಡೆತದಿಂದ ನಲುಗಿದ ಬೆನ್ನಲ್ಲೇ, ಇನ್ನೊಂದು ಭೀಕರ ಮಾರಿ ದೇಶಗಳನ್ನು ಅಲ್ಲಾಡಿಸಿದೆ. ಹೀಗಾಗಿ, ಆಯಾ ಸರ್ಕಾರಗಳು ಎಂಪಾಕ್ಸ್ ಕಾಯಿಲೆ ಪತ್ತೆಗೆ ಕಟ್ಟೆಚ್ಚರ ವಹಿಸಿವೆ.
ಭೀತಿ ಹುಟ್ಟಿಸಿದ ಕ್ಲಾಡ್ 1ಬಿ: ಮಂಕಿಪಾಕ್ಸ್ ಕಾಯಿಲೆ ವ್ಯಾಪಕವಾಗಿ ಹರಡಲು ಕ್ಲಾಡ್ 1ಬಿ ವೈರಸ್ ಕಾರಣವಾಗಿದೆ. ಇದು ಅತಿ ಬಲಿಷ್ಠ ವೈರಸ್ ಆಗಿದ್ದು, ಮಾನವನ ದೇಹ ಸೇರಿದ ಬಳಿಕ ಸಾವಿನ ಪ್ರಮಾಣ ಶೇಕಡಾ 60 ರಷ್ಟು ಖಚಿತವಾಗಿರುತ್ತದೆ. ಈ ರೋಗಕ್ಕೆ ನಿಖರವಾದ ಲಸಿಕೆ, ಸಮರ್ಪಕ ಪರೀಕ್ಷೆ ವಿಧಾನ ಇಲ್ಲದ ಕಾರಣ ವೈರಸ್ ಪತ್ತೆ ಕಷ್ಟವಾಗಿದೆ. ಇದರಿಂದ ಆರೋಗ್ಯ ಕ್ಷೇತ್ರಕ್ಕೆ ಈ ವೈರಸ್ ಭಾರೀ ಸವಾಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಆಗಸ್ಟ್ 14 ರಂದು ಮಂಕಿಪಾಕ್ಸ್ ಕುರಿತು ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ (PHEIC) ಎಂದು ಘೋಷಿಸಿದೆ.
ಆಫ್ರಿಕಾ ಆರೋಗ್ಯ ಇಲಾಖೆ ನೀಡಿದ ವರದಿಯ ಪ್ರಕಾರ, ಈ ವರ್ಷದ ಆರಂಭದಿಂದ 12 ಆಫ್ರಿಕನ್ ದೇಶಗಳಲ್ಲಿ 18,737 ಮಂಕಿಪಾಕ್ಸ್ ಪ್ರಕರಣಗಳು ಕಂಡುಬಂದಿವೆ. ಇದರಲ್ಲಿ 3,101 ಅಧಿಕೃತವಾಗಿ ದೃಢಪಟ್ಟಿದ್ದರೆ, 15,636 ಶಂಕಿತ ಪ್ರಕರಣಗಳಾಗಿವೆ. ಈ ಪೈಕಿ 541 ಸಾವುಗಳು ಸಂಭವಿಸಿವೆ. ಕಳೆದ ವರ್ಷ ಅಂದರೆ 2023 ರಲ್ಲಿ ಈ ಏಳು ದೇಶಗಳಲ್ಲಿ 14,838 ಎಂಪಾಕ್ಸ್ ಪ್ರಕರಣಗ ಕಂಡುಬಂದಿದ್ದರೆ, ಇದರಲ್ಲಿ 1,665 ದೃಢಪಟ್ಟಿದ್ದವು. 13,173 ಶಂಕಿತ ಕೇಸ್ಗಳಾಗಿದ್ದವು. 738 ಸಾವು ದಾಖಲಿಸಿದ್ದವು.
ನೇರ ಸಂಪರ್ಕದಿಂದ ಹರಡುವ ವೈರಸ್: ಸೋಂಕಿತ ವ್ಯಕ್ತಿಯ ನೇರ ಸಂಪರ್ಕಕ್ಕೆ ಬಂದ ವ್ಯಕ್ತಿಗಳಿಗೆ ರೋಗ ಹರಡುತ್ತದೆ. ಪುರುಷರು, ಮಹಿಳೆಯರು ಮತ್ತು ಮಕ್ಕಳನ್ನೂ ಇದು ಕಾಡುತ್ತಿದೆ. ಸಲಿಂಗಕಾಮದಿಂದಲೂ ಇದು ವ್ಯಾಪಿಸುತ್ತದೆ. ಕಾಂಗೋದ ಎಲ್ಲಾ 26 ಪ್ರಾಂತ್ಯಗಳಲ್ಲಿ ಎಂಪಾಕ್ಸ್ ಪ್ರಕರಣಗಳು ವರದಿಯಾಗಿವೆ. 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಶೇಕಡಾ 66 ರಷ್ಟು ಮಕ್ಕಳಲ್ಲಿ ಇದು ಕಂಡುಬಂದಿದೆ. ಇದರಲ್ಲಿ ಶೇಕಡಾ 82 ಕ್ಕಿಂತ ಹೆಚ್ಚು ಸಾವುಗಳು ಸಂಭವಿಸಿವೆ.
ಭಾರತ, ನೆರೆಯ ರಾಷ್ಟ್ರಗಳ ಸ್ಥಿತಿ ಏನು?: ದೇಶದಲ್ಲಿ ಈವರೆಗೂ ಯಾವುದೇ ಅಧಿಕೃತ ಮಂಕಿಪಾಕ್ಸ್ ಕಾಯಿಲೆಯು ಯಾರಲ್ಲೂ ಕಂಡುಬಂದಿಲ್ಲ. ವಿಮಾನ ನಿಲ್ದಾಣಗಳು, ಅಂತಾರಾಷ್ಟ್ರೀಯ ಸಂಪರ್ಕಗಳ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ದೆಹಲಿಯಲ್ಲಿ ಪ್ರತ್ಯೇಕ ಆಸ್ಪತ್ರೆಗಳನ್ನೂ ಸಿದ್ಧವಾಗಿಡಲೂ ಆದೇಶಿಸಲಾಗಿದೆ.
ಆತಂಕದ ವಿಚಾರವೆಂದರೆ, ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಮಂಕಿಪಾಕ್ಸ್ ಕಾಯಿಲೆ ಕಾಣಿಸಿಕೊಂಡಿದೆ. ಪ್ರಕರಣಗಳು ದೃಢಪಟ್ಟಿವೆ. ಹೀಗಾಗಿ ಆ ದೇಶದಿಂದ ಬರುವ ಮತ್ತು ಹೋಗುವ ಜನರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗುತ್ತಿದೆ. ಎರಡೂ ರಾಷ್ಟ್ರಗಳು ಭಾರತದೊಂದಿಗೆ ಗಡಿ ಹಂಚಿಕೊಂಡ ಕಾರಣ ಹೆಚ್ಚಿನ ನಿಗಾ ವಹಿಸಬೇಕಿದೆ.
ಇದನ್ನೂ ಓದಿ: ಭಾರತದಲ್ಲಿ ಶಂಕಾಸ್ಪದ ಮಂಕಿಪಾಕ್ಸ್ ಪ್ರಕರಣ ಪತ್ತೆ; ದೆಹಲಿ ಏಮ್ಸ್‌ನಲ್ಲಿ ರೋಗಿಗೆ ಚಿಕಿತ್ಸೆ - Monkeypox In India