ವಿಕಾರಾಬಾದ್ (ತೆಲಂಗಾಣ): ವಿಕಾರಾಬಾದ್ ಜಿಲ್ಲೆಯ ನಾವಂದಗಿ ಗ್ರಾಮದವರಾದ ಎಲ್ಲಪ್ಪ ಅವರಿಗೆ ಪತ್ನಿ ವಿಮಲಮ್ಮ, ಇಬ್ಬರು ಪುತ್ರರಿದ್ದಾರೆ. ಎಲ್ಲಪ್ಪ ಬಶೀರ್ಬಾದ್ನಲ್ಲಿ ಗೋಪಾಲಕನಾಗಿ ಕೆಲಸ ಮಾಡುತ್ತಿದ್ದರು. ಕೆಲ ದಿನಗಳ ಹಿಂದೆ ಅಲ್ಲಿ ಕೆಲಸ ಬಿಟ್ಟು ತಾಂಡೂರಿನಲ್ಲಿ ಹಮಾಲಿ ಕೆಲಸಕ್ಕೆ ಸೇರಿದ್ದರು. ಅಲ್ಲಿ ವ್ಯಕ್ತಿಯೊಬ್ಬರ ಪರಿಚಯವಾಗಿತ್ತು. ಆತ ಎಲ್ಲಪ್ಪನಿಗೆ ಗೆಳೆಯನಾಗಿದ್ದ.
ಕೆಲಸ ಮುಗಿಸಿ ಹೊರಗೆ ಹೋಗಿದ್ದ ಇಬ್ಬರೂ ಶನಿವಾರ ಸಂಜೆ ಕಂಠಪೂರ್ತಿ ಮದ್ಯ ಸೇವಿಸಿದ್ದರು. ಎಲ್ಲಪ್ಪ ಸಂಪೂರ್ಣವಾಗಿ ಕುಡಿದು ಫುಟ್ಪಾತ್ ಮೇಲೆ ಅಮಲಿನಲ್ಲಿ ಮಲಗಿದ್ದ. ಎಲ್ಲಪ್ಪನ ಜೊತೆಗೆ ಪಾನಮತ್ತನಾಗಿದ್ದ ವ್ಯಕ್ತಿ ಹಣ ಹಾಗೂ ಮೊಬೈಲ್ ಕದ್ದು ಪರಾರಿಯಾಗಿದ್ದ. ಅಂದು ರಾತ್ರಿ ವಿಕಾರಾಬಾದ್ ರೈಲು ನಿಲ್ದಾಣದಲ್ಲಿ ರೈಲು ಹಳಿ ದಾಟುತ್ತಿದ್ದಾಗ ಆ ವ್ಯಕ್ತಿ ಸಾವನ್ನಪ್ಪಿದ್ದಾನೆ.
ರೈಲ್ವೇ ಸಿಬ್ಬಂದಿ ಅಪಘಾತದ ಬಳಿಕ ಸಾಕ್ಷಿಗಾಗಿ ಹುಡುಕಾಟ ನಡೆಸಿದಾಗ ಮೊಬೈಲ್ ಫೋನ್ ಪತ್ತೆಯಾಗಿದೆ. ಕಾಲ್ ಡೇಟಾ ಆಧರಿಸಿ ಮೃತ ವ್ಯಕ್ತಿ ಎಲ್ಲಪ್ಪ ಎಂದು ಪೊಲೀಸರು ಭಾವಿಸಿ ಅವರ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು. ಮೃತದೇಹ ಗುರುತು ಹಿಡಿಯಲಾಗದ ಸ್ಥಿತಿಯಲ್ಲಿದ್ದ ಕಾರಣ ಕುಟುಂಬಸ್ಥರು ಅಂತ್ಯಕ್ರಿಯೆಗಾಗಿ ನಾವಂದಗಿಗೆ ತಂದಿದ್ದರು.
ಎಲ್ಲಪ್ಪ ಮೃತಪಟ್ಟಿರುವುದು ಸಿಮೆಂಟ್ ಕಂಪನಿಯವರಿಗೆ ಗ್ರಾಮಸ್ಥರ ಮೂಲಕ ತಿಳಿದಿತ್ತು. ಆದರೆ ಅಲ್ಲಿ ಕೆಲಸ ಮಾಡುತ್ತಿದ್ದ ಬಶೀರ್ಬಾದ್ ಮತ್ತು ನಾವಂದಗಿಯ ಕೆಲ ಕೂಲಿ ಕಾರ್ಮಿಕರು ಭಾನುವಾರ ಬೆಳಗ್ಗೆ ಎಲ್ಲಪ್ಪನನ್ನು ನೋಡಿದ್ದೇವೆ ಎಂದು ಹೇಳಿದ್ದರು. ಬಳಿಕ ಎಲ್ಲಪ್ಪನ ಬಳಿ ಹೋಗಿ ಮಾತನಾಡಿದಾಗ ಸತ್ಯ ಹೊರಬಿದ್ದಿದೆ.
ಕೂಡಲೇ ಎಲ್ಲಪ್ಪನು ತನ್ನ ಕುಟುಂಬಸ್ಥರಿಗೆ ಕರೆ ಮಾಡಿ.. ''ನಾನು ಬದುಕಿದ್ದೇನೆ. ಅಲ್ಲಿ ನಡೆಯುತ್ತಿರುವ ಅಂತ್ಯಸಂಸ್ಕಾರ ನಿಲ್ಲಿಸಿ. ನಾನು ಊರಿಗೆ ಬರುತ್ತಿದ್ದೇನೆ'' ಎಂದು ತಿಳಿಸಿದರು. ಬಳಿಕ ಕುಟುಂಬಸ್ಥರು ತಂದಿದ್ದ ಮೃತ ದೇಹವನ್ನು ರೈಲ್ವೆ ಸಿಬ್ಬಂದಿಗೆ ಹಸ್ತಾಂತರಿಸಿದರು. ದೇಹ ಛಿದ್ರಗೊಂಡಿದ್ದು, ಸರಿಯಾಗಿ ಗುರುತು ಸಿಗದ ಕಾರಣ ಈ ಯಡವಟ್ಟು ನಡೆದಿದೆ ಎಂದು ರೈಲ್ವೆ ಪೊಲೀಸರು ವಿವರಿಸಿದ್ದಾರೆ.
ಓದಿ: ತಮಿಳುನಾಡು ನಕಲಿ ಮದ್ಯ ದುರಂತ: ಗಂಡಂದಿರನ್ನು ಕಳೆದುಕೊಂಡ 44 ಮಹಿಳೆಯರು! - Tamil Nadu Hooch Tragedy