ಮುಂಬೈ(ಮಹಾರಾಷ್ಟ್ರ): ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು, ಆಸ್ಪತ್ರೆಗೆ ದಾಖಲಾಗಿದ್ದ ಯುವಕನೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ವರ್ಲಿಯಲ್ಲಿ ನಡೆದಿದೆ. ವಿನೋದ್ ಲಾಡ್ (28) ಮೃತ ಯುವಕ.
ಜುಲೈ 20ರಂದು ವರ್ಲಿ ಸೀಫೇಸ್ ಎಜಿ ಖಾನ್ ಅಬ್ದುಲ್ ಗಫಾರ್ ಖಾನ್ ರಸ್ತೆಯಲ್ಲಿ ಮುಂಬೈ ಮೂಲದ ಉದ್ಯಮಿಯೊಬ್ಬರಿಗೆ ಸೇರಿದ ಬಿಎಂಡಬ್ಲ್ಯು ಕಾರು ವಿನೋದ್ ಬೈಕ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ ವಿನೋದ್ ಲಾಡ್ ಗಂಭೀರವಾಗಿ ಗಾಯಗೊಂಡಿದ್ದರು. ನಂತರ ತಕ್ಷಣ ಅವರನ್ನು ನಾಯರ್ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿತ್ತು. ವಿನೋದ್ ಲಾಡ್ ಕಳೆದ ಎಂಟು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಮಾಳವನ ಮೂಲದವರಾದ ವಿನೋದ್, ಥಾಣೆಯ ಠಾಣೆಯ ಸಾರಿಗೆ ಸಂಸ್ಥೆಯೊಂದರಲ್ಲಿ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದರು.
ಅಪಘಾತ ಸಂಬಂಧ ವಿನೋದ್ ಸಂಬಂಧಿಕ ಕಿಶೋರ್ ಲಾಡ್ ಅವರ ದೂರಿನ ಮೇರೆಗೆ ವರ್ಲಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿನೋದ್ ಸಂಬಂಧಿಕರು ಒತ್ತಾಯಿಸಿದ್ದಾರೆ. ಅಪಘಾತ ನಡೆದಾಗ ಕಾರನ್ನು ಉದ್ಯಮಿ ಕಿರಣ್ ಇಂದುಲ್ಕರ್ ಚಲಾಯಿಸುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಹಿಂದೆಯೂ ನಡೆದಿತ್ತು ಇಂತಹದ್ದೇ ಘಟನೆ: ಇತ್ತೀಚಿಗೆ, ಮುಂಬೈನಲ್ಲಿ ಹಿಟ್ ಆ್ಯಂಡ್ ರನ್ ಪ್ರಕರಣ ಬೆಳಕಿಗೆ ಬಂದಿತ್ತು. ವರ್ಲಿ ಪ್ರದೇಶದಲ್ಲಿ ವೇಗವಾಗಿ ಬಂದ ಐಷಾರಾಮಿ ಬಿಎಂಡಬ್ಲ್ಯು ಕಾರು ಬೈಕ್‌ನಲ್ಲಿ ತೆರಳುತ್ತಿದ್ದ ಮೀನುಗಾರ ದಂಪತಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದರು. ಮೃತರನ್ನು ಕಾವೇರಿ ನಖ್ವಾ (45) ಎಂದು ಗುರುತಿಸಲಾಗಿದೆ.
ಘಟನೆ ನಡೆದ ಬಳಿಕ ಚಾಲಕ ಕಾರು ಬಿಟ್ಟು ಪರಾರಿಯಾಗಿದ್ದ. ಪೊಲೀಸರು ಸ್ಥಳಕ್ಕೆ ಆಗಮಿಸಿ ಕಾರನ್ನು ವಶಕ್ಕೆ ಪಡೆದಿದ್ದರು. ಇವರ ಮೃತಳ ಪತಿ ಪ್ರದೀಪ್ ನಖ್ವಾ ಗಂಭೀರವಾಗಿ ಗಾಯಗೊಂಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದರು.
ಜು.7 ಬೆಳಗ್ಗೆ 5.30ರ ಸುಮಾರಿಗೆ ಈ ಘಟನೆ ಸಂಭವಿಸಿತ್ತು. ದಂಪತಿ ಮೀನು ಸಂಗ್ರಹಿಸಲು ತಮ್ಮ ಬೈಕ್‌ನಲ್ಲಿ ಸಸೂನ್ ಡಾಕ್‌ಗೆ ಹೋಗಿ ಮಾರುಕಟ್ಟೆಗೆ ತೆರಳುತ್ತಿದ್ದರು. ಈ ವೇಳೆ, ವರ್ಲಿಯ ಏಟ್ರಿಯಾ ಮಾಲ್‌ನ ಮುಂಭಾಗ ಹಿಂದಿನಿಂದ ಬಂದ ಕಾರು ಇವರಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿತ್ತು.
ಇದನ್ನೂ ಓದಿ: ದೆಹಲಿ: IAS ಕೋಚಿಂಗ್ ಕೇಂದ್ರದ ನೆಲಮಾಳಿಗೆಗೆ ನುಗ್ಗಿದ ನೀರು; ಮೂವರು ವಿದ್ಯಾರ್ಥಿಗಳು ಸಾವು - Coaching Centre Flooded