ಕರ್ನೂಲು(ಆಂಧ್ರಪ್ರದೇಶ): ಹೋಳಿ ಎಂದರೆ ಎಲ್ಲರಿಗೂ ನೆನಪಾಗುವುದು ಬಣ್ಣಗಳ ಲೋಕ. ತಮ್ಮ ಪ್ರೀತಿಪಾತ್ರರ ಜೊತೆಗೆ ಬಣ್ಣಗಳ ಜೊತೆ ಆಟವಾಡಿ ಸಂಭ್ರಮಿಸುವ ಹಬ್ಬ ಇದು. ಆದರೆ ಆಂಧ್ರಪ್ರದೇಶದ ಒಂದು ಪ್ರದೇಶದಲ್ಲಿ ಹೋಳಿ ಹಬ್ಬವೆಂದರೆ ಬಣ್ಣಗಳಲ್ಲ, ಹೊಸ ಸೀರೆ, ಆಭರಣಗಳನ್ನು ಧರಿಸಿ ಅಲಂಕಾರಗೊಳ್ಳುವ ಆಚರಣೆ. ಅದರಲ್ಲೂ ಇಲ್ಲೊಂದು ಟ್ವಿಸ್ಟ್ ಇದೆ. ಇಲ್ಲಿ ಸೀರೆ, ಒಡವೆ ಹಾಕಿಕೊಂಡು ಶೃಂಗಾರಗೊಳ್ಳುವುದು ಮಹಿಳೆಯರಲ್ಲ, ಗಂಡಸರು.
ಹೌದು, ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಆದೋನಿ ಮಂಡಲದ ಸಂತೆಕೂಡ್ಲೂರು ಗ್ರಾಮದಲ್ಲಿ ಈ ಹೋಳಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಮೀಸೆ ಹೊತ್ತ ಗಂಡಸರು, ಯುವಕರು, ಹುಡುಗರು ಹೋಳಿಗೆ ಸೀರೆ ಉಟ್ಟು, ಒಡವೆ ತೊಟ್ಟು, ಮಹಿಳೆಯರಂತೆ ಅಲಂಕಾರ ಮಾಡಿಕೊಳ್ಳುತ್ತಾರೆ. ನಂತರ ದೇವಸ್ಥಾನಕ್ಕೆ ತೆರಳಿ ರತಿ ಮನ್ಮಥನನ್ನು ಭಕ್ತಿಯಿಂದ ಪೂಜೆ ಮಾಡುತ್ತಾರೆ. ಈ ಊರಲ್ಲಿ ಈ ಸಂಪ್ರದಾಯ ತಲೆಮಾರುಗಳಿಂದ ನಡೆದುಕೊಂಡು ಬರುತ್ತಿದೆ.
ಹೋಳಿ ಹಬ್ಬದ ದಿನ ಸಂತೆಕೂಡ್ಲೂರು ಗ್ರಾಮದಲ್ಲಿ ಎಲ್ಲಾ ಗಂಡಸರು ಸೀರೆ ಉಟ್ಟು, ಆಭರಣ, ಹೂಗಳಿಂದ ಸಿಂಗಾರಗೊಳ್ಳುತ್ತಾರೆ. ಹೋಳಿ ಹಬ್ಬದ ದಿನ ಪುರುಷರು ಸೀರೆ ಧರಿಸಿ ಪೂಜಿಸಿದರೆ ಅವರ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆ ಇವರದು.
"ನಮ್ಮ ಹಿರಿಯರ ಕಾಲದಿಂದಲೂ ಆಚರಿಸಿಕೊಂಡು ಬಂದಿರುವ ಈ ಹಬ್ಬವನ್ನು ನಾವು ಪ್ರತೀ ವರ್ಷ ಆಚರಿಸುತ್ತೇವೆ. ಈ ದಿನ ಮಹಿಳೆಯರಂತೆ ಅಲಂಕಾರಗೊಂಡು ಪೂಜಿಸಿದರೆ ನಾವು ಬಯಸಿದ ಕಾರ್ಯಗಳು ನಡೆಯುತ್ತವೆ. ಆರೋಗ್ಯ ಸಮಸ್ಯೆಗಳು, ಮದುವೆ ಸಮಸ್ಯೆಗಳು, ಶೈಕ್ಷಣಿಕ ಅಡೆತಡೆಗಳು, ಹಾಗೂ ಇತರ ಯಾವುದೇ ಸಮಸ್ಯೆಗಳಿದ್ದರೂ, ಈ ದಿನ ಭಕ್ತಿಯಿಂದ ಪೂಜೆ ಮಾಡಿ ಬೇಡಿಕೊಂಡರೆ ನಿವಾರಣೆಯಾಗುತ್ತವೆ. ನಮ್ಮ ಇಷ್ಟಾರ್ಥಗಳು ಈಡೇರುತ್ತವೆ. ಎರಡು ದಿನಗಳ ಕಾಲ ಈ ಉತ್ಸವ ನಡೆಯಲಿದೆ" ಎನ್ನುತ್ತಾರೆ ಭಕ್ತರು.
ಈ ರೀತಿ ಪೂಜೆ ಮಾಡುವುದರಿಂದ ಬೆಳೆಗಳು ಚೆನ್ನಾಗಿ ಬರುತ್ತವೆ, ಗ್ರಾಮದ ಜನರಿಗೆ ಆರೋಗ್ಯ, ಮದುವೆ, ಆರ್ಥಿಕ ಸಮಸ್ಯೆಗಳು ಕಾಡುವುದಿಲ್ಲ ಎಂಬ ನಂಬಿಕೆ ಇದೆ. ಪ್ರತೀ ವರ್ಷ ಹೋಳಿ ಹಬ್ಬದಂದು ವಿವಿಧ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಅದರಲ್ಲೂ ಆಂಧ್ರಪ್ರದೇಶ ಹಾಗೂ ಕರ್ನಾಟಕದ ಗಡಿಪ್ರದೇಶ ಇದಾಗಿರುವುದರಿಂದ ಈ ವಿಚಿತ್ರ ಆಚರಣೆಯನ್ನು ವೀಕ್ಷಿಸಲು ಕರ್ನಾಟಕದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ.
ಇದನ್ನೂ ಓದಿ: ಬಣ್ಣದೋಕುಳಿಯಲ್ಲಿ ಮಿಂದೆದ್ದ ಕುಂದಾನಗರಿ ಜನ; ಕುಣಿದು ಕುಪ್ಪಳಿಸಿದ ಯುವಜನತೆ - holi celebration