ಶಿಮ್ಲಾ: ಶಿಮ್ಲಾದ ಸಂಜೌಲಿ ಪ್ರದೇಶದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೋಪಿಸಿ ಕೆಲ ಸಂಘಟನೆಗಳ ಕಾರ್ಯಕರ್ತರು ಗುರುವಾರ ಬೃಹತ್ ಪ್ರತಿಭಟನೆ ನಡೆಸಿದರು. ತ್ರಿವರ್ಣ ಧ್ವಜವನ್ನು ಹಿಡಿದ ಬಿಜೆಪಿ ಕಾರ್ಯಕರ್ತರು ಮತ್ತು ಇತರ ಸಂಘಟನೆಗಳ ಪ್ರತಿಭಟನಾಕಾರರು, ಮಂಡಳಿಯೊಂದು ಭೂಮಿಯನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿದೆ ಮತ್ತು ಅದರ ಮೇಲೆ ಪ್ರಾರ್ಥನಾ ಮಂದಿರದ ಕಟ್ಟಡ ನಿರ್ಮಿಸಿದೆ ಎಂದು ಆರೋಪಿಸಿ ಕಟ್ಟಡವನ್ನು ನೆಲಸಮಗೊಳಿಸುವಂತೆ ಒತ್ತಾಯಿಸಿದರು.
" ಅಕ್ರಮವಾಗಿ ನಿರ್ಮಿಸಿ 10 ವರ್ಷಗಳೇ ಕಳೆದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದನ್ನು ಸರ್ಕಾರ ನೆಲಸಮ ಮಾಡಬೇಕು" ಎಂದು ಪ್ರತಿಭಟನಾಕಾರರೊಬ್ಬರು ಒತ್ತಾಯಿಸಿದರು.
ಪ್ರಾರ್ಥನಾ ಮಂದಿರ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ ವ್ಯಕ್ತಿಯೊಬ್ಬರ ಮೇಲೆ ಕೆಲ ದುಷ್ಕರ್ಮಿಗಳು ಹಲ್ಲೆ ನಡೆಸಿದ ನಂತರ ಪ್ರತಿಭಟನೆ ತೀವ್ರಗೊಂಡಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. "ಹಲ್ಲೆ ಘಟನೆಯ ನಂತರ ಪ್ರತಿಭಟನೆ ತೀವ್ರಗೊಂಡಿದೆ. ಹತ್ತಿರದ ಹಳ್ಳಿಗಳ ಜನರು ಸಹ ಇಂದು ಪ್ರತಿಭಟನೆಯಲ್ಲಿ ಸೇರಿಕೊಂಡರು" ಎಂದು ವಿಷಯದ ಸೂಕ್ಷ್ಮತೆಯಿಂದಾಗಿ ಹೆಸರು ಹೇಳಲಿಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಕೆಲವರು ರೋಹಿಂಗ್ಯಾಗಳು ಅಥವಾ ಬಾಂಗ್ಲಾದೇಶಿಗಳು ಸೇರಿಕೊಂಡಿರುವ ಶಂಕೆ ಇರುವುದರಿಂದ ಅವರ ಮೂಲವನ್ನು ತಿಳಿಯಲು ಪೊಲೀಸರು ಅವರ ಪೂರ್ವಾಪರಗಳನ್ನು ಪರಿಶೀಲಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದಾರೆ.
ಪ್ರಾರ್ಥನಾ ಮಂದಿರ ನಿರ್ಮಾಣದ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ನಗರಾಭಿವೃದ್ಧಿ ಸಚಿವ ವಿಕ್ರಮಾದಿತ್ಯ ಸಿಂಗ್, "ಸಂಜೌಲಿಯಲ್ಲಿ ಕಟ್ಟಡ ನಿರ್ಮಾಣದ ವಿಷಯ ಕೆಲ ಸಮಯದಿಂದ ವಿವಾದದ ಸ್ವರೂಪ ಪಡೆದುಕೊಂಡಿದೆ. ಕಟ್ಟಡದ ಅಕ್ರಮ ನಿರ್ಮಾಣದ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ." ಎಂದು ಹೇಳಿದರು.
ಈ ಬಗ್ಗೆ ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಅನಿರುದ್ಧ್ ಸಿಂಗ್, "ರಾಜ್ಯದಲ್ಲಿ ಎಲ್ಲಿಯೂ ಅಕ್ರಮ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶ ನೀಡಬಾರದು. ಮಸೀದಿ ವಿಷಯವನ್ನು 2010 ರಲ್ಲಿ ಮುನ್ಸಿಪಲ್ ಕಾರ್ಪೊರೇಷನ್ ಗಮನಕ್ಕೆ ತರಲಾಗಿದೆ ಮತ್ತು ನ್ಯಾಯಾಲಯಗಳಲ್ಲಿ ಸುಮಾರು 44 ಬಾರಿ ವಿಚಾರಣೆಗಳು ನಡೆದಿವೆ. ಇದರ ಹೊರತಾಗಿಯೂ, ಕಾನೂನುಬಾಹಿರವಾಗಿ ಕಟ್ಟಡ ನಿರ್ಮಾಣ ಮಾಡಲಾಗಿದೆ" ಎಂದು ಅವರು ಹೇಳಿದರು.
"ಸಾಮಾನ್ಯ ನಾಗರಿಕರು ನಿಯಮಗಳನ್ನು ಉಲ್ಲಂಘಿಸಿದಾಗ, ಅವರ ಮೇಲೆ ತಕ್ಷಣ ಕ್ರಮ ಕೈಗೊಳ್ಳಲಾಗುತ್ತದೆ. ಹಾಗಿರುವಾಗ ಈ ವಿಷಯವನ್ನು ಇಷ್ಟು ದಿನ ಏಕೆ ಕಡೆಗಣಿಸಲಾಗಿದೆ? ಯಾವುದು ಕಾನೂನುಬಾಹಿರವೋ ಅದು ಕಾನೂನುಬಾಹಿರ" ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : ಆಕ್ಸ್ಫರ್ಡ್ ಯೂನಿಯನ್ನ 'ಕಾಶ್ಮೀರ ಚರ್ಚಾಕೂಟ'ದ ಆಹ್ವಾನ ತಿರಸ್ಕರಿಸಿದ ವಿವೇಕ್ ಅಗ್ನಿಹೋತ್ರಿ - Vivek Agnihotri