ಉಖ್ರುಲ್ (ಮಣಿಪುರ): ಮಣಿಪುರದಲ್ಲಿ ಇಂದು (ಶುಕ್ರವಾರ) ಬೆಳಗ್ಗೆಯಿಂದಲೇ ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ ಆರಂಭವಾಗಿದ್ದು, ಭದ್ರತೆಗಾಗಿ ಪೊಲೀಸರು ಉಖ್ರುಲ್ ಜಿಲ್ಲೆಯಲ್ಲಿ ಡ್ರೋನ್‌ಗಳನ್ನು ಕಣ್ಗಾವಲಿಗೆ ಬಳಸಿದ್ದಾರೆ.
''ಅವಾ ಮಾರುಕಟ್ಟೆಯಲ್ಲಿ ಒಟ್ಟು 130 ಮಹಿಳಾ ಸದಸ್ಯರಿದ್ದಾರೆ. ನಾವೆಲ್ಲರೂ ಮತ ಚಲಾಯಿಸುವ ಹಕ್ಕು ಹೊಂದಿದ್ದೇವೆ. ಇಂದು ಯಾರಿಗೆ ಮತ ಹಾಕಬೇಕು ಎಂದು ಈಗಾಗಲೇ ನಿರ್ಧರಿಸಿದ್ದೇವೆ. ನಾವು ಆಯ್ಕೆ ಮಾಡಿದ ವ್ಯಕ್ತಿಗೆ ಮತ ಹಾಕಲು ಸಿದ್ಧರಿದ್ದೇವೆ ಎಂದು ಉಖ್ರುಲ್‌ನ ಆವಾ ಮಾರುಕಟ್ಟೆಯ ಅಧ್ಯಕ್ಷರು ಹೇಳಿದರು.
ಉಖ್ರುಲ್ ಕ್ಷೇತ್ರದ ನಿವಾಸಿಯೊಬ್ಬರು ಪ್ರತಿಕ್ರಿಯಿಸಿ, ''ತಾವು ಮತ ಹಾಕಲು ಸಿದ್ಧರಿದ್ದೇವೆ. ಯಾರಿಗೆ ಮತ ಹಾಕಬೇಕು ಎಂದು ಈಗಾಗಲೇ ನಿರ್ಧರಿದ್ದೇವೆ. ಸಮುದಾಯಕ್ಕಾಗಿ ತ್ಯಾಗ ಮಾಡಲು ಸಿದ್ಧರಿರುವ, ಕ್ರಿಯಾತ್ಮಕ ಮತ್ತು ಸಮುದಾಯದಲ್ಲಿ ಬದಲಾವಣೆಗಳನ್ನು ತರುವ ಯಾರಿಗಾದರೂ ನಾನು ಮತ ಹಾಕುತ್ತೇವೆ" ಎಂದು ತಿಳಿಸಿದರು.
''ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯಬೇಕು. ನನ್ನ ಮತ ನನ್ನ ಆಯ್ಕೆಯಾಗಿದೆ. ಇಂದಿನ ಮತದಾನದಲ್ಲಿ ತಪ್ಪದೇ ಭಾಗವಹಿಸುತ್ತೇವೆ'' ಎಂದು ಮತ್ತೋರ್ವ ನಿವಾಸಿ ಹೇಳಿದರು.
ಝಿಮಿಕ್, ಆರ್ಥರ್ ನಡುವೆ ಪೈಪೋಟಿ: ಮಣಿಪುರದ ಉಖ್ರುಲ್‌ನಲ್ಲಿರುವ 'ಅವಾ ಮಾರ್ಕೆಟ್' ಸಂಪೂರ್ಣವಾಗಿ ಮಹಿಳೆಯರಿಂದಲೇ ನಡೆಸಲ್ಪಡುತ್ತದೆ. ಉಖ್ರುಲ್ ಔಟರ್ ಮಣಿಪುರ ಲೋಕಸಭಾ ಕ್ಷೇತ್ರದ ಅಡಿ ಬರುತ್ತದೆ. ಈ ಅಖಾಡದಲ್ಲಿ ನಾಗಾ ಪೀಪಲ್ಸ್ ಫ್ರಂಟ್‌ನ (ಎನ್‌ಪಿಎಫ್) ಕಚುಯಿ ತಿಮೋತಿ ಝಿಮಿಕ್ ಅವರು, ಕಾಂಗ್ರೆಸ್‌ನ ಆಲ್ಫ್ರೆಡ್ ಕೆ. ಆರ್ಥರ್ ವಿರುದ್ಧ ಸ್ಪರ್ಧೆಗೆ ಇಳಿಸಿದ್ದಾರೆ.
ಇದಕ್ಕೂ ಮುನ್ನ, ಏಪ್ರಿಲ್ 19 ರಂದು ಮೊದಲ ಹಂತದ ಮತದಾನದ ವೇಳೆ ಅನೇಕ ಹಿಂಸಾಚಾರದ ಘಟನೆಗಳು ವರದಿಯಾದ ನಂತರ, ಇನ್ನರ್ ಮಣಿಪುರ ಕ್ಷೇತ್ರದ 11 ಮತಗಟ್ಟೆಗಳಲ್ಲಿ ಏಪ್ರಿಲ್ 22 ರಂದು ಮರು ಮತದಾನ ನಡೆಸಲಾಯಿತು. ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಇವಿಎಂಗಳನ್ನು ನಾಶಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಯಾವುದೇ ಅವಘಡಗಳನ್ನು ನಡೆಯದಂತೆ ತಪ್ಪಿಸಿ ಬಿಗಿ ಭದ್ರತೆಯಲ್ಲಿ ಮರು ಮತದಾನ ಮಾಡಲಾಯಿತು.
ಔಟರ್ ಮಣಿಪುರ ಕ್ಷೇತ್ರದಲ್ಲಿ ಹಾಲಿ ಸಂಸದ ನಾಗಾ ಪೀಪಲ್ ಫ್ರಂಟ್‌ನ ಲೋರ್ಹೋ ಫೋಜ್ ಈ ಬಾರಿ ಗೆಲುವಿನ ಉತ್ಸಾಹದಲ್ಲಿದ್ದಾರೆ. ಎನ್‌ಡಿಎ ನೇತೃತ್ವದಲ್ಲಿ ಎನ್‌ಪಿಎಫ್ - ಬಿಜೆಪಿ ಮೈತ್ರಿ ನಾಯಕರು ಈ ಬಾರಿ ಚುನಾವಣೆಗೆ ಭಾರಿ ಮೆಗಾ ಪ್ಲಾನ್ ಮಾಡಿದ್ದಾರೆ. ಅಬ್ಬರ ಪ್ರಚಾರ ಮಾಡಿರುವ ಮೈತ್ರಿ ಅಭ್ಯರ್ಥಿ (NPF) ಕಚುಯಿ ತಿಮೋತಿ ಝಿಮಿಕ್ ಔಟರ್ ಮಣಿಪುರದಲ್ಲಿ ಗೆಲುವಿಗೆ ತಂತ್ರ ರೂಪಿಸಿದ್ದಾರೆ. ಇಂಡಿಯಾ ಒಕ್ಕೂಟದ ಅಭ್ಯರ್ಥಿಯಾಗಿರುವ ಕಾಂಗ್ರೆಸ್ ಶಾಸಕ ಆಲ್ಫ್ರೆಡ್ ಕೆ. ಆರ್ಥರ್ ಅಖಾಡದಲ್ಲಿದ್ದಾರೆ.
ಮಣಿಪುರದಲ್ಲಿ ಏಪ್ರಿಲ್ 19 ರಂದು ಶೇಕಡಾ 69 ಕ್ಕಿಂತ ಹೆಚ್ಚು ಮತದಾನವಾಗಿತ್ತು. ಔಟರ್ ಮಣಿಪುರದಲ್ಲಿ ಎರಡನೇ ಹಂತ ಮತದಾನ ಇಂದು (ಶುಕ್ರವಾರ) ನಡೆಯಲಿದ್ದು, ಜೂನ್ 4 ರಂದು ಮತ ಎಣಿಕೆ ನಡೆಯಲಿದೆ.