ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಿಶೇಷ ಅಧಿವೇಶನಲ್ಲಿಂದು ಅತ್ಯಾಚಾರ ವಿರೋಧಿ ಮಸೂದೆ ಮಂಡನೆಗೆ ಸಿಎಂ ಮಮತಾ ಬ್ಯಾನರ್ಜಿ ಸರ್ಕಾರ ಮುಂದಾಗಿದೆ. ಈ ಮಸೂದೆಯಲ್ಲಿ ಅತ್ಯಾಚಾರದಂತಹ ಹೇಯಕೃತ್ಯ ಎಸಗುವ ಅಪರಾಧಿಗಳಿಗೆ ಮರಣದಂಡನೆಯಂತಹ ಕಠಿಣ ಶಿಕ್ಷೆ ವಿಧಿಸುವ ಕುರಿತು ಉಲ್ಲೇಖಿಸಲಾಗಿದೆ. ಜೊತೆಗೆ, ಅತ್ಯಾಚಾರ ಮತ್ತು ಸಾಮೂಹಿಕ ಅತ್ಯಾಚಾರ ಅಪರಾಧಿಗಳಿಗೆ ಪೆರೋಲ್ ಇಲ್ಲದೆ ಜೀವಾವಧಿ ಶಿಕ್ಷೆಯನ್ನೂ ಪ್ರಸ್ತಾಪಿಸಲಾಗಿದೆ.
ಅಪರಜಿತಾ ಮಹಿಳಾ ಮತ್ತು ಮಕ್ಕಳ ಮಸೂದೆ (ಪಶ್ಚಿಮ ಬಂಗಾಳ ಅಪರಾಧ ಕಾನೂನು ಮತ್ತು ತಿದ್ದುಪಡಿ) ಮಸೂದೆ 2024ರ ಶೀರ್ಷಿಕೆಯಡಿ ಈ ಮಸೂದೆಯನ್ನು ಮಂಡಿಸಲಾಗುತ್ತಿದೆ. ಈ ಮೂಲಕ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಹೊಸ ನಿಬಂಧನೆಯನ್ನು ಪರಿಷ್ಕರಿಸಿ ಮಹಿಳೆ ಮತ್ತು ಮಕ್ಕಳ ಸುರಕ್ಷತೆಯ ಕಾನೂನನ್ನು ರಾಜ್ಯದಲ್ಲಿ ಬಲಗೊಳಿಸಲಾಗುತ್ತಿದೆ.
ದೇಶದೆಲ್ಲೆಡೆ ಭಾರಿ ಆಕ್ರೋಶಕ್ಕೆ ಗುರಿಯಾಗಿರುವ ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಕಿರಿಯ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬೆನ್ನಲ್ಲೇ ಸರ್ಕಾರ ಈ ಮಸೂದೆ ತಂದಿದ್ದು, ಸೋಮವಾರದಿಂದ ಎರಡು ದಿನ ವಿಶೇಷ ಅಧಿವೇಶನ ಕರೆದಿದೆ. ಇಂದು ಮಸೂದೆಯನ್ನು ರಾಜ್ಯ ಕಾನೂನು ಸಚಿವ ಮೊಲೊಯ್ ಘಾಟಕ್ ಅವರು ಸದನದಲ್ಲಿ ಮಂಡಿಸಲಿದ್ದಾರೆ.
ಉದ್ದೇಶಿತ ಮಸೂದೆ ಇತ್ತೀಚಿಗೆ ಜಾರಿಗೆ ತರಲಾಗಿರುವ ಭಾರತೀಯ ನ್ಯಾಯ ಸಂಹಿತಾ 2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಹಾಗು 2023 ಕಾನೂನುಗಳು ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ 2012 ಗೆ ತಿದ್ದುಪಡಿ ಪ್ರಸ್ತಾವನೆಗಳನ್ನು ಹೊಂದಿದೆ.
ಕಠಿಣ ಕಾನೂನಿಗೆ ಆಗ್ರಹಿಸಿ ಕೇಂದ್ರಕ್ಕೆ ಪತ್ರ ಬರೆದಿದ್ದ ಸಿಎಂ ಮಮತಾ: ಕಿರಿಯ ವೈದ್ಯೆ ಮೇಲಿನ ಅತ್ಯಾಚಾರ ಪ್ರಕರಣದ ಬೆನ್ನಲ್ಲೇ ಸಿಎಂ ಮಮತಾ ಬ್ಯಾನರ್ಜಿ ಅವರು ಕೇಂದ್ರ ಸರ್ಕಾರಕ್ಕೆ ಎರಡು ಪತ್ರಗಳನ್ನು ಬರೆದಿದ್ದರು. ಇದರಲ್ಲಿ ಅತ್ಯಾಚಾರ ಮತ್ತು ಕೊಲೆಗಳಂತಹ ಪ್ರಕರಣದಲ್ಲಿ ಕಠಿಣ ಕಾನೂನು ಜಾರಿಗೆ ತರಬೇಕು ಎಂದು ಆಗ್ರಹಿಸಿದ್ದರು. ಇದಕ್ಕೆ ಕೇಂದ್ರ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅನ್ನಪೂರ್ಣ ದೇವಿ ಉತ್ತರಿಸಿದ್ದು, ದೇಶದಲ್ಲಿ ಈಗಿರುವ ಕಾನೂನುಗಳು ಕಠಿಣವಾಗಿದೆ. ರಾಜ್ಯದಲ್ಲಿ ಫಾಸ್ಟ್ಟ್ರಾಕ್ ವಿಶೇಷ ನ್ಯಾಯಾಲಯಗಳ ಸಮರ್ಪಕ ಅನುಷ್ಠಾನ ನಡೆದಿಲ್ಲ ಎಂದು ಟೀಕಿಸಿದ್ದರು.
ಇದನ್ನೂ ಓದಿ: ಪಶ್ಚಿಮ ಬಂಗಾಳ ಅಧಿವೇಶನದಲ್ಲಿ ಇಂದು ಅತ್ಯಾಚಾರಿ ವಿರೋಧಿ ಮಸೂದೆ ಮಂಡನೆ