ಮಲಪ್ಪುರಂ (ಕೇರಳ): ಮಲಪ್ಪುರಂನ ಒಂದು ಕುಟುಂಬದ ಮೂವರು ಗಿನ್ನೆಸ್ ದಾಖಲೆ ನಿರ್ಮಿಸಿದ್ದು, ಇದೀಗ ಕುಟುಂಬದ ಎಲ್ಲ ಸದಸ್ಯರು ಗಿನ್ನೆಸ್ ದಾಖಲೆ ನಿರ್ಮಿಸುವ ಪ್ರಯತ್ನದಲ್ಲಿದ್ದಾರೆ. ಮಂಜೇರಿಯ ಮೂಲದ ಸಲೀಂ ಮತ್ತು ಅವರ ಕುಟುಂಬ ಈ ವರ್ಷ ಭಾರತದ ಗಿನ್ನೆಸ್ ಕುಟುಂಬ ಎಂಬ ಖ್ಯಾತಿ ಗಳಿಸಿದ್ದಾರೆ.
ಸಲೀಂ ಅವರು ಈಗಾಗಲೇ ಅತ್ಯಂತ ಕಡಿಮೆ ಸಮಯದಲ್ಲಿ ಬಾಳೆಹಣ್ಣನ್ನು ಕೈಯಿಂದ ಮುಟ್ಟದೆ ತಿನ್ನುವ ಗಿನ್ನೆಸ್ ದಾಖಲೆಯನ್ನು ಹೊಂದಿದ್ದಾರೆ. 9 ಇಂಚು ಉದ್ದದ 135 ಗ್ರಾಂ ತೂಕದ ಬಾಳೆಹಣ್ಣನ್ನು ಕೈಯಲ್ಲಿ ಮುಟ್ಟದೆ ಕೇವಲ 17.82 ಸೆಕೆಂಡುಗಳಲ್ಲಿ ತಿಂದು ಮುಗಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ 2021ರಲ್ಲಿ ಇಂಗ್ಲೆಂಡ್ನ ಲಿಯಾ ಶಟ್ಕೆವರ್ 20.33 ಸೆಕೆಂಡುಗಳಲ್ಲಿ ಬಾಳೆಹಣ್ಣು ತಿಂದು ನಿರ್ಮಿಸಿದ್ದ ಗಿನ್ನೆಸ್ ವಿಶ್ವ ದಾಖಲೆಯನ್ನು ಹಿಂದಿಕ್ಕಿದ್ದಾರೆ.
ಮುರಿದ ದಾಖಲೆಯ ಮರಳಿ ಗಳಿಸಿದ ಸಲೀಂ: ಈ ವರ್ಷದ ಆರಂಭದಲ್ಲಿ ಕಣ್ಣೂರಿನ ಫವಾಜ್, 9.7 ಸೆಕೆಂಡುಗಳಲ್ಲಿ ಬಾಳೆಹಣ್ಣು ತಿನ್ನುವ ಮೂಲಕ ಸಲೀಂ ಅವರ ದಾಖಲೆಯನ್ನು ಮುರಿದಿದ್ದರು. ಆದರೆ ಜುಲೈ 30 ರಂದು ನಡೆದ ಸ್ಪರ್ಧೆಯಲ್ಲಿ ಸಲೀಂ ಅವರು ಕಳೆದುಕೊಂಡ ದಾಖಲೆಯನ್ನು ಮತ್ತೆ ನಿರ್ಮಿಸಿದರು. 8.57 ಸೆಕೆಂಡುಗಳಲ್ಲಿ ಬಾಳೆಹಣ್ಣನ್ನು ಕೈಯಲ್ಲಿ ಮುಟ್ಟದೆ ತಿಂದು ಮತ್ತೆ ದಾಖಲೆ ನಿರ್ಮಿಸಿದರು.
ಹಲವು ಗಿನ್ನೆಸ್ ದಾಖಲೆ: ಬಾಳೆಹಣ್ಣು ತಿನ್ನುವುದು ಮಾತ್ರವಲ್ಲದೆ, ನೀರು ಕುಡಿಯುವ ಮೂಲಕವೂ ದಾಖಲೆ ನಿರ್ಮಿಸಿದವರು ಸಲೀಂ. ಸಲೀಂ 34.17 ನಿಮಿಷಗಳಲ್ಲಿ ಮಕ್ಕಳಿಗೆ ಹಾಲುಣಿಸುವ ನಿಪಲ್ ಬಾಟಲ್ನಲ್ಲಿ 250 ಮಿಲಿಲೀಟರ್ ನೀರು ಕುಡಿಯುವ ಮೂಲಕ 2023ರಲ್ಲಿ ದಾಖಲೆ ನಿರ್ಮಿಸಿದರು. ಆ ಮೂಲಕ ಮಲೇಷಿಯಾದ ವ್ಯಕ್ತಿ ನಿರ್ಮಿಸಿದ್ದ ದಾಖಲೆಯಲ್ಲಿ ಮುರಿದರು. ಅದಲ್ಲದೆ ಸಲೀಂ 30 ಸೆಕೆಂಡುಗಳಲ್ಲಿ ಚಕ್ರವನ್ನು 151 ಬಾರಿ ತಿರುಗಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಇವರ ಮಕ್ಕಳೂ ಗಿನ್ನೆಸ್ ಸಾಧಕರು: ಸಲೀಂ ಕುಟುಂಬಕ್ಕೆ ಗಿನ್ನೆಸ್ ಸಾಧನೆಗಳು ಹೊಸದೇನಲ್ಲ. ಸಲೀಂ ಅವರ ಇಬ್ಬರು ಮಕ್ಕಳೂ ಸಹ ಗಿನ್ನೆಸ್ ಸಾಧಕರು. ಅವರ ಮಗಳು ಜುವೈರಿಯಾ ಕೈಯನ್ನು ತಲೆ ಮೇಲೆ ಹಿಡಿದು, ಮೊಣಕೈ ಮತ್ತು ಮೊಣಕಾಲಿನಿಂದ 54 ಹೆಜ್ಜೆಗಳನ್ನು ಪೂರ್ಣಗೊಳಿಸುವ ಮೂಲಕ ಗಿನ್ನೆಸ್ ವಿಶ್ವ ದಾಖಲೆಗೆ ಪ್ರವೇಶಿಸಿದ್ದಾರೆ. ಯುರೋಪ್‌ನ 16 ಹೆಜ್ಜೆಗಳ ದಾಖಲೆಯನ್ನು ಮುರಿದು 2024ರಲ್ಲಿ ಈ ಸಾಧನೆ ಮಾಡಿದ್ದಾರೆ. ಮತ್ತೊಬ್ಬ ಮಗಳು ಆಯೇಷಾ ಸುಲ್ತಾನಾ ಪುಸ್ತಕಗಳನ್ನು ವರ್ಣಮಾಲೆಯಂತೆ ವೇಗವಾಗಿ 16.50 ಸೆಕೆಂಡುಗಳಲ್ಲಿ ಜೋಡಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.
ಗಿನ್ನೆಸ್ ಕುಟುಂಬ: ತಂದೆ ಮತ್ತು ಮಕ್ಕಳು ಎಲ್ಲರೂ ಗಿನ್ನೆಸ್ ದಾಖಲೆಯನ್ನು ಸಾಧಿಸುವುದರೊಂದಿಗೆ, ಸಲೀಂ ಕುಟುಂಬವು ಈಗ ಗಿನ್ನೆಸ್ ಕುಟುಂಬವಾಗಿದೆ. ತಮ್ಮ ಪತ್ನಿ ಮತ್ತು ಸೊಸೆಯನ್ನೂ ಈ ಸಾಧನೆಗೆ ಅರ್ಹರನ್ನಾಗಿ ಮಾಡುವುದು ಸಲೀಂ ಅವರ ಆಶಯ. ಇದಕ್ಕಾಗಿ ಎಲ್ಲಾ ಸಿದ್ಧತೆಗಳನ್ನೂ ಈಗಾಗಲೇ ಆರಂಭಿಸಿದ್ದಾರೆ. ಅವರ ಪತ್ನಿ ಎಂ. ಸಿ. ರಶೀದಾ ಅವರು ಮೋಸ್ಟ್ ಸ್ಟೆಪ್-ಅಪ್ ವಿಭಾಗದಲ್ಲಿ ಸ್ಪರ್ಧಿಸಲು ತರಬೇತಿ ಪಡೆಯುತ್ತಿದ್ದಾರೆ. ಇದರ ಜೊತೆಗೆ ಸಲೀಂ ಕೂಡ ಹೊಸ ದಾಖಲೆ ನಿರ್ಮಿಸಲು ಅಭ್ಯಾಸ ಮಾಡುತ್ತಿದ್ದಾರೆ. ಸದ್ಯ ಒಂದು ನಿಮಿಷದಲ್ಲಿ 24 ಟೊಮೆಟೋ ಕತ್ತರಿಸಿರುವ ದಾಖಲೆಯನ್ನು ಮುರಿಯುವ ಹಾಗೂ ಕೈಯಲ್ಲಿ ಮುಟ್ಟದೆ ಕಪ್ ಕೇಕ್ ತಿನ್ನುವ ದಾಖಲೆ ನಿರ್ಮಿಸುವ ಪ್ರಯತ್ನದಲ್ಲಿದ್ದಾರೆ. ಜೊತೆಗೆ ತಾವೇ ನಿರ್ಮಿಸಿರುವ ಬಾಳೆಹಣ್ಣು ತಿನ್ನುವ, ಚಕ್ರ ತಿರುಗಿಸುವ ದಾಖಲೆಗಳನ್ನು ಮುರಿಯುವ ಪ್ರಯತ್ನದಲ್ಲಿಯೂ ತರಬೇತಿ ಪಡೆಯುತ್ತಿದ್ದಾರೆ.
ಗಿನ್ನೆಸ್‌ನ 68 ವರ್ಷಗಳ ಇತಿಹಾಸದಲ್ಲಿ ವೈಯಕ್ತಿಕ ಸ್ಪರ್ಧೆಯಲ್ಲಿ ಸಲೀಂ ಅವರು ಈ ಸಾಧನೆ ಮಾಡಿದ ಕೇರಳದ 65ನೇ ವ್ಯಕ್ತಿ ಮತ್ತು ಮಲಪ್ಪುರಂ ಜಿಲ್ಲೆಯ ಮೂರನೇ ವ್ಯಕ್ತಿ. ಸಲೀಂ ಅವರ ಸಾಧನೆ ಭಾರತದ ಪ್ರತಿಭೆಗೆ ಸಾಕ್ಷಿ ಎಂದು ಆಲ್ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಹೋಲ್ಡರ್ಸ್ ಕೇರಳದ (All Guinness World Record Holders Kerala) ಅಧ್ಯಕ್ಷ ಗಿನ್ನೆಸ್ ಸತಾರ್ ಅಡೂರ್ ಶ್ಲಾಘಿಸಿದ್ದಾರೆ.
"ಇತರರಿಂದ ಕಲಿಯುವುದು ಎಂದರೆ ಇತರರನ್ನು ನಮ್ಮ ಕಲಿಕೆಯ ಭಾಗವಾಗಿಸುವುದು. ಅದೂ ಒಂದು ಗೌರವ. ನೀವು ಗಿನ್ನೆಸ್‌ಗೆ ಪ್ರವೇಶಿಸಲು ಬಯಸಿದರೆ, ನೀವು ಗಂಭೀರ, ಸಾಹಸಮಯ ಮತ್ತು ಫನ್ ವಿಷಯಗಳನ್ನು ಪ್ರಯತ್ನಿಸಬೇಕು. ನೀವು ಕಷ್ಟಪಟ್ಟು ಪ್ರಯತ್ನಿಸಿದರೆ ಎಲ್ಲವೂ ಸಾಧ್ಯ" ಎನ್ನುತ್ತಾರೆ ಸಲೀಂ.
ಇದನ್ನೂ ಓದಿ: ಪ್ರಿನ್ಸಿಟಾ ವಿಯನ್ನೆ ಡಿಸೋಜ 40.15 ನಿಮಿಷ ಯೋಗ ನಿದ್ರಾಸನ: ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧನೆ