ನಾಗ್ಪುರ(ಮಹಾರಾಷ್ಟ್ರ): ವಿಮಾನಗಳಿಗೆ ಹುಸಿ ಬಾಂಬ್ ಕರೆ ಮಾಡುವ ಮೂಲಕ ಆತಂಕ ಮೂಡಿಸುತ್ತಿದ್ದ 35 ವರ್ಷದ ವ್ಯಕ್ತಿಯನ್ನು ಮಹಾರಾಷ್ಟ್ರದ ನಾಗ್ಪುರ ಪೊಲೀಸರು ಬಂಧಿಸಿದ್ದಾರೆ.
ಜಗದೀಶ್ ಉಯ್ಕೆ ಬಂಧಿತ ಆರೋಪಿ. ಈತನನ್ನು ಗೊಂಡಿಯಾದಲ್ಲಿ ಬಂಧಿಸಲಾಗಿದೆ. ಈತ 2021ರಲ್ಲಿ ಭಯೋತ್ಪಾದನೆ ಕುರಿತು ಪುಸ್ತಕ ಬರೆದಿದ್ದು ಪೊಲೀಸರು ಬಂಧಿಸಿದ್ದರು.
ಇತ್ತೀಚಿಗೆ ವಿಮಾನಗಳಿಗೆ ಬೆದರಿಕೆ ಸಂದೇಶ ಬರುತ್ತಿರುವುದು ಹೆಚ್ಚಾಗುತ್ತಿದ್ದು, ವಿಮಾನಯಾನ ಸಂಸ್ಥೆಗಳು ಮತ್ತು ಪೊಲೀಸರಲ್ಲಿ ಆತಂಕ ಸೃಷ್ಟಿಯಾಗಿತ್ತು. ವಿಮಾನಗಳ ಹಾರಾಟದಲ್ಲಿ ವಿಳಂಬ ಮತ್ತು ಮಾರ್ಗ ಬದಲಾವಣೆಯಿಂದ ಸಾರ್ವಜನಿಕರು ತೀವ್ರ ಸಮಸ್ಯೆಗೆ ಒಳಗಾಗಿದ್ದರು. ಈ ಪ್ರಕರಣವನ್ನು ನಾಗರಿಕ ವಿಮಾನಯಾನ ಸಚಿವಾಲಯ ಗಂಭೀರವಾಗಿ ಪರಿಗಣಿಸಿದೆ.
ಈ ಕುರಿತು ತನಿಖೆ ನಡೆಸುವಾಗ ಉಯ್ಕೆ ಎಂಬಾತ ಇಮೇಲ್ ಮೂಲಕ ಈ ರೀತಿ ಸಂದೇಶ ರವಾನಿಸುತ್ತಿದ್ದ ಎಂದು ತಿಳಿದು ಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಡಿಸಿಪಿ ಶ್ವೇತ ಖೇಡ್ಕರ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.
ಉಯ್ಕೆ ಇಮೇಲ್ ಮೂಲಕ ಪ್ರಧಾನಮಂತ್ರಿ ಕಚೇರಿ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ, ಮತ್ತು ಉಪ ಮುಖ್ಯಮಂತ್ರಿ, ಏರ್ಲೈನ್ಸ್ ಕಚೇರಿ, ಡಿಜಿಪಿ ಮತ್ತು ರೈಲ್ವೆ ಭದ್ರತಾ ಪಡೆ ಸೇರಿದಂತೆ ಅನೇಕ ಸರ್ಕಾರದ ಸಂಸ್ಥೆಗಳಿಗೆ ಬೆದರಿಕೆ ಸಂದೇಶ ರವಾನಿಸಿದ್ದಾನೆ.
ಅಕ್ಟೋಬರ್ 21ರಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಡಿಜಿಪಿ ಮತ್ತು ಆರ್ಪಿಎಫ್ಗೆ ಬೆದರಿಕೆ ಸಂದೇಶ ಕಳುಹಿಸಿದ್ದಾನೆ. ಇದರ ಬೆನ್ನಲ್ಲೇ ರೈಲ್ವೆ ನಿಲ್ದಾಣದಲ್ಲಿ ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಆರೋಪಿಯ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿತ್ತು.
ಅಕ್ಟೋಬರ್ 26ರವರೆಗೆ 13 ದಿನಗಳ ಕಾಲ 300 ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆಗಳು ಬಂದಿದ್ದವು. ಈ ಎಲ್ಲ ಬೆದರಿಕೆ ಸಾಮಾಜಿಕ ಮಾಧ್ಯಮದ ಮೂಲಕವೇ ಬಂದಿತ್ತು. ಅಕ್ಟೋಬರ್ 22ರಂದು ಒಂದೇ ದಿನದಲ್ಲಿ 50 ವಿಮಾನಗಳು ಬೆದರಿಕೆ ಕರೆಗಳನ್ನು ಸ್ವೀಕರಿಸಿದ್ದವು.(ಪಿಟಿಐ)
ಇದನ್ನೂ ಓದಿ: ಇಂದು 60 ಸೇರಿ 15 ದಿನದಲ್ಲಿ 410 ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ