ಚತ್ರಪತಿ ಸಂಭಾಜಿನಗರ(ಮಹಾರಾಷ್ಟ್ರ): ಮಹಾರಾಷ್ಟ್ರದಲ್ಲೊಂದು ವಿಲಕ್ಷಣ ಪ್ರಕರಣ ಬೆಳಕಿಗೆ ಬಂದಿದೆ. ಅಕ್ರಮ ಸಂಬಂಧ ಹೊಂದಿದ್ದ ದಂಪತಿಯೊಬ್ಬರು ತಮ್ಮ ತಮ್ಮ ಸಂಗಾತಿಗಳೊಂದಿಗೆ ಓಡಿ ಹೋಗಿದ್ದಾರೆ. ಇದರಿಂದ ಕಳೆದ ಹತ್ತು ತಿಂಗಳಿಂದಲೂ ಮೂವರು ಹೆಣ್ಣು ಮಕ್ಕಳು ಅತಂತ್ರರಾಗಿದ್ದಾರೆ. ಈ ಕುರಿತು ಬುಧವಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಛತ್ರಪತಿ ಸಂಭಾಜಿನಗರ ಜಿಲ್ಲೆಯ ಸತಾರ ಪೊಲೀಸ್ ಠಾಣಾ ವ್ಯಾಪ್ತಿಯ ಹೈಕೋರ್ಟ್ ಕಾಲೊನಿಯಲ್ಲಿ ದಂಪತಿ ತಮ್ಮ ಇಬ್ಬರು ಗಂಡು ಮಕ್ಕಳು, ಮೂವರು ಹೆಣ್ಣು ಮಕ್ಕಳೊಂದಿಗೆ ವಾಸವಾಗಿದ್ದರು. ಆದರೆ, ಈ ದಂಪತಿ ಕಟ್ಟಡ ನಿರ್ಮಾಣದ ಕೂಲಿ ಕೆಲಸ ಮಾಡಿದ್ದರು. ಇಬ್ಬರು ಕೂಡ ಬೇರೆಯವರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರು. ಹತ್ತು ತಿಂಗಳ ಹಿಂದೆ ಮೂವರು ಹೆಣ್ಣು ಮಕ್ಕಳನ್ನು ಬಿಟ್ಟು ಪತಿ, ಪತ್ನಿ ಓಡಿ ಹೋಗಿದ್ದಾರೆ ಎಂದು ಸಬ್ ಇನ್ಸ್ಪೆಕ್ಟರ್ ನಂದಕುಮಾರ್ ಭಂಡಾರೆ ತಿಳಿಸಿದ್ದಾರೆ.
ಮೊದಲಿಗೆ ವ್ಯಕ್ತಿಯ ತನ್ನ ಪ್ರೇಯಸಿ ಜೊತೆಗೆ ಓಡಿಹೋಗಿದ್ದಾನೆ. ಇದಾದ ಕೆಲ ದಿನಗಳಲ್ಲೇ ಆತನ ಹೆಂಡ್ತಿ ಸಹ ಇಬ್ಬರು ಗಂಡು ಮಕ್ಕಳನ್ನು ಕರೆದುಕೊಂಡು ತನ್ನ ಪ್ರಿಯುಕರನೊಂದಿಗೆ ಪರಾರಿಯಾಗಿದ್ದಾಳೆ. ಇದರಿಂದ 7, 9 ಮತ್ತು 11ನೇ ವರ್ಷ ವಯಸ್ಸಿನ ಮೂವರು ಹೆಣ್ಣು ಮಕ್ಕಳು ಅನಾಥರಾಗಿದ್ದಾರೆ. ಹೀಗಾಗಿ ಆರಂಭದ ಮೂರು ತಿಂಗಳು ನೆರೆಹೊರೆಯವರೇ ಇವರನ್ನು ನೋಡಿಕೊಂಡಿದ್ದಾರೆ. ಆದರೆ, ತಂದೆ, ತಾಯಿ ಮರಳಿ ಯಾವಾಗ ಬರುತ್ತಾರೆ ಎಂಬ ಸುಳಿವು ಸಿಗದ ಕಾರಣ ಮಕ್ಕಳ ಕಲ್ಯಾಣ ಸಮಿತಿಗೆ ಆ ಹೆಣ್ಣು ಮಕ್ಕಳನ್ನು ಒಪ್ಪಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಸದ್ಯ ಮಕ್ಕಳ ಕಲ್ಯಾಣ ಸಮಿತಿ ಬಳಿಯೇ ಬಾಲಕಿಯರು ಇದ್ದಾರೆ. ಈ ಕುರಿತು ಸಿಕ್ಕ ಮಾಹಿತಿ ಮೇರೆಗೆ ಬುಧವಾರ ಓಡಿ ಹೋದ ದಂಪತಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಪರಾರಿಯಾದ ಮಹಿಳೆಗೆ ಈ ಮುಂಚೆಯೇ ಮತ್ತೊಬ್ಬ ವ್ಯಕ್ತಿಯೊಂದಿಗೆ ಮದುವೆಯಾಗಿತ್ತು. ಎರಡನೇ ಗಂಡನೊಂದಿಗೆ ಓರ್ವ ಮಗಳನ್ನು ಹೊಂದಿದ್ದಳು. ಈ ಕುರಿತು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಇದನ್ನೂ ಓದಿ: ಐಸಿಯುಗೆ ದಾಖಲಾಗಿದ್ದ ಮಹಿಳೆ ಮೇಲೆ ನರ್ಸಿಂಗ್ ಸಹಾಯಕರಿಂದ ಅತ್ಯಾಚಾರ