ಪ್ರಯಾಗ್ರಾಜ್(ಉತ್ತರ ಪ್ರದೇಶ): ಮಹಾಕುಂಭ ಮೇಳಕ್ಕೆ ಆಗಮಿಸುವ ಭಕ್ತರಿಗೆ ಈ ಧಾರ್ಮಿಕ ಮಹಾ ಕಾರ್ಯಕ್ರಮದ ವೈಭವದ ಕಥೆಯನ್ನು ಮನಮುಟ್ಟುವಂತೆ ತಿಳಿಸಲು ಉತ್ತರ ಪ್ರದೇಶ ಸರ್ಕಾರ ಡಿಜಿಟಲ್ ತಂತ್ರಜ್ಞಾನವನ್ನು ಬಳಸುತ್ತಿದೆ. ಎಐ, ವಿಆರ್ ಮತ್ತು ಎಆರ್ನಂತಹ ತಂತ್ರಜ್ಞಾನಗಳ ಸಹಾಯದಿಂದ ಮಹಾಕುಂಭದ ಕಥೆ, ಪುರಾಣವನ್ನು ಪ್ರವಾಸಿಗರಿಗೆ ಮನಮುಟ್ಟುವಂತೆ ತಿಳಿಸಲಾಗುತ್ತಿದೆ.
ಇಂದಿನಿಂದ ಅಂದರೆ, ಜನವರಿ 13ರಿಂದ ಆರಂಭವಾಗಿರುವ ಮಹಾಕುಂಭ ಮೇಳದಲ್ಲಿ ಡಿಜಿಟಲ್ ಮಹಾಕುಂಭ ಅನುಭವ ಕೇಂದ್ರವನ್ನು ತೆರೆಯಲಾಗಿದೆ. ಇದರಲ್ಲಿ ಕೃತಕ ಬುದ್ಧಿಮತ್ತೆ(ಎಐ), ವರ್ಚುಯಲ್ ರಿಯಾಲಿಟಿ, ಅಗ್ಯುಮೆಂಟೆಟ್ ರಿಯಾಲಿಟಿ ಹಾಗೂ ಲೈಟ್ ಡಿಟೆಕ್ಷನ್ ಆ್ಯಂಡ್ ರೇಜಿಂಗ್ ತಂತ್ರಜ್ಞಾನ ಮತ್ತು ಎಲ್ಇಡಿ ಡಿಸ್ಪ್ಲೆ ಹಾಗೂ ಹಾಲೋಗ್ರಾಮ್ಸ್ ಮೂಲಕ ಮಹಾಕುಂಭದ ಪೌರಾಣಿಕ ಹಿನ್ನೆಲೆಯಲ್ಲಿ ವಿವರಿಸಲಾಗುತ್ತಿದೆ.
ಡಿಜಿಟಲ್ ಮಹಾಕುಂಭ ಅನುಭವ ಕೇಂದ್ರವನ್ನು 60,000 ಚದರ ಕಿ.ಮೀನಲ್ಲಿ ಸ್ಥಾಪಿಸಲಾಗಿದೆ. ಇದನ್ನು 12 ವಲಯಗಳಾಗಿ ವಿಭಾಗಿಸಲಾಗಿದೆ. ಈ ಕೇಂದ್ರದಲ್ಲಿ ಪೌರಾಣಿಕ ವಾಸ್ತುಶಿಲ್ಪಗಳ ನಿರ್ಮಾಣ ಪ್ರಮುಖ ಆಕರ್ಷಣೆಯಾಗಿದೆ.
ಕೇಂದ್ರದ ವಿಶೇಷತೆಗಳು: ಈ ಕೇಂದ್ರದೊಳಗೆ ಪ್ರವೇಶಿಸುತ್ತಿದ್ದಂತೆ ಮಹಾಕುಂಭ ಮೇಳದ ಟ್ರೇಲರ್ ನೋಡಬಹುದು. ಇದಾದ ಬಳಿಕ ಮರದ ಗೋಡೆಯನ್ನು ಸ್ಕ್ರೋಲ್ ರೀತಿ ನಿರ್ಮಿಸಿ ಅದರಲ್ಲಿ ಸಮುದ್ರ ಮಂಥನದ ಕಥೆ ಹೇಳಲಾಗುತ್ತಿದೆ. ಹಾಗೆಯೇ ಮುಂದೆ ಸಾಗಿದರೆ, ಯಮುನೋತ್ರಿ ಹಿಮಶಿಖರದ ಕುರಿತು ಅನುಭವ ಪಡೆಯಬಹುದು. ಯಮುನಾ ನದಿ ಕಣ್ಮುಂದೆಯೇ ಹರಿಯುತ್ತಿದೆ ಎಂಬ ವರ್ಚುಯಲ್ ಅನುಭವ ಇಲ್ಲಿ ಸಿಗುತ್ತದೆ. ಹಾಗೆಯೇ ಪ್ರಯಾಗ್ ಮಹತಮ್ ಮತ್ತು ತ್ರಿವೇಣಿ ಸಂಗಮದ ಕಥೆಯನ್ನು ಕೂಡ ಅನುಭವಿಸಬಹುದು.
ಈ ಎಲ್ಲಾ ಅನುಭವವನ್ನು ಡಿಜಿಟಲ್ ರೂಪದಲ್ಲಿ ರಚಿಸಲಾಗಿದ್ದು, ಮಹಾಕುಂಭಕ್ಕೆ ಆಗಮಿಸುವ ಹೊಸ ಪೀಳಿಗೆಯ ಹಾಗೂ ವಿದೇಶಿ ಪ್ರವಾಸಿಗರಿಗೆ ಪೌರಾಣಿಕ ಕಥೆಗಳನ್ನು ವಿಶೇಷವಾಗಿ ರೂಪಿಸಲಾಗಿದೆ. ಜನವರಿ 9ರಂದು ಈ ಕೇಂದ್ರವನ್ನು ಉದ್ಘಾಟಿಸಿದ್ದ ಸಿಎಂ ಯೋಗಿ ಆದಿತ್ಯನಾಥ್, ಇಂದಿನ ಯುವ ಜನತೆ ಮತ್ತು ವಿದೇಶಿ ಪ್ರವಾಸಿಗರಿಗೆ ಭಾರತದ ಸಂಸ್ಕೃತಿಯ ಆಳ ಮತ್ತು ಐತಿಹಾಸಿಕ ಶ್ರೀಮಂತಿಕೆಯನ್ನು ತಿಳಿಸಲು ಈ ಕೇಂದ್ರವನ್ನು ತೆರೆಯಲಾಗಿದೆ ಎಂದು ತಿಳಿಸಿದ್ದರು.
ಡಿಜಿಟಲ್ ಕೇಂದ್ರ ಸ್ಥಾಪನೆಯ ಹಿಂದಿನ ರೂವಾರಿ ಮತ್ತು ನೋಯ್ಡಾದ ಪೆವಿಲಿಯನ್ಸ್ ಮತ್ತು ಇಂಟೀರಿಯರ್ಸ್ ಈವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ಮುಖ್ಯಸ್ಥ ಮೊಹಿತ್ ವರ್ಮಾ ಈಟಿವಿ ಭಾರತ್ ಜೊತೆ ಮಾತನಾಡಿದ್ದು, "ಸಂಪೂರ್ಣ ಮಹಾಕುಂಭ ಕಥೆ ಹೇಳುವ ಮತ್ತು ತೋರಿಸುವ ಈ ಯೋಜನೆ ಮುಖ್ಯಮಂತ್ರಿಗಳದ್ದು. ಮೇಳದ ಅಧಿಕಾರಿಗಳು ಟೆಂಡರ್ ಬಿಡುಗಡೆ ಮಾಡಿದಾಗ, ಕಳೆದ ವರ್ಷದ ಡಿಸೆಂಬರ್ 16ರಂದು ನಾವು ಟೆಂಡರ್ ಪಡೆದೆವು" ಎಂದರು.
ಮೂರೇ ವಾರದಲ್ಲಿ ನಿರ್ಮಾಣ: "ಡಿಸೆಂಬರ್ 18ರಂದು ನಾವು ಮಹಾಕುಂಭ ಮೇಳದ ಸೆಕ್ಟರ್ 3 ಪ್ರದೇಶಕ್ಕೆ ಬಂದಾಗ ನಮ್ಮ ಕಂಟೆಂಟ್ ತಂಡ ಪ್ರಾಥಮಿಕ ಹಂತದಿಂದ ನಮ್ಮ ಯೋಜನೆ ಕಾರ್ಯಗತಗೊಳಿಸುವ ಕುರಿತು ವಿಸ್ತೃತ ಚರ್ಚೆ ನಡೆಸಿತು. ವಾಸ್ತುಶಿಲ್ಪದ ಗೋಡೆಗಳಿಂದ ಹಿಡಿದು ಇಲ್ಲಿ ಎಲ್ಲವೂ ನಮ್ಮ ತಂಡದಿಂದ ಅದರಲ್ಲೂ ಕೈಯಿಂದಲೇ ನಿರ್ಮಿಸಲಾಗಿರುವ ಕಲೆಯಾಗಿದೆ. ಯಾವುದನ್ನೂ ಹೊರಗಿನ ಮೂಲದಿಂದ ತಂದಿಲ್ಲ. ಕೇಂದ್ರ ನಿರ್ಮಾಣಕ್ಕೆ ನಮ್ಮ ತಂಡ 21 ದಿನ ತೆಗೆದುಕೊಂಡಿದೆ. ಮೂರು ವಾರದಲ್ಲಿ ಎಲ್ಲವನ್ನೂ ನಾವು ನಿರ್ಮಿಸಿದ್ದೇವೆ" ಎಂದು ವಿವರಿಸಿರು.
ಕೇಂದ್ರದ ವೀಕ್ಷಣಾ ಸಮಯ: "ಡಿಜಿಟಲ್ ಮಹಾಕುಂಭ ಕೇಂದ್ರಕ್ಕೆ ತೆರಳಲು ಎರಡು ಟಿಕೆಟ್ ಕೌಂಟರ್‌ಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿದಿನಕ್ಕೆ 3ರಿಂದ 4 ಸಾವಿರ ಜನ ಭೇಟಿ ನೀಡುತ್ತಿದ್ದಾರೆ. ಕೇಂದ್ರದಲ್ಲಿ ಒಬ್ಬರಿಗೆ 50 ರೂ ಟಿಕೆಟ್ ದರ ನಿಗದಿಸಲಾಗಿದೆ. ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ಕೇಂದ್ರ ತೆರೆದಿರುತ್ತದೆ. ಮಧ್ಯಾಹ್ನ 2ರಿಂದ 3ರವರೆಗೆ ಮಾತ್ರ ಒಂದು ವಿರಾಮವಿದ್ದು, ಜನವರಿ 13 ಮತ್ತು 14ರ ಪವಿತ್ರ ಸ್ನಾನದ ದಿನ ಮುಚ್ಚಲಾಗುವುದು" ಎಂದು ಅವರು ಮಾಹಿತಿ ನೀಡಿದರು.
ಇದನ್ನೂ ಓದಿ: ಮಹಾಕುಂಭ ಮೇಳ: ಭಾರತೀಯ ಸಂಸ್ಕೃತಿ, ಮೌಲ್ಯಗಳ ಆರಾಧಕರಿಗೆ ವಿಶೇಷ ದಿನ- ಪ್ರಧಾನಿ ಮೋದಿ