ಸೋನಿತ್‌ಪುರ್, ಅಸ್ಸಾಂ: 10 ರಿಂದ 20 ಮತದಾರರು ಇರುವ ಕುಟುಂಬಗಳೇ ಈಗ ಅಪರೂಪವಾಗುತ್ತಿವೆ. ಅಂತಹುದರಲ್ಲಿ ಅಸ್ಸಾಂನ ಸೋನಿತ್‌ಪುರ ಜಿಲ್ಲೆಯ ಪುಲೋಗುರಿಯಲ್ಲಿರುವ ನೇಪಾಳಿ ಕುಟುಂಬವೊಂದರಲ್ಲಿ ಬರೋಬ್ಬರಿ 350 ಮತದಾರರು ಇದ್ದಾರೆ. ಈ ಮೂಲಕ 350 ಮತದಾರರು ಇರುವ ಅತಿ ದೊಡ್ಡ ಕುಟುಂಬ ಎಂಬ ಹಿರಿಮೆಗೂ ಈ ಫ್ಯಾಮಿಲಿ ಪಾತ್ರವಾಗಿದೆ. ಈ ಮೂಲಕ ಥಾಪಾ ಕುಟುಂಬವು ದೇಶದ ಗಮನ ಸೆಳೆದಿದೆ. ದಿವಂಗತ ರಾನ್ ಬಹದ್ದೂರ್ ಥಾಪಾ ಅವರ ಕುಟುಂಬವೇ ಇಂತಹ ಗರಿಮೆಗೆ ಪಾತ್ರವಾಗಿರುವ ಅಸ್ಸಾಂ ಅತಿದೊಡ್ಡ ಕುಟುಂಬ. ಏಪ್ರಿಲ್ 19 ರಂದು ಲೋಕಸಭೆಗೆ ಹಂತದ ಮತದಾನ ನಡೆಯಲಿದೆ.
ಇವರ ಕುಟುಂಬವು ರಂಗಪಾರ ವಿಧಾನಸಭಾ ಕ್ಷೇತ್ರ ಮತ್ತು ಸೋನಿತ್‌ಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಈ ಕುಟುಂಬದ ಎಲ್ಲ ಸದಸ್ಯರು ಏಪ್ರಿಲ್ 19 ರಂದು ಸೋನಿತ್‌ಪುರ ಲೋಕಸಭಾ ಕ್ಷೇತ್ರದಲ್ಲಿ ಮತ ಚಲಾಯಿಸಲಿದ್ದಾರೆ. ರಾನ್ ಬಹದ್ದೂರ್ ಥಾಪಾ ಅವರು 12 ಪುತ್ರರು ಮತ್ತು 9 ಪುತ್ರಿಯರನ್ನು ಅಗಲಿದ್ದಾರೆ. ಥಾಪಾಗೆ ಐದು ಜನ ಹೆಂಡತಿಯರಿದ್ದರು. ಒಟ್ಟು 1200 ಸದಸ್ಯರಿರುವ ಕುಟುಂಬದಲ್ಲಿ ಸುಮಾರು 350 ಸದಸ್ಯರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಮ್ಮ ಮತದಾನದ ಹಕ್ಕು ಚಲಾಯಿಸಲಿದ್ದಾರೆ. ದಿವಂಗತ ರಾನ್ ಬಹದ್ದೂರ್ 150ಕ್ಕೂ ಹೆಚ್ಚು ಮೊಮ್ಮಕ್ಕಳನ್ನು ಹೊಂದಿದ್ದಾರೆ ಎಂಬುದು ಗಮನಾರ್ಹ.
ಸೋನಿತ್‌ಪುರ ಸಂಸದೀಯ ಕ್ಷೇತ್ರದ ಫುಲೋಗುರಿ ನೇಪಾಳಿ ಪಾಮ್ ಪ್ರದೇಶದಲ್ಲಿ ಒಂದೇ ಪೂರ್ವಜರ ಸುಮಾರು 300 ಕುಟುಂಬಗಳು ವಾಸಿಸುತ್ತಿವೆ ಎಂದು ನೇಪಾಳಿ ಪಾಮ್ ಗ್ರಾಮದ ಮುಖ್ಯಸ್ಥ ಮತ್ತು ದಿವಂಗತ ರಾನ್ ಬಹದ್ದೂರ್ ಅವರ ಪುತ್ರ ಟಿಲ್ ಬಹದ್ದೂರ್ ಥಾಪಾ ತಿಳಿಸಿದ್ದಾರೆ. 1200 ಜನರನ್ನು ಹೊಂದಿರುವ ಅವರ ಇಡೀ ಕುಟುಂಬದಲ್ಲಿ ಸುಮಾರು 350 ಜನರು ಮತ ಚಲಾಯಿಸಲು ಅರ್ಹರಾಗಿದ್ದಾರೆ.
"ನನ್ನ ತಂದೆ 1964 ರಲ್ಲಿ ನನ್ನ ಅಜ್ಜನ ಜೊತೆಗೆ ಅಸ್ಸಾಂ ರಾಜ್ಯಕ್ಕೆ ಬಂದು ನೆಲೆಸಿದರು. ನನ್ನ ತಂದೆಗೆ ಐವರು ಹೆಂಡತಿಯರು ಮತ್ತು ನಮಗೆ 12 ಸಹೋದರರು ಮತ್ತು 9 ಸಹೋದರಿಯರು . ಥಾಪಾ ಅವರು ತಮ್ಮ ಪುತ್ರರಿಂದ 56 ಮೊಮ್ಮಕ್ಕಳನ್ನು ಹೊಂದಿದ್ದರು. ಅವರ ಹೆಣ್ಣು ಮೊಮ್ಮಕ್ಕಳ ಬಗ್ಗೆ ನಮಗೆ ತಿಳಿದಿಲ್ಲ. ಈ ಚುನಾವಣೆಯಲ್ಲಿ ನೇಪಾಳಿ ಪಾಮ್‌ನಲ್ಲಿ ಥಾಪಾ ಕುಟುಂಬದ ಸುಮಾರು 350 ಸದಸ್ಯರು ಮತ ಚಲಾಯಿಸಲು ಅರ್ಹರಾಗಿದ್ದೇವೆ. ನಮ್ಮ ಕುಟುಂಬದಲ್ಲಿ ಸುಮಾರು 1,200 ಕ್ಕೂ ಹೆಚ್ಚು ಸದಸ್ಯರಿದ್ದೇವೆ ಎಂದು ಟಿಲ್ ಬಹದ್ದೂರ್ ಕುಟುಂಬದ ಬಗ್ಗೆ ವಿವರಣೆ ನೀಡಿದ್ದಾರೆ.
ಉನ್ನತ ಶಿಕ್ಷಣ ಪಡೆದರೂ ಸಿಕ್ಕಿಲ್ಲ ಸರ್ಕಾರಿ ನೌಕರಿ: ಆದರೆ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಲ್ಯಾಣ ಯೋಜನೆಗಳ ಲಾಭವನ್ನು ನಮ್ಮ ಕುಟುಂಬಕ್ಕೆ ಇನ್ನೂ ಪಡೆಯಲು ಸಾಧ್ಯವಾಗಿಲ್ಲ ಎಂದು ಇದೇ ವೇಳೆ ಟಿಲ್ ಬಹದ್ದೂರ್ ಬೇಸರ ಸಹ ವ್ಯಕ್ತಪಡಿಸಿದ್ದಾರೆ. ನಮ್ಮ ಮಕ್ಕಳು ಉನ್ನತ ಶಿಕ್ಷಣ ಪಡೆದಿದ್ದಾರೆ. ಆದರೆ ಯಾವುದೇ ಸರ್ಕಾರಿ ಕೆಲಸ ಸಿಕ್ಕಿಲ್ಲ. ನಮ್ಮ ಕುಟುಂಬದ ಕೆಲವರು ಬೆಂಗಳೂರಿಗೆ ಹೋಗಿ ಖಾಸಗಿ ಉದ್ಯೋಗಗಳನ್ನು ಮಾಡುತ್ತಿದ್ದಾರೆ. ಕೆಲವರು ದಿನಗೂಲಿ ಕೆಲಸ ಮಾಡುತ್ತಿದ್ದಾರೆ. ನಾನು 1989 ರಿಂದ ಗ್ರಾಮ ಪ್ರಧಾನನಾಗಿ ಕೆಲಸ ಮಾಡುತ್ತಿದ್ದೇನೆ. ನನಗೆ 8 ಮಕ್ಕಳಿದ್ದಾರೆ. ಐವರು ಪುತ್ರರು ಮತ್ತು 3 ಹೆಣ್ಣುಮಕ್ಕಳು ಇದ್ದಾರೆ ಎಂದು ಟಿಲ್ ಬಹದ್ದೂರ್ ಮಾಹಿತಿ ನೀಡಿದ್ದಾರೆ.
ನಮ್ಮ ತಂದೆ ಸರ್ಕಾರದ ಯಾವುದೇ ಸಹಾಯ ಇಲ್ಲದೇ, 12 ಗಂಡು ಮತ್ತು 9 ಹೆಣ್ಣು ಮಕ್ಕಳನ್ನು ಬೆಳೆಸಿದರು ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ ಟಿಲ್ ಥಾಪಾ. ದಿವಂಗತ ರಾನ್ ಬಹದ್ದೂರ್ ಅವರ ಇನ್ನೊಬ್ಬ ಪುತ್ರ ಸರ್ಕಿ ಬಹದ್ದೂರ್ ಥಾಪಾ, ಕುಟುಂಬದಲ್ಲಿ ಸುಮಾರು 1200 ಸದಸ್ಯರಿದ್ದಾರೆ ಎಂದು ಖಚಿತ ಪಡಿಸಿದ್ದಾರೆ. ನಮ್ಮದು ದೊಡ್ಡ ಕುಟುಂಬ, ಅದರಲ್ಲಿ ಸುಮಾರು 350 ಸದಸ್ಯರು ಮತದಾನದ ಹಕ್ಕು ಹೊಂದಿದ್ದಾರೆ ಎಂದು ಸರ್ಕಿ ಬಹದ್ದೂರ್ ಥಾಪಾ ಹೇಳಿದ್ದಾರೆ.
ರಾನ್ ಬಹದ್ದೂರ್ 1997 ರಲ್ಲಿ ನಿಧನರಾಗಿದ್ದಾರೆ. ಈಗ 64 ವರ್ಷದ ಸರ್ಕಿ ಬಹದ್ದೂರ್ ಥಾಪಾ ಅವರಿಗೆ ಮೂವರು ಪತ್ನಿಯರು ಮತ್ತು 12 ಮಕ್ಕಳಿದ್ದಾರೆ. 9 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಸೋನಿತ್‌ಪುರ ಲೋಕಸಭಾ ಕ್ಷೇತ್ರದಲ್ಲಿ 16.25 ಲಕ್ಷಕ್ಕೂ ಅಧಿಕ ಮತದಾರರಿದ್ದಾರೆ. ಅಸ್ಸಾಂನ 14 ಲೋಕಸಭಾ ಕ್ಷೇತ್ರಗಳಿಗೆ ಮೂರು ಹಂತಗಳಲ್ಲಿ ಅಂದರೆ, ಏಪ್ರಿಲ್ 19, ಏಪ್ರಿಲ್ 26 ಮತ್ತು ಮೇ 7 ರಂದು ಮತದಾನ ನಡೆಯಲಿದೆ.