ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷವು 45 ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿತು. ವಾರಣಾಸಿ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಉತ್ತರ ಪ್ರದೇಶ ಕಾಂಗ್ರೆಸ್ ಘಟಕದ ಮುಖ್ಯಸ್ಥ ಅಜಯ್ ರೈ ಎದುರಿಸಲಿದ್ದಾರೆ.
ಇನ್ನುಳಿದಂತೆ, ಮಧ್ಯಪ್ರದೇಶದ ರಾಜ್‌ಗಢ ಕ್ಷೇತ್ರದಿಂದ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅಭ್ಯರ್ಥಿಯಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಉಧಂಪುರ ಕ್ಷೇತ್ರದಿಂದ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ವಿರುದ್ಧ ಪಕ್ಷಕ್ಕೆ ಹೊಸದಾಗಿ ಸೇರ್ಪಡೆಗೊಂಡ ನಾಯಕ ಲಾಲ್ ಸಿಂಗ್ ಅವರನ್ನು ಕಣಕ್ಕಿಳಿಸಲಾಗಿದೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ಶಾಸಕ ವಿಕಾಸ್ ಠಾಕ್ರೆ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಎದುರಿಸಲಿದ್ದಾರೆ.
ಮಧ್ಯಪ್ರದೇಶದ 12, ಉತ್ತರ ಪ್ರದೇಶದ 9, ತಮಿಳುನಾಡಿನ 7, ಮಹಾರಾಷ್ಟ್ರದ 4, ಉತ್ತರಾಖಂಡ, ರಾಜಸ್ಥಾನ, ಮಣಿಪುರ ಮತ್ತು ಜಮ್ಮು ಮತ್ತು ಕಾಶ್ಮೀರದ ತಲಾ ಎರಡು ಕ್ಷೇತ್ರಗಳು ಮತ್ತು ಪಶ್ಚಿಮ ಬಂಗಾಳ, ಅಸ್ಸಾಂ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಮಿಜೋರಾಂ ಮತ್ತು ಛತ್ತೀಸ್ಗಢದ ತಲಾ ಒಂದು ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನು ಘೋಷಿಸಲಾಗಿದೆ.
ಹನುಮಾನ್ ಬೇನಿವಾಲ್ ನೇತೃತ್ವದ ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷಕ್ಕೆ (ಆರ್‌ಎಲ್‌ಪಿ) ರಾಜಸ್ಥಾನದ ನಾಗೌರ್ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ಬಿಟ್ಟುಕೊಟ್ಟಿದೆ. ಮರುಭೂಮಿ ರಾಜ್ಯದಲ್ಲಿ ಕಾಂಗ್ರೆಸ್ ತನ್ನ ಸ್ಥಾನಗಳನ್ನು ಹೆಚ್ಚಿಸಲು ತವಕಿಸುತ್ತಿರುವ ಕಾರಣ ಆರ್ಎಲ್ಪಿಯೊಂದಿಗಿನ ಮೈತ್ರಿ ಮಹತ್ವದ್ದಾಗಿದೆ. ಅಲ್ಲಿ ಕಾಂಗ್ರೆಸ್ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿತ್ತು. 2019ರ ಲೋಕಸಭೆ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನವನ್ನೂ ಗೆಲ್ಲಲಿಲ್ಲ.
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಸ್ಪರ್ಧೆ ಹೇಗಿದೆ?: ಉತ್ತರ ಪ್ರದೇಶದಲ್ಲಿ ಜಾಟ್ ಸಮುದಾಯದ ಬೆಂಬಲವಿರುವ ಬೇನಿವಾಲ್ ಜೊತೆಗಿನ ಮೈತ್ರಿಯೊಂದಿಗೆ ತನ್ನ ಬೆಂಬಲ ವಿಸ್ತರಿಸಲು ಕೈ ಪಕ್ಷ ಎದುರು ನೋಡುತ್ತಿದೆ. ಸಮಾಜವಾದಿ ಪಕ್ಷದ (ಎಸ್‌ಪಿ) ಜೊತೆ ಮೈತ್ರಿ ಮಾಡಿಕೊಂಡಿದ್ದು, 9 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸುತ್ತಿದೆ. ವಾರಣಾಸಿಯಿಂದ ರಾಯ್, ಅಮ್ರೋಹಾದಿಂದ ಡ್ಯಾನಿಶ್ ಅಲಿ, ಸಹರಾನ್‌ಪುರದಿಂದ ಇಮ್ರಾನ್ ಮಸೂದ್ ಮತ್ತು ಕಾನ್ಪುರದಿಂದ ಅಲೋಕ್ ಮಿಶ್ರಾ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ.
ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಕ್ರಮವಾಗಿ ಅಮೇಥಿ ಮತ್ತು ರಾಯ್ಬರೇಲಿಯಿಂದ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆಯೇ ಎಂಬ ಸಸ್ಪೆನ್ಸ್ ಮುಂದುವರೆದಿದೆ. ರಾಹುಲ್ ಕೇರಳದ ವಯನಾಡ್‌ನ ಘೋಷಿತ ಕ್ಷೇತ್ರವಲ್ಲದೇ ಅಮೇಥಿಯಿಂದ ಹಾಗೂ ಈ ಹಿಂದೆ ಅವರ ತಾಯಿ ಸೋನಿಯಾ ಗಾಂಧಿಯವರು ಸ್ಪರ್ಧೆ ಮಾಡುತ್ತಿದ್ದ ರಾಯ್ಬರೇಲಿಯಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಬಹುದು ಎಂಬ ಊಹಾಪೋಹವಿದೆ.
2014 ಮತ್ತು 2019ರ ನಂತರದ ಸಾರ್ವತ್ರಿಕ ಚುನಾವಣೆಯಲ್ಲಿ ಮೋದಿ ವಿರುದ್ಧ ಇದು ಅಜಯ್ ರೈ ಅವರ ಮೂರನೇ ನೇರ ಸ್ಪರ್ಧೆಯಾಗಿದೆ. ಎರಡೂ ಬಾರಿಯೂ ಅವರು ದೊಡ್ಡ ಅಂತರದಿಂದ ಸೋತಿದ್ದರು. ಅಮೇಥಿ ಮತ್ತು ರಾಯ್‌ಬರೇಲಿಯನ್ನು ಗಾಂಧಿ ಕುಟುಂಬದ ಭದ್ರಕೋಟೆ ಎಂದೇ ಪರಿಗಣಿಸಲಾಗಿದೆ.
ಫತೇಪುರ್ ಸಿಕ್ರಿಯಿಂದ ರಾಮ್ ನಾಥ್ ಸಿಕರ್ವಾರ್, ಝಾನ್ಸಿಯಿಂದ ಪ್ರದೀಪ್ ಜೈನ್ ಆದಿತ್ಯ, ಬಾರಾಬಂಕಿಯಿಂದ ತನುಜ್ ಪುನಿಯಾ (ಎಸ್‌ಸಿ), ಡಿಯೋರಿಯಾದಿಂದ ಅಖಿಲೇಶ್ ಪ್ರತಾಪ್ ಸಿಂಗ್ ಮತ್ತು ಬನ್ಸ್‌ಗಾಂವ್‌ನಿಂದ (ಎಸ್‌ಸಿ) ಸದನ್ ಪ್ರಸಾದ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ತಮಿಳುನಾಡಿನಲ್ಲಿ ಶಿವಗಂಗೆಯಿಂದ ಕಾರ್ತಿ ಚಿದಂಬರಂ, ವಿರುದುನಗರದಿಂದ ಮಾಣಿಕ್ಕಂ ಠಾಗೋರ್, ಕರೂರ್‌ನಿಂದ ಎಸ್.ಜೋತಿಮಣಿ ಮತ್ತು ಕನ್ಯಾಕುಮಾರಿಯಿಂದ ವಿಜಯ್ ವಸಂತ್ ಅವರನ್ನು ಪಕ್ಷ ಫೈನಲ್ ಮಾಡಿದೆ.
183 ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಫೈನಲ್: ಪಕ್ಷದ ಇತರ ಪ್ರಮುಖ ಅಭ್ಯರ್ಥಿಗಳ ಪಟ್ಟಿಯನ್ನು ಗಮನಿಸುವುದಾದರೆ, ಬಸ್ತಾರ್‌ನಿಂದ (ST) ಕವಾಸಿ ಲಖ್ಮಾ, ಜಮ್ಮುವಿನಿಂದ ರಾಮನ್ ಭಲ್ಲಾ, ಇನ್ನರ್ ಮಣಿಪುರದಿಂದ ಅಂಗೋಮ್ಚಾ ಬಿಮೋಲ್ ಅಕೋಯಿಜಮ್, ಔಟರ್ ಮಣಿಪುರದಿಂದ ಆಲ್ಫ್ರೆಡ್ ಕಂಗಮ್ ಎಸ್ ಆರ್ಥರ್ (ಎಸ್‌ಟಿ), ಜೈಪುರ ಗ್ರಾಮಾಂತರದಿಂದ ಅನಿಲ್ ಚೋಪ್ರಾ, ಕರೌಲಿ ಧೋಲ್‌ಪುರದಿಂದ ಭಜನ್‌ಲಾಲ್ ಜಾತವ್, ಹರಿದ್ವಾರದಿಂದ ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಅವರ ಪುತ್ರ ವೀರೇಂದ್ರ ರಾವತ್ ಮತ್ತು ಕೂಚ್‌ಬೆಹರ್‌ನಿಂದ (SC) ಪಿಯಾ ರಾಯ್ ಚೌಧರಿ ಸ್ಪರ್ಧೆ ಮಾಡಲಿದ್ದಾರೆ. ಇದರೊಂದಿಗೆ ಏಪ್ರಿಲ್ 19ರಿಂದ ಪ್ರಾರಂಭವಾಗುವ ಏಳು ಹಂತದ ಲೋಕಸಭೆ ಚುನಾವಣೆಗೆ ಒಟ್ಟು 183 ಅಭ್ಯರ್ಥಿಗಳ ಹೆಸರನ್ನು ಅಖೈರುಗೊಳಿಸಲಾಗಿದೆ.
ಇದನ್ನೂ ಓದಿ: ಇಡಿ ಕಸ್ಟಡಿಯಿಂದಲೇ ಪತ್ರ ಬರೆದ ಕೇಜ್ರಿವಾಲ್: ಈ ಸಂದೇಶ ಜನರಿಗೆ ಮುಟ್ಟಿಸಿದ ಪತ್ನಿ ಸುನಿತಾ - Sunita kejriwal Press meet