ನವದೆಹಲಿ: ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆಯಂಥ ಅಕ್ರಮಗಳನ್ನು ತಡೆಯಲು ಕೇಂದ್ರ ಸರ್ಕಾರ ಕಠಿಣ ಕಾನೂನು ಜಾರಿಗೆ ಮುಂದಾಗಿದೆ. ಸಾರ್ವಜನಿಕ ಪರೀಕ್ಷೆ (ಅನ್ಯಾಯದ ವಿಧಾನಗಳ ತಡೆಗಟ್ಟುವಿಕೆ) ಮಸೂದೆಯನ್ನು ಮಂಗಳವಾರ ಲೋಕಸಭೆ ಅಂಗೀಕರಿಸಿತು. ಇದು ಕಾಯ್ದೆ ರೂಪ ಪಡೆದಲ್ಲಿ, ಅಕ್ರಮಗಳಲ್ಲಿ ತೊಡಗಿದವರಿಗೆ ಕನಿಷ್ಠ 3 ವರ್ಷಗಳ ಜೈಲು ಶಿಕ್ಷೆ ಮತ್ತು 1 ಕೋಟಿ ರೂಪಾಯಿ ದಂಡವನ್ನೂ ವಿಧಿಸಬಹುದು.
ಕೇಂದ್ರ ಸಿಬ್ಬಂದಿ ಸಚಿವಾಲಯದ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಸೋಮವಾರ ಸಾರ್ವಜನಿಕ ಪರೀಕ್ಷೆ (ಅನ್ಯಾಯದ ವಿಧಾನಗಳ ತಡೆಗಟ್ಟುವಿಕೆ)-2024 ಮಸೂದೆಯನ್ನು ಸದನದಲ್ಲಿ ಮಂಡಿಸಿದ್ದರು. ಮಂಗಳವಾರ ವಿಧೇಯಕದ ಮೇಲೆ ಚರ್ಚೆ ನಡೆಯಿತು. ಪ್ರತಿಪಕ್ಷಗಳ ಸದಸ್ಯರು ಕೆಲವು ತಿದ್ದುಪಡಿಗಳನ್ನು ಮಾಡುವಂತೆ ಪ್ರಸ್ತಾಪಿಸಿದರು. ಆದರೆ, ಇವುಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ ಮಸೂದೆಗೆ ಸದನ ಅನುಮೋದನೆ ನೀಡಿತು.
ಕಠಿಣ ಕ್ರಮಗಳೇನು?: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ), ಸಿಬ್ಬಂದಿ ನೇಮಕ ಆಯೋಗ (ಎಸ್ಎಸ್ಸಿ), ರೈಲ್ವೆ ಇಲಾಖೆ, ಬ್ಯಾಂಕಿಂಗ್ ವಲಯದ ನೇಮಕಾತಿ ಪರೀಕ್ಷೆಗಳು ಮತ್ತು ರಾಷ್ಟ್ರೀಯ ಪರೀಕ್ಷೆ ಸಂಸ್ಥೆ (ಎನ್ಟಿಎ) ನಡೆಸುವ ಎಲ್ಲ ಕಂಪ್ಯೂಟರ್ ಆಧರಿತ ಪರೀಕ್ಷೆಗಳಿಗೆ ಈ ವಿಧೇಯಕ ಅನ್ವಯಿಸಲಿದೆ. ಇದರ ಪ್ರಕಾರ, ಪರೀಕ್ಷಾ ವಂಚನೆ ಸಾಬೀತಾದಲ್ಲಿ ಅಪರಾಧಿಯನ್ನು ಕನಿಷ್ಠ 3ರಿಂದ 5 ವರ್ಷ ಜೈಲಿಗೆ ಹಾಕಬಹುದು. ಸಂಘಟಿತ ಅಕ್ರಮಗಳಲ್ಲಿ ಭಾಗಿಯಾಗಿರುವವರಿಗೆ 5ರಿಂದ 10 ವರ್ಷ ಜೈಲು ಶಿಕ್ಷೆ ಹಾಗೂ ಕನಿಷ್ಠ 1 ಕೋಟಿ ರೂ. ದಂಡ ವಿಧಿಸಬಹುದು.
ಸಾರ್ವಜನಿಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಮತ್ತು ಕೀ ಉತ್ತರಗಳ ಸೋರಿಕೆ, ಯಾವುದೇ ರೀತಿಯಲ್ಲಿ ಅನಧಿಕೃತವಾಗಿ ಅಭ್ಯರ್ಥಿಗಳಿಗೆ ಪ್ರತ್ಯಕ್ಷ, ಪರೋಕ್ಷವಾಗಿ ನೆರವಾಗುವ, ಕಂಪ್ಯೂಟರ್ ನೆಟ್ವರ್ಕ್, ಕಂಪ್ಯೂಟರ್ ಸಂಪನ್ಮೂಲ, ಕಂಪ್ಯೂಟರ್ ವ್ಯವಸ್ಥೆಯನ್ನು ತಿರುಚುವ ವ್ಯಕ್ತಿ, ಗುಂಪಿನ ವಿರುದ್ಧ ಕ್ರಮ ಜರುಗಿಸಬಹುದು. ಈ ವಿಧೇಯಕವು ಹಣದ ಲಾಭಕ್ಕಾಗಿ ಅನ್ಯಾಯದ ವಿಧಾನಗಳಲ್ಲಿ ತೊಡಗಿರುವ ಸಂಘಟಿತ ಗುಂಪು ಮತ್ತು ಸಂಸ್ಥೆಗಳನ್ನು ನಿಯಂತ್ರಿಸುವ ಗುರಿ ಹೊಂದಿದೆ. ಆದರೆ, ಇದರ ನಿಬಂಧನೆಗಳು ಅಭ್ಯರ್ಥಿಗಳಿಗೆ ರಕ್ಷಣೆ ನೀಡುತ್ತೇವೆ ಎಂದು ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
ಕಳೆದ ಕೆಲವು ವರ್ಷಗಳಲ್ಲಿ ಪ್ರಶ್ನೆಪತ್ರಿಕೆಗಳ ಸೋರಿಕೆ, ಸಾಮೂಹಿಕ ವಂಚನೆಗಳಿಂದ ಪರೀಕ್ಷೆಗಳು ಸ್ಥಗಿತಗೊಳ್ಳುವ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಈ ಅನ್ಯಾಯದ ಚಟುವಟಿಕೆಗಳ ಪರಿಣಾಮಕಾರಿಯಾಗಿ ತಡೆಗಟ್ಟದಿದ್ದರೆ ಮತ್ತು ತಡೆಯದಿದ್ದರೆ, ದೇಶದ ಲಕ್ಷಾಂತರ ಮಹತ್ವಾಕಾಂಕ್ಷಿ ಯುವಕರ ಭವಿಷ್ಯ ಮತ್ತು ವೃತ್ತಿಜೀವನವನ್ನು ಅಪಾಯಕ್ಕೆ ತಳ್ಳಿದತಾಗುತ್ತದೆ ಎಂದು ಸಚಿವರು ಕಳವಳ ವ್ಯಕ್ತಪಡಿಸಿದರು.
ತಾಂತ್ರಿಕ ಸಮಿತಿ ರಚನೆಗೆ ಅವಕಾಶ: ಈಗ ಹಲವು ಪರೀಕ್ಷೆಗಳು ಆನ್‌ಲೈನ್‌ನಲ್ಲಿ ನಡೆಯುತ್ತಿವೆ. ಸಾರ್ವಜನಿಕ ಪರೀಕ್ಷೆಗಳ ನಿರ್ವಹಣೆಯಲ್ಲಿ ತಂತ್ರಜ್ಞಾನದ ಪಾತ್ರ ಹೆಚ್ಚು. ಈ ಹಿನ್ನೆಲೆಯಲ್ಲಿ ಉನ್ನತ ಮಟ್ಟದ ರಾಷ್ಟ್ರೀಯ ತಾಂತ್ರಿಕ ಸಮಿತಿಯನ್ನೂ ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. ಈ ಸಮಿತಿಯು ಡಿಜಿಟಲ್ ವೇದಿಕೆಗಳನ್ನು ಇನ್ಸುಲೇಟಿಂಗ್ ಮಾಡಲು ಪ್ರೋಟೋಕಾಲ್, ಮಾಹಿತಿ ತಂತ್ರಜ್ಞಾನ (ಐಟಿ) ಭದ್ರತಾ ಕ್ರಮಗಳನ್ನು ರೂಪಿಸುತ್ತದೆ. ಪರೀಕ್ಷಾ ಕೇಂದ್ರಗಳ ಸಮಗ್ರ ವಿದ್ಯುನ್ಮಾನ ಕಣ್ಗಾವಲು ಖಾತರಿಪಡಿಸುತ್ತದೆ ಎಂದು ಜಿತೇಂದ್ರ ಸಿಂಗ್ ಮಾಹಿತಿ ನೀಡಿದ್ದಾರೆ.
ಕೇಂದ್ರ ಸರ್ಕಾರದ ಸಚಿವಾಲಯಗಳು ಅಥವಾ ಇಲಾಖೆಗಳು ಮತ್ತು ಅವುಗಳ ಸಂಬಂಧಿಸಿದ ಹಾಗೂ ಅಧೀನ ಕಚೇರಿಗಳ ಸಿಬ್ಬಂದಿ ನೇಮಕಾತಿಗಾಗಿ ಮತ್ತು ಸರ್ಕಾರಿ ಉದ್ಯೋಗ ನೇಮಕಾತಿಯನ್ನು ನಡೆಸಲು ಕೇಂದ್ರ ಸರ್ಕಾರವು ಸೂಚಿಸಬಹುದಾದ ಪ್ರಾಧಿಕಾರ ರಚನೆಯ ಅವಕಾಶವನ್ನೂ ಈ ವಿಧೇಯಕ ಹೊಂದಿದೆ. ಈ ನಿಬಂಧನೆಗಳು ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್), ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಮತ್ತು ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ (ಸಿಯುಇಟಿ)ಯಂತಹ ಪ್ರವೇಶ ಪರೀಕ್ಷೆಗಳಿಗೆ ಅನ್ವಯವಾಗಲಿದೆ ಎಂದು ಅವರು ವಿವರಿಸಿದರು.
ಇದನ್ನೂ ಓದಿ: ಉತ್ತರಾಖಂಡ ಯುಸಿಸಿ ಮಸೂದೆ: ಸಹಜೀವನಕ್ಕೆ ಹೆತ್ತವರ ಒಪ್ಪಿಗೆ ಕಡ್ಡಾಯ, ನೋಂದಣಿಯೂ ಅಗತ್ಯ