ಬಲ್ಲಿಯಾ (ಉತ್ತರ ಪ್ರದೇಶ): ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಆಸೆ ಹೊಂದಿರುವ ಬಲ್ಲಿಯಾ ಜಿಲ್ಲೆಯ ರೈತನೊಬ್ಬ, ಠೇವಣಿ ಕಟ್ಟಲು ತನ್ನ ಬಳಿ ಹಣವಿಲ್ಲದ ಕಾರಣ ಧಾನ್ಯ ಮತ್ತು ಒಣ ಸೊಪ್ಪಿನೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ್ದಾನೆ. ಈ ದವಸ-ಧಾನ್ಯ ಮತ್ತು ಸೊಪ್ಪಿನ ಹೊರೆಯನ್ನು ಖರೀದಿ ಮಾಡುವಂತೆ ಅಧಿಕಾರಿಗಳಿಗೆ ವಿಚಿತ್ರ ಮನವಿ ಮಾಡಿದ್ದು, ಇದರಿಂದ ಬರುವ ಹಣವನ್ನು ಚುನಾವಣೆಗೆ ಠೇವಣಿಯಾಗಿ ಇಡುವುದಾಗಿ ಆತ ಹೇಳಿಕೊಂಡಿದ್ದಾರೆ.
ಪಟ್‌ಖೌಲಿ ಗ್ರಾಮದ ನವೀನ್ ಕುಮಾರ್ ರೈ ಎಂಬುವವರೇ ಈ ವಿಚಿತ್ರ ಮನವಿಯೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ತಲುಪಿರುವ ರೈತ. ಒಣಹುಲ್ಲಿನ ಹೊರೆ ಮತ್ತು ಧಾನ್ಯ ತುಂಬಿದ ಚೀಲಗಳನ್ನು ತಮ್ಮ ತಲೆಯ ಮೇಲೆ ಹೊತ್ತು ಕಚೇರಿಗೆ ಆಗಮಿಸಿ ಆತ ಅಚ್ಚರಿ ಮೂಡಿಸಿದ್ದಾರೆ. ಈ ವೇಳೆ ಅಧಿಕಾರಿಗಳ ಬಳಿ ತೆರಳಿದ ರೈತ ನವೀನ್ ಕುಮಾರ್ ರೈ ಇವುಗಳನ್ನು ಖರೀದಿಸಿ ತಮಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡುವಂತೆಯೂ ಕೇಳಿಕೊಂಡಿದ್ದಾರೆ. ಜೊತೆಗೆ ತಾವು ತಂದ ವಿಚಿತ್ರ ಅರ್ಜಿಯನ್ನು ಸಹ ಅವರ ಮುಂದೆ ಇಟ್ಟಿದ್ದಾರೆ. ಅರ್ಜಿಯಲ್ಲಿ ಉಲ್ಲೇಖಗೊಂಡ ಮಾಹಿತಿ ಕಂಡು ಚುನಾವಣಾಧಿಕಾರಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ತಾನೋರ್ವ ಅನಕ್ಷರಸ್ಥ ರೈತ, ಎಲ್ಲರೂ ರೈತರ ಹೆಸರಿನಲ್ಲಿ ಚುನಾವಣೆಗೆ ನಿಲ್ಲುತ್ತಾರೆ, ನಾನು ಸಹ ಚುನಾವಣೆಗೆ ಸ್ಪರ್ಧೆ ಮಾಡುವ ಆಸೆ ಹೊಂದಿರುವೆ. ಆದರೆ, ತಮ್ಮ ಬಳಿ ಚುನಾವಣೆಗೆ ಠೇವಣಿ ಕಟ್ಟಲು ಹಣ ಇಲ್ಲ. ಆದರೆ, ನನ್ನ ಬಳಿ ಸಾಕಷ್ಟು ಧಾನ್ಯ ಮತ್ತು ಒಣ ಸೊಪ್ಪು ಇದ್ದು, ಇವುಗಳನ್ನು ಖರೀದಿಸಿ. ಅದರಿಂದ ಬಂದ ಹಣದಿಂದ ಚುನಾವಣೆಗೆ ಸ್ಪರ್ಧಿಸುವೆ, ನಾಮಪತ್ರ ಸಲ್ಲಿಸುವಾಗ ನಾನು ನನ್ನ ಹಸುಗಳೊಂದಿಗೆ ಬರುವೆ, ತನ್ನ ಹಸುಗಳೇ ನನ್ನ ಬೆಂಬಲಿಗರು, ಬಿಡಾಡಿ ದನಗಳ ಪರ ನಾನು ಕೆಲಸ ಮಾಡುವೆ ಎಂದು ಅರ್ಜಿಯಲ್ಲಿ ತಮ್ಮ ಮನದ ಇಂಗಿತ ವ್ಯಕ್ತಪಡಿಸಿದ್ದಾರೆ. ರೈತನ ವಿಚಿತ್ರ ಮನವಿಗೆ ಚುನಾವಣಾಧಿಕಾರಿಗಳು ಮುಗುಳ್ನಗುವಿನ ಜೊತೆಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಒಣಹುಲ್ಲಿನ ಹೊರೆ ಮತ್ತು ಧಾನ್ಯ ತುಂಬಿದ ಚೀಲಗಳೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದಿದ್ದಲ್ಲದೇ ಎಲ್ಲರಂತೆ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದ ಚುನಾವಣಾಧಿಕಾರಿ ರವೀಂದ್ರಕುಮಾರ್, ರೈತನ ಆಗಮನ ಕಂಡು ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿಗೆ ತಡೆಯಲು ತಿಳಿಸಿ, ಆ ಬಳಿಕ ಬರಲು ಹೇಳಿದ್ದಾರೆ. ಅವರ ಸೂಚನೆಯಂತೆ ನೇರವಾಗಿ ಚುನಾವಣಾಧಿಕಾರಿ ಬಳಿಗೆ ತೆರಳಿದ ನವೀನ್ ಕುಮಾರ್, ತಾವು ತಂದ ಈ ಅರ್ಜಿ ಪತ್ರ ತೋರಿಸಿದರು. ಅರ್ಜಿಯಲ್ಲಿ ಗೋವುಗಳಿಗಾಗಿ ಕೆಲಸ ಮಾಡಬೇಕೆಂದು ಬರೆದದ್ದು ಕಂಡು ಮುಗುಳ್ನಕ್ಕ ಚುನಾವಣಾಧಿಕಾರಿ, ಬಳಿಕ ಅವರನ್ನು ಕಳಿಸಿಕೊಟ್ಟರು.