ನವದೆಹಲಿ: ರಾಷ್ಟ್ರ ರಾಜಧಾನಿ ದಾಖಲೆ ಮಟ್ಟದ ಶಾಖದ ತಾಪಮಾನಕ್ಕೆ ಸಾಕ್ಷಿಯಾಗಿದೆ. ನಗರದ ನಜಫ್ಗರ್, ನರೆಲಾ ಮತ್ತು ಮಂಗೇಶ್ಪುರ್ನ ರಾಜಧಾನಿಯಲ್ಲಿ ಇದೇ ಮೊದಲ ಬಾರಿಗೆ 50 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ನರೇಲಾ ಮತ್ತು ಮಂಗೇಶ್ಪುರದಲ್ಲಿ 49.9 ಡಿಗ್ರಿ ತಾಪಮಾನ ದಾಖಲಾದರೆ, ನಜಫ್ಗರ್ನಲ್ಲಿ 49.5 ಡಿಗ್ರಿ ತಾಪಮಾನ ದಾಖಲಾಗಿದೆ. ಹವಾಮಾನ ಇಲಾಖೆ ಪ್ರಕಾರ, ದೆಹಲಿಯಲ್ಲಿ ಇದೇ ಮೊದಲ ಬಾರಿಗೆ ಗರಿಷ್ಠ ತಾಪಮಾನ ದಾಖಲಾಗಿದೆ. ಈ ಹಿನ್ನೆಲೆ ಬಿಸಿಲಿನಿಂದ ರಕ್ಷಣೆ ಪಡೆಯುವ ಉದ್ದೇಶದಿಂದ ದೆಹಲಿ ಲೆಫ್ಟಿನೆಂಟ್ ಗವರ್ನರ್ ಮಹತ್ವದ ಆದೇಶ ಹೊರಡಿಸಿದ್ದಾರೆ.
ಬಿಸಿಲಿನ ಝಳ ಹೆಚ್ಚಿರುವ ಹಿನ್ನೆಲೆ ಶಾಖದಿಂದ ತಪ್ಪಿಸಿಕೊಳ್ಳುವ ಮೂಲಕ ಜನರು ಆರೋಗ್ಯ ರಕ್ಷಣೆಗೆ ಮುಂದಾಗಬೇಕಿದೆ. ಈ ಹಿನ್ನೆಲೆ ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಕಾರ್ಮಿಕರರು ಮತ್ತು ಕೆಲಸಗಾರರಿಗೆ ವೇತನ ಸಹಿತ ರಜೆ ಘೋಷಣೆ ಮಾಡಿದ್ದಾರೆ. ಹೆಚ್ಚುತ್ತಿರುವ ಶಾಖದ ತಾಪಮಾನದ ಹಿನ್ನೆಲೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅಥವಾ ಅವರ ಸಚಿವರುಗಳು ಬೇಸಿಗೆ ಶಾಖದ ಕಾರ್ಯಾಚರಣೆ ಯೋಜನೆ ರೂಪಿಸಿಲ್ಲ ಎಂದು ಲೆ. ಗವರ್ನರ್ ಟೀಕಿಸಿದ್ದಾರೆ.
ಶಾಖದ ಅಲೆ ಹೆಚ್ಚುತ್ತಿದ್ದು, ಮಧ್ಯಾಹ್ನದ ಬಿಸಿಲು ಕಾದ ಕೆಂಡಂತಿರುತ್ತದೆ. ಈ ಸಮಯದಲ್ಲಿ ಆರೋಗ್ಯ ಸಂಬಂಧಿ ಸಮಸ್ಯೆಗಳು ಹೆಚ್ಚುವ ಸಾಧ್ಯತೆ ಇದೆ. ಹೀಗಾಗಿ ಮೇ 20ರಿಂದಲೇ ಜಾರಿಗೆ ಬರುವಂತೆ ಕಾರ್ಮಿಕರಿಗೆ ಡಿಡಿಎ ಸಮೇತ ಮಧ್ಯಾಹ್ನದ ರಜೆ ನೀಡಬೇಕು. ದೆಹಲಿ ಸರ್ಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ದೆಹಲಿ ಜಲ ಮಂಡಳಿ, ಪಿಡಬ್ಲ್ಯೂಡಿ, ಮುನ್ಸಿಪಲ್ ಕಾರ್ಪೊರೇಷನ್ ಕೂಡ ಬಿಸಿಲಿನ ವಿರುದ್ಧ ಅಗತ್ಯ ರಕ್ಷಣಾ ಕ್ರಮಕ್ಕೆ ಮುಂದಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಲೆ. ಗರ್ವನರ್ ಆದೇಶದ ಮುಖ್ಯಾಂಶಗಳು
- ಶಾಖದ ಅಲೆಯಿಂದ ಬಡ ಕಾರ್ಮಿಕರ ರಕ್ಷಣೆಗೆ ನೆರಳು ಅಥವಾ ತಂಪು ವ್ಯವಸ್ಥೆಯನ್ನು ಮಾಡಬೇಕಿದೆ.
- ಸೂಪರ್ವೈಸರ್ ಮತ್ತು ಕಾರ್ಮಿಕರಿಗೆ ಮಧ್ಯಾಹ್ನ 13 ರಿಂದ 3 ಗಂಟೆವರೆಗೆ ಡಿಡಿಎ ಸಮೇತ ರಜೆ ನೀಡಬೇಕು.
- ನಿರ್ಜಲೀಕರಣದಿಂದ ಬಳಲದಂತೆ ನೀರು, ಎಳನೀರು ಸೇರಿದಂತೆ ಅಗತ್ಯ ಸಿದ್ಧತೆ ಮಾಡಬೇಕು.
- ಪಿಡಬ್ಲೂಡಿ, ಡಿಜೆಪಿ, ಐಅಂಡ್ಎಫ್ಇ, ಎಂಸಿಡಿ, ಎನ್ಡಿಎಂಸಿ, ವಿದ್ಯುತ್ ಇಲಾಖೆ, ಡಿಯುಎಸ್ಐಬಿ ಸೇರಿದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಲೆಫ್ಟಿನೆಂಟ್ ಗವರ್ನರ್ ನಿರ್ದೇಶಿಸಿದ್ದಾರೆ. ಇದರ ಹೊರತಾಗಿ, ಮಡಿಕೆ ಮೂಲಕ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದಾರೆ.
- ಬಸ್ ನಿಲ್ದಾಣದಲ್ಲೂ ನೀರಿನ ವ್ಯವಸ್ಥೆ ಮಾಡಬೇಕು. ಪ್ರಯಾಣಿಕರು ಮತ್ತು ಪಾದಚಾರಿಗಳಿಗೆ ಆಶ್ರಯ ವ್ಯವಸ್ಥೆ ನಿರ್ಮಿಸುವಂತೆ ಸೂಚಿಸಿದ್ದಾರೆ.
- ಎಸ್ಟಿಪಿ ನೀರನ್ನು ರಸ್ತೆಗಳಿಗೆ ಸಿಂಪಡಣೆಗೆ ಬಳಕೆ ಮಾಡುವಂತೆ ಸೂಚಿಸಿದ್ದಾರೆ.
ಅತಿ ಹೆಚ್ಚು ತಾಪಮಾನ ದಾಖಲಾಗಿರುವ ದೆಹಲಿಯ ಮೂರು ಪ್ರದೇಶಗಳು ಹೊರವಲಯದಲ್ಲಿದ್ದು, ಇಲ್ಲಿ ಹೆಚ್ಚು ತೆರೆದ ಸ್ಥಳ, ಹೆಚ್ಚಿನ ಜನಸಂಖ್ಯೆ, ಕೈಗಾರಿಕೆಗಳನ್ನು ಕಾಣಬಹುದು. ಇದು ಕೂಡ ಅತಿ ಹೆಚ್ಚಿನ ತಾಪಮಾನಕ್ಕೆ ಕಾರಣವಾಗಿದೆ. ಪಾಕಿಸ್ತಾನ ಮತ್ತು ರಾಜಸ್ಥಾನ ಕಡೆಯಿಂದ ಬಿಸಿ ಗಾಳಿ ಬರುತ್ತಿದ್ದು, ತಾಪಮಾನ ಗರಿಷ್ಠ ಮಟ್ಟದಲ್ಲಿದೆ.
ಇದನ್ನೂ ಓದಿ: ಪ.ಬಂಗಾಳ, ಈಶಾನ್ಯ ರಾಜ್ಯಗಳಲ್ಲಿ ಮಳೆ ಅಬ್ಬರ; ಉತ್ತರ ಭಾರತದಲ್ಲಿ ಬಿಸಿಲ ಝಳ