ನವದೆಹಲಿ: ಪಶ್ಚಿಮಬಂಗಾಳದ ರಾಜಧಾನಿ ಕೋಲ್ಕತ್ತಾದ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸ್ನಾತಕೋತ್ತರ ತರಬೇತಿ ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸಾರ್ವಜನಿಕರ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯರ ಸಂಘವು ಆರೋಪಿಗಳ ವಿರುದ್ಧ 24 ಗಂಟೆಯೊಳಗೆ ಕ್ರಮ ಜರುಗಿಸದಿದ್ದರೆ, ವೈದ್ಯಕೀಯ ಸೇವೆಯನ್ನು ನಿಲ್ಲಿಸುವ ಎಚ್ಚರಿಕೆ ನೀಡಲಾಗಿದೆ.
ವೈದ್ಯೆಯ ಅಮಾನುಷ ಅತ್ಯಾಚಾರ ಮತ್ತು ಹತ್ಯೆಯ ವಿರುದ್ಧ ಪ್ರತಿಭಟನೆಯ ಸಂಕೇತವಾಗಿ ಭಾರತೀಯ ವೈದ್ಯಕೀಯ ಸಂಘವು (ಐಎಂಎ) ದೇಶಾದ್ಯಂತ ವೈದ್ಯರಿಗೆ ಕಪ್ಪು ಪಟ್ಟಿ ಧರಿಸಲು ಶನಿವಾರ ಸೂಚಿಸಿದೆ.
ಕೋಲ್ಕತ್ತಾದ ಆರ್‌ಜಿ ಕರ್ ಸರ್ಕಾರಿ ವೈದ್ಯಕೀಯ ಕಾಲೇಜು ಆಡಳಿಯ ಮಂಡಳಿ ವಿರುದ್ಧ ವೈದ್ಯಕೀಯ ಮಂಡಳಿ ಅನುಮಾನ ವ್ಯಕ್ತಪಡಿಸಿದೆ. ವೈದ್ಯಕೀಯ ಕಾಲೇಜಿನ ಇ-ಸೆಮಿನಾರ್ ಕೊಠಡಿಯಲ್ಲಿ ಕರ್ತವ್ಯ ನಿರತ ವೇಳೆ ವೈದ್ಯೆಯ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಲಾಗಿದೆ. ಕಾಲೇಜಿನಲ್ಲಿ ಭದ್ರತೆ ಹೇಗಿದೆ? ಈ ಕುರಿತು ಸಿಸಿಟಿವಿ ದೃಶ್ಯಾವಳಿಗಳು ಏಕಿಲ್ಲ? ಇಲ್ಲಿಯವರೆಗೆ ಅಪರಾಧಿಗಳ ವಿರುದ್ಧ ಕ್ರಮವಾಗಿಲ್ಲ ಏಕೆ ಎಂದು ಐಎಂಎ ಪ್ರಶ್ನಿಸಿದೆ.
ವೈದ್ಯೆ ವಿದ್ಯಾರ್ಥಿಯ ಕೊಲೆ ಆಘಾತ ತಂದಿದೆ. ಹೀಗಾಗಿ ವೈದ್ಯರು ಒಗ್ಗಟ್ಟು ಪ್ರದರ್ಶಿಸಲು ಇಂದು ಕಪ್ಪು ಪಟ್ಟಿ ಧರಿಸುವಂತೆ ದೇಶಾದ್ಯಂತ ಎಲ್ಲ ವೈದ್ಯರಿಗೆ ಮನವಿ ಮಾಡಿದ್ದೇವೆ ಎಂದು ಐಎಂಎ ಅಧಿಕಾರಿಗಳು ತಿಳಿಸಿದ್ದಾರೆ.
ಫೋರ್ಡಾನಿಂದಲೂ ಒತ್ತಡ: ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಶನ್ ಇಂಡಿಯಾ (ಫೋರ್ಡಾ) ಕೂಡ ವೈದ್ಯೆ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ, ಕೊಲೆ ಕೇಸ್ನಲ್ಲಿ ಅಪರಾಧಿಗಳ ವಿರುದ್ಧ ಶೀಘ್ರ ಕ್ರಮ ಜರುಗಿಸುವಂತೆ ಸಮಯದ ಗಡುವು ನೀಡಿದೆ. 24 ಗಂಟೆಗಳ ಅವಧಿಯಲ್ಲಿ ಅಪರಾಧಿಗಳನ್ನು ಬಂಧಿಸಬೇಕು. ಇಲ್ಲವಾದಲ್ಲಿ ವೈದ್ಯ ಸೇವೆಯನ್ನು ನಿಲ್ಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿದ ಫೋರ್ಡಾ, ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರಿಗೆ ಪತ್ರ ಬರೆದಿದೆ. ಫೋರ್ಡಾ ಅಧ್ಯಕ್ಷ ಅರವಿಂದ್ ಮಾಥುರ್, ಕೊಲೆಯು ಗಂಭೀರವಾಗಿದೆ. ಈ ಘಟನೆಯು ದೇಶಾದ್ಯಂತ ಇರುವ ವೈದ್ಯಕೀಯ ಸಂಸ್ಥೆಗಳಲ್ಲಿ ಭದ್ರತೆಯ ಕೊರತೆ ಎದ್ದು ಕಾಣುತ್ತಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಅವರು ಕೋರಿದ್ದಾರೆ.
ವೈದ್ಯೆ ವಿದ್ಯಾರ್ಥಿಯ ದೇಹದ ಮೇಲೆ ಗಾಯದ ಗುರುತುಗಳಿವೆ. ಆಕೆಯನ್ನು ಕೊಲೆ ಮಾಡುವ ಮೊದಲು ಕಾಮುಕರು ಅತ್ಯಾಚಾರ ಎಸಗಿದ್ದಾರೆ ಎಂದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ದೃಢಪಟ್ಟಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಠಿಣ ಕ್ರಮಕ್ಕೆ ಸಿಎಂ ಮಮತಾ ಆಗ್ರಹ: ಈ ಮಧ್ಯೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿ ನೀಡಿರುವ ಸಿಎಂ ಮಮತಾ ಬ್ಯಾನರ್ಜಿ, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ತಪ್ಪಿತಸ್ಥರಿಗೆ ಮರಣದಂಡನೆ ವಿಧಿಸಬೇಕು. ಪ್ರಕರಣ ಕುರಿತು ಸಿಬಿಐ ಅಥವಾ ಯಾವುದೇ ಏಜೆನ್ಸಿಯಿಂದ ತನಿಖೆ ನಡೆಸಿದರೂ ತಮ್ಮ ತಕರಾರು ಇಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಹಿಳೆಯ ಕಣ್ಣಿನಲ್ಲಿ 60 ಜೀವಂತ ಹುಳುಗಳು! 2 ಗಂಟೆ ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆದ ವೈದ್ಯ - Live Larvae In Womans Eye