ಕೋಲ್ಕತ್ತಾ (ಪಶ್ಚಿಮಬಂಗಾಳ) : ಕೋಲ್ಕತ್ತಾ ವೈದ್ಯೆ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಪ್ರಮುಖ ಬೆಳವಣಿಗೆ ಸಂಭವಿಸಿದ್ದು, ಆಸ್ಪತ್ರೆಯ ಹಲವಾರು ತರಬೇತಿನಿರತ ವೈದ್ಯ ವಿದ್ಯಾರ್ಥಿಗಳು ಮತ್ತು ವೈದ್ಯರು ತಮ್ಮ ಮಗಳ ಸಾವಿಗೆ ಕಾರಣ ಎಂದು ಸಂತ್ರಸ್ತೆಯ ಪೋಷಕರು ಸಿಬಿಐಗೆ ಆರೋಪ ಸಲ್ಲಿಸಿದ್ದಾರೆ. ಅಂದರೆ, ಸಾಮೂಹಿಕ ಅತ್ಯಾಚಾರ ನಡೆದಿರುವ ಬಗ್ಗೆ ಅವರು ಶಂಕಿಸಿದ್ದಾರೆ.
ಕೋಲ್ಕತ್ತಾ ಹೈಕೋರ್ಟ್‌ನ ಆದೇಶದ ಮೇರೆಗೆ ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರೀಯ ಸಂಸ್ಥೆಗೆ ಪೋಷಕರು ತಮ್ಮ ಮಗಳ ಹತ್ಯೆಯಲ್ಲಿ ಭಾಗಿಯಾಗಿರುವ ಶಂಕಿತ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಹೆಸರಿನ ಪಟ್ಟಿಯನ್ನು ನೀಡಿದ್ದಾರೆ. ಹೆಚ್ಚಿನ ಆರೋಪಿಗಳು ಇದರಲ್ಲಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ತಮ್ಮ ಮಗಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಕೊಲೆಯ ಹಿಂದೆ ಅನೇಕ ವ್ಯಕ್ತಿಗಳ ಕೈವಾಡವಿದೆ ಎಂದು ಪೋಷಕರು ಶಂಕಿಸಿದ್ದಾರೆ. ಆಸ್ಪತ್ರೆಯಲ್ಲಿ ಆಕೆಯೊಂದಿಗೆ ಕೆಲಸ ಮಾಡಿದ ಕೆಲವು ತರಬೇತಿ ನಿರತ ವೈದ್ಯ ವಿದ್ಯಾರ್ಥಿಗಳು ಮತ್ತು ವೈದ್ಯರ ಹೆಸರನ್ನು ಸಹ ಅವರು ಹೇಳಿದ್ದಾರೆ. ತನಿಖೆಯ ಭಾಗವಾಗಿದ್ದ ಎಲ್ಲರನ್ನೂ ವಿಚಾರಣೆ ನಡೆಸಲು ಸಿಬಿಐ ಮುಂದಾಗಿದೆ. ಕನಿಷ್ಠ 30 ಶಂಕಿತರನ್ನು ಗುರುತಿಸಿದ್ದೇವೆ. ಅವರನ್ನು ಪ್ರಶ್ನಿಸಲು ಪ್ರಾರಂಭಿಸಿದ್ದೇವೆ" ಎಂದು ಅಧಿಕಾರಿ ಹೇಳಿದ್ದಾರೆ.
ಕೊಲೆಯಾದ ರಾತ್ರಿ ವೈದ್ಯೆಯೊಂದಿಗೆ ಕರ್ತವ್ಯದಲ್ಲಿದ್ದ ಹೋಂ ಗಾರ್ಡ್ ಮತ್ತು ಇಬ್ಬರು ಸ್ನಾತಕೋತ್ತರ ಪದವೀಧರ ವಿದ್ಯಾರ್ಥಿಗಳಿಗೆ ಸಿಬಿಐ ಸಮನ್ಸ್ ನೀಡಿದೆ. ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಡಾ. ಸಂದೀಪ್ ಘೋಷ್ ಅವರನ್ನು ವಿಚಾರಣೆಗೆ ತೆಗೆದುಕೊಂಡಿದೆ. ವಿದ್ಯಾರ್ಥಿನಿಯ ಶವ ಪತ್ತೆಯಾದ ಎರಡು ದಿನಗಳ ನಂತರ ತಮ್ಮ ಹುದ್ದೆಗೆ ಘೋಷ್ ರಾಜೀನಾಮೆ ನೀಡಿದ್ದರು. ತಮ್ಮ ಮೇಲೆ ದಾಳಿ ನಡೆಯುವ ಸಾಧ್ಯತೆ ಇದೆ. ಭದ್ರತೆ ಕಲ್ಪಿಸಿ ಎಂದು ಕೋಲ್ಕತ್ತಾ ಹೈಕೋರ್ಟ್ ಮೊರೆ ಹೋಗಿದ್ದರು. ಏಕಸದಸ್ಯ ಪೀಠದ ಮೊರೆ ಹೋಗುವಂತೆ ನ್ಯಾಯಾಲಯ ಸೂಚಿಸಿದೆ.
ಸಾಕ್ಷ್ಯಗಳನ್ನು ಕಲೆ ಹಾಕಲು ಸಿಬಿಐ ಅಧಿಕಾರಿಗಳು ಬಂಧಿತ ಆರೋಪಿಗಳನ್ನು ಕೃತ್ಯ ನಡೆದ ಸ್ಥಳದಲ್ಲಿ ಮಹಜರು ನಡೆಸಿದ್ದಾರೆ. ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ 3ಡಿ ಟ್ರ್ಯಾಕಿಂಗ್ ನಡೆಸಿದ್ದಾರೆ. ಆಗಸ್ಟ್ 9ರಂದು ಆರ್‌ಜಿ ಕರ್ ಆಸ್ಪತ್ರೆಯ ಸೆಮಿನಾರ್ ಕೊಠಡಿಯಲ್ಲಿ ಸ್ನಾತಕೋತ್ತರ ತರಬೇತಿ ಪಡೆಯುತ್ತಿದ್ದ ವೈದ್ಯ ವಿದ್ಯಾರ್ಥಿನಿ ಶವ ಪತ್ತೆಯಾಗಿತ್ತು. ಈ ಸಂಬಂಧ ಮರುದಿನ ಪೊಲೀಸರು ನಾಗರಿಕ ಸ್ವಯಂಸೇವಕನನ್ನು ಬಂಧಿಸಿದ್ದರು. ಇದರ ಬೆನ್ನಲ್ಲೇ, ಭಾರತೀಯ ವೈದ್ಯ ಸಂಘ ಕಳೆದ ನಾಲ್ಕು ದಿನಗಳಿಂದ ದೇಶಾದ್ಯಂತ ತೀವ್ರ ಪ್ರತಿಭಟನೆ ನಡೆಸುತ್ತಿದೆ.