ಬಂಗಾರಂ/ಕವರತ್ತಿ (ಲಕ್ಷದ್ವೀಪ): ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಲಕ್ಷದ್ವೀಪ ದ್ವೀಪಸಮೂಹಕ್ಕೆ ಭೇಟಿ ನೀಡಿದ ನಂತರ ಇಲ್ಲಿನ ಬಂಗಾರಂ ದ್ವೀಪವು ಈಗ ಜನಪ್ರಿಯ ಪ್ರವಾಸಿ ತಾಣವಾಗಿ ಗುರುತಿಸಿಕೊಳ್ಳುತ್ತಿದೆ. ನೀಲಿ ಸಮುದ್ರ, ಬಹುವರ್ಣದ ಹವಳದ ದಿಬ್ಬಗಳು ಮತ್ತು ವಿವಿಧ ಸಮುದ್ರ ಜೀವಿಗಳಿಂದ ಆವೃತವಾಗಿರುವ ಬಂಗಾರಂ ದ್ವೀಪ ಭೂಮಿಯ ಮೇಲಿನ ಸ್ವರ್ಗವಾಗಿದೆ ಎಂದು ಪ್ರವಾಸಿಗರು ಹೇಳುತ್ತಿದ್ದಾರೆ. ಬಂಗಾರಂ ಮಾತ್ರವಲ್ಲದೆ ಹತ್ತಿರದಲ್ಲೇ ಇರುವ ತಿನ್ನಕರಾ ದ್ವೀಪ ಕೂಡ ಅಷ್ಟೇ ಜನಪ್ರಿಯವಾಗುತ್ತಿದೆ.
ಪ್ರಧಾನಿ ಮೋದಿ ಲಕ್ಷದ್ವೀಪಕ್ಕೆ ಭೇಟಿ ನೀಡಿದ ನಂತರ ಕೆಲವು ಮಾಲ್ಡೀವ್ಸ್ ರಾಜಕೀಯ ಮುಖಂಡರು ಸಾಮಾಜಿಕ ಮಾಧ್ಯಮಗಳಲ್ಲಿ ಮೋದಿ ಹಾಗೂ ಭಾರತದ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ಪೋಸ್ಟ್ ಮಾಡಿದ್ದರು. ಇದರ ನಂತರ ಭಾರತ ಮತ್ತು ಮಾಲ್ಡೀವ್ಸ್ ನಡುವಿನ ರಾಜತಾಂತ್ರಿಕ ವಿವಾದ ಏರ್ಪಟ್ಟಿತ್ತು. ಅಲ್ಲದೆ ಭಾರತದ ನೆಟಿಜೆನ್ಗಳು ಬಾಯ್ಕಾಟ್ ಮಾಲ್ಡೀವ್ಸ್ ಅಭಿಯಾನ ಆರಂಭಿಸಿದ್ದರು. ಇದಕ್ಕೆ ಭಾರತ ಹಾಗೂ ವಿದೇಶದ ಹಲವಾರು ಸೆಲೆಬ್ರಿಟಿಗಳು ಕೂಡ ಬೆಂಬಲಿಸಿದ್ದರು. ಈ ಬೆಳವಣಿಗೆಗಳ ನಂತರ ಲಕ್ಷದ್ವೀಪದ ಸುಂದರ ದ್ವೀಪಗಳು ಪ್ರವಾಸಿಗರ ಮೆಚ್ಚಿನ ತಾಣಗಳಾಗುತ್ತಿವೆ.
ಸುಂದರವಾದ ಕಡಲತೀರಗಳು, ಸ್ಫಟಿಕ ಸ್ಪಷ್ಟವಾದ ನೀರು ಮತ್ತು ಪ್ರಶಾಂತ ಪರಿಸರವನ್ನು ಹೊಂದಿರುವ ದೊಡ್ಡ ಸರೋವರಗಳನ್ನು ಹೊಂದಿರುವ ಬಂಗಾರಂ ಮತ್ತು ತಿನ್ನಕರಾ ದ್ವೀಪಗಳ ಹೆಸರುಗಳ ಬಗ್ಗೆ ಒಂದು ಆಸಕ್ತಿದಾಯಕ ಇತಿಹಾಸವಿದೆ.
ತಿನ್ನಕರಾ ಎಂಬ ಹೆಸರು ತಿನ್ನ ಮತ್ತು ಕರ ಎಂಬ ಎರಡು ಮಲಯಾಳಂ ಪದಗಳಿಂದ ಆಗಿದೆ. ಊಟ ಮಾಡಿದ ಭೂಮಿ ಎಂಬುದು ಈ ಪದದ ಅರ್ಥ. ಹಿಂದೆ ಚೇರ ಸಾಮ್ರಾಜ್ಯದ ಯೋಧರ ದೋಣಿಯೊಂದು ಅಪಘಾತಕ್ಕೀಡಾದ ನಂತರ ಯೋಧರ ಗುಂಪು ಈ ದ್ವೀಪದಲ್ಲಿ ಆಶ್ರಯ ಪಡೆದಿತ್ತಂತೆ. ಇಲ್ಲಿನ ಸಾಕಷ್ಟು ತೆಂಗಿನ ಮರಗಳಿಂದ ತೆಂಗಿನ ಕಾಯಿಯ ನೀರು ಕುಡಿದು ಇಲ್ಲಿನ ಹಣ್ಣುಗಳನ್ನು ತಿಂದು ಅವರು ಹೊಟ್ಟೆ ತುಂಬಿಸಿಕೊಂಡಿದ್ದರಂತೆ. ಹೀಗಾಗಿ ಈ ದ್ವೀಪಕ್ಕೆ ತಿನ್ನಕರಾ ಎಂಬ ಹೆಸರು ಬಂದಿದೆ ಎಂದು ಬಲ್ಲವರು ಹೇಳುತ್ತಾರೆ.
ಸರೋವರಗಳು ಮತ್ತು ವಿವಿಧ ಸಮುದ್ರ ಜೀವಿಗಳಿರುವ ಸ್ಫಟಿಕ ಸ್ಪಷ್ಟ ನೀರು ಮಾತ್ರವಲ್ಲದೆ ಬಂಗಾರಂ ಬಳಿ ಹಡಗು ದುರಂತದ ಅವಶೇಷಗಳೂ ಇವೆ. ಇದು ಈಗ ಸ್ನೋರ್ಕೆಲಿಂಗ್ ಹಾಟ್ಸ್ಪಾಟ್ ಆಗಿದೆ. 200 ವರ್ಷಗಳ ಹಿಂದೆ ಸಂಭವಿಸಿದ ಅಪಘಾತದ ಹಡಗು ಅವಶೇಷಗಳು ಇವಾಗಿವೆ ಎಂದು ಇಲ್ಲಿನ ನಿವಾಸಿ ಸೈಫುಲ್ಲಾ ಎಂಬುವರು ಹೇಳಿದರು.
ಈ ಪ್ರದೇಶದಲ್ಲಿನ ವರ್ಷದ ಹೆಚ್ಚಿನ ಸಮಯಗಳಲ್ಲಿ ನೀರು ಎದೆ ಮಟ್ಟಕ್ಕಿರುತ್ತದೆ. ಹೀಗಾಗಿ ನೀರಿನಲ್ಲಿ ನಡೆದು ನಡೆದು ಸ್ನಾರ್ಕೆಲಿಂಗ್ ಗ್ಲಾಸ್ ಬಳಸಿ ವಿವಿಧ ಮೀನುಗಳನ್ನು ನೋಡಬಹುದು. ಅಲ್ಲದೆ ಮೀನುಗಳಿಗೆ ನೀವು ಆಹಾರವನ್ನೂ ತಿನ್ನಿಸಬಹುದು.
ಬಂಗಾರಂ ದ್ವೀಪವು ಕಳೆದ ಅನೇಕ ವರ್ಷಗಳಿಂದ ಪ್ರವಾಸೋದ್ಯಮ ತಾಣವಾಗಿದೆ. ಇಲ್ಲಿ ಒಂದೊಮ್ಮೆ ರೆಸಾರ್ಟ್ಗಳು ಮತ್ತು ಕ್ಯಾಸಿನೊ ಇದ್ದವು. ಆದರೆ ಲಕ್ಷದ್ವೀಪದ ಸಂಪರ್ಕ ಸಮಸ್ಯೆಗಳಿಂದಾಗಿ ಅವೆಲ್ಲವನ್ನೂ ನಂತರ ಮುಚ್ಚಲಾಯಿತು ಎಂದು ಸೈಫುಲ್ಲಾ ಹೇಳಿದರು.
ಪ್ರಸ್ತುತ ಅಲಯನ್ಸ್ ಏರ್ಲೈನ್ ಮಾತ್ರ ಅಗತ್ತಿ ದ್ವೀಪಕ್ಕೆ ಪ್ರತಿದಿನ ಒಂದು ವಿಮಾನಯಾನ ಸೇವೆ ನೀಡುತ್ತಿದೆ. ಬುಧವಾರ ಮತ್ತು ಭಾನುವಾರ ಮಾತ್ರ ಎರಡು ಟ್ರಿಪ್ಗಳನ್ನು ನಡೆಸುತ್ತದೆ. ವಿಮಾನದ ಹೊರತಾಗಿ, ಕೊಚ್ಚಿ ಮತ್ತು ಕವರತ್ತಿ ನಡುವೆ ವಾರದಲ್ಲಿ ಕೇವಲ ಒಂದು ಹಡಗು ಮಾತ್ರ ಸಂಚರಿಸುತ್ತಿದೆ. ಪ್ರಸ್ತುತ ಅಗತ್ತಿಯಲ್ಲಿ ಮಾತ್ರ ವಿಮಾನ ನಿಲ್ದಾಣವಿದೆ. ಸಮುದ್ರ ಶಾಂತವಾಗಿದ್ದರೆ ಅಗತ್ತಿಯಿಂದ ದೋಣಿಯಲ್ಲಿ ಬಂಗಾರಂ ಮತ್ತು ತಿನ್ನಕರ ದ್ವೀಪಗಳನ್ನು 45 ನಿಮಿಷಗಳಲ್ಲಿ ತಲುಪಬಹುದು.
ಆದರೆ ಕೆಲವೇ ದಿನಗಳಲ್ಲಿ ಈ ದ್ವೀಪಗಳಲ್ಲಿ ಪ್ರಮುಖ ಬದಲಾವಣೆಗಳಾಗಲಿವೆ. ಹಲವಾರು ದೊಡ್ಡ ಯೋಜನೆಗಳು ಇಲ್ಲಿಗೆ ಬರಲಿದ್ದು, ಮುಂದಿನ ದಿನಗಳಲ್ಲಿ ಸಂಪರ್ಕ ವ್ಯವಸ್ಥೆ ಕೂಡ ಸುಧಾರಣೆಯಾಗಲಿದೆ. ಸಾಮಾನ್ಯವಾಗಿ ಈ ಎರಡೂ ದ್ವೀಪಗಳು ನಿರ್ಜನವಾಗಿರುತ್ತವೆ. ತೆಂಗಿನಕಾಯಿಗಳಿಂದ ಬೆಲ್ಲ ತಯಾರಿಸುವ ಋತುವಿನಲ್ಲಿ ಆರು ತಿಂಗಳವರೆಗೆ ತಿನ್ನಕರ ದ್ವೀಪದಲ್ಲಿ ಕೇವಲ 15 ಜನ ವಾಸಿಸುತ್ತಾರೆ.
ಲಕ್ಷದ್ವೀಪ ಆಡಳಿತವು ಬಂಗಾರಂ ದ್ವೀಪದಲ್ಲಿ ಪಂಚತಾರಾ ರೆಸಾರ್ಟ್ ಒಂದನ್ನು ನಿರ್ವಹಿಸುತ್ತಿದೆ. ಇದನ್ನು ಬಿಟ್ಟರೆ ಬೇರೆ ಅಂಗಡಿ ಅಥವಾ ಜನ ಇಲ್ಲಿ ಇಲ್ಲ. ಹೀಗಾಗಿ ದ್ವೀಪಗಳ ಜನವಸತಿ ಇಲ್ಲದ ಪ್ರಕೃತಿಯೂ ಒಂದು ಆಕರ್ಷಣೆಯಾಗಿದೆ.
ಇದನ್ನೂ ಓದಿ : ಮಾಲ್ಡೀವ್ಸ್ಗೆ ಇಸ್ರೇಲ್ ಟಕ್ಕರ್: ಲಕ್ಷದ್ವೀಪ ವಿಶ್ವತಾಣವಾಗಿ ಅಭಿವೃದ್ಧಿ ಮಾಡುವ ಘೋಷಣೆ