ಎರ್ನಾಕುಲಂ: 700 ನರ್ಸ್ಗಳು ಸೇರಿದಂತೆ 1,425 ಕೇರಳಿಗರು ಕುವೈತ್ನ ಗಲ್ಫ್ ಬ್ಯಾಂಕ್ಗೆ 700 ಕೋಟಿ ವಂಚಿಸಿರುವ ಆರೋಪ ಪ್ರಕರಣ ಬೆಳಕಿಗೆ ಬಂದಿದೆ. ವಂಚಿಸಿದ ಇವರೆಲ್ಲರೂ ಕೇರಳ ಸೇರಿದಂತೆ ವಿದೇಶಕ್ಕೆ ಹಾರಿದ್ದು, ಈ ಸಂಬಂಧ ತನಿಖೆ ಶುರುವಾಗಿದೆ.
ನವೆಂಬರ್ 5ರಂದು ಕೊಟ್ಟಾಯಂ ಮತ್ತು ಎರ್ನಾಕುಲಂ ಜಿಲ್ಲೆಗಳಲ್ಲಿ ಈ ಸಂಬಂಧ 10 ಪ್ರಕರಣಗಳು ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ ಎಂದು ದಕ್ಷಿಣ ವಲಯದ ಇನ್ಸ್ ಪೆಕ್ಟರ್ ಜನರಲ್ (ಐಜಿ), ಎಸ್ ಶ್ಯಾಮಸುಂದರ್ ತಿಳಿಸಿದ್ದಾರೆ.
ಇವರು 50 ಲಕ್ಷದಿಂದ 2 ಕೋಟಿವರೆಗೆ ಸಾಲ ಮಾಡಿ ವಂಚಿಸಿದ್ದಾರೆ ಎಂದು ವರದಿಯಾಗಿದೆ. ಆರಂಭದಲ್ಲಿ ಸಣ್ಣ ಮೊತ್ತದ ಸಾಲ ಮಾಡಿದ ಅವರು, ಅವುಗಳನ್ನು ಸರಿಯಾದ ಸಮಯಕ್ಕೆ ತೀರಿಸಿ, ಕ್ರೆಡಿಟ್ ಸ್ಕೋರ್ ಹೆಚ್ಚಿಸಿಕೊಂಡಿದ್ದಾರೆ. ಇದರಿಂದಾಗಿ ಅವರು ನಂತರದಲ್ಲಿ ದೊಡ್ಡ ಮೊತ್ತದ ಸಾಲ ಮಾಡಿ ವಂಚಿಸಿದ್ದಾರೆ.
ಬ್ಯಾಂಕ್ ಸಿಆರ್ಪಿಸಿ ಸೆಕ್ಷನ್ 188ರ ಉಲ್ಲೇಖಿಸಿದ್ದು, ಭಾರತೀಯ ಪ್ರಜೆಯು ವಿದೇಶದಲ್ಲಿ ಅಪರಾಧ ಮಾಡಿದರೆ, ಅವರು ಭಾರತದಲ್ಲಿರುವ ಕಾನೂನು ಕ್ರಮವನ್ನು ಎದುರಿಸಬೇಕು ಎಂಬ ಷರತ್ತು ವಿಧಿಸಿದೆ.
ದೊಡ್ಡ ಮೊತ್ತದ ಸಾಲ ಮಾಡಿದ ಬಳಿಕ ಅವರು ಅದನ್ನು ಮರು ಪಾವತಿ ಮಾಡಿಲ್ಲ. ಇದರಿಂದ ಅನುಮಾನಗೊಂಡು ಕುವೈತ್ ಬ್ಯಾಂಕ್ ಅಧಿಕಾರಿಗಳು ತನಿಖೆಯನ್ನು ಪ್ರಾರಂಭಿಸಿದ್ದರು. ಈ ವೇಳೆ ಸಾಲ ಪಡೆದವರು, ಕೇರಳ ಮತ್ತು ಯುಕೆ ಮತ್ತು ಕೆನಡಾದಂತಹ ವಿದೇಶಗಳಿಗೆ ಹಾರಿರುವುದು ಬೆಳಕಿಗೆ ಬಂದಿದೆ.
ಈ ವಂಚನೆಯ ಯೋಜನೆಯನ್ನು ತಿಳಿದ ಅನೇಕ ಕೇರಳಿಗರು ಈ ಜಾಲದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದಾರೆ, ಈ ವಂಚನೆ ಜಾಲದ ಹಿಂದೆ ದೊಡ್ಡ ಪಿತೂರಿ ಇರುವ ಸಾಧ್ಯತೆ ಇದೆ ಎಂಬ ಶಂಕೆ ಮೂಡಿದೆ.
ಇದೇ ರೀತಿಯ ಸಾಲದ ವಂಚನೆಯು ಐದಾರು ವರ್ಷದ ಹಿಂದೆ ನಡೆಯುತ್ತಿತ್ತು. ಯುನೈಟೆಡ್ ಅರಬ್ ಎಮಿರೇಟ್ಸ್, ಸೌದಿ ಅರೇಬಿಯಾ, ಕತಾರ್ ಮತ್ತು ಓಮನ್‌ನ ಬ್ಯಾಂಕ್‌ಗಳಲ್ಲೂ ಕೂಡ ಇದೇ ರೀತಿ ವಂಚಿಸಿದ ಸಾಲಗಾರರು, ಹಣ ಪಾವತಿ ಮಾಡದೇ, ಯುರೋಪ್ ಮತ್ತು ಯುಎಸ್, ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ದೇಶಗಳಿಗೆ ಹಾರಿದ್ದರು.
ಇದನ್ನೂ ಓದಿ: ಇಡಿ ಭರ್ಜರಿ ಬೇಟೆ;13.5 ಕೋಟಿ ರೂ. ವಶಕ್ಕೆ ಪಡೆದ ಜಾರಿ ನಿರ್ದೇಶನಾಲಯ