ನವದೆಹಲಿ: ಬಿಜೆಪಿ ನಾಯಕ ಮನೋಜ್ ಸೋಂಕರ್ ಅವರು ಚಂಡೀಗಢ ಮೇಯರ್ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ‘ಅನ್ಯಾಯ ಮಾರ್ಗ’ಗಳನ್ನು ಬಳಸಿ ಚುನಾವಣೆ ಗೆದ್ದಿರುವುದನ್ನು ತೋರಿಸುತ್ತದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಮವಾರ ಆರೋಪಿಸಿದ್ದಾರೆ.
ದೆಹಲಿ ವಿಧಾನಸಭೆಯ ಹೊರಗೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಮೇಯರ್ ರಾಜೀನಾಮೆ ನೀಡಿದ್ದಾರೆ ಅಂದ್ರೆ ಅಲ್ಲಿ ಏನೋ ನಿಗೂಢವಾಗಿ ನಡೆದಿರುವುದು ಸ್ಪಷ್ಟ. ಅವರು ಅನ್ಯಾಯದ ರೀತಿಯಲ್ಲಿ ಚುನಾವಣೆಯಲ್ಲಿ ಗೆದ್ದಿದ್ದಾರೆ ಎಂಬುದು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಹೇಳಿದರು.
ಅವರು ಇತರ ಚುನಾವಣೆಗಳನ್ನೂ ಗೆಲ್ಲುವುದು ಹೀಗೆ. ಇಲ್ಲದಿದ್ದರೇ ಗೆದ್ದ ಪಕ್ಷದಿಂದ ಅವರು ನಾಯಕರನ್ನು ಖರೀದಿಸುತ್ತಾರೆ. ಅನ್ಯಾಯವಾಗಿ ಚುನಾವಣೆ ಗೆದ್ದರೆ ಪ್ರಜಾಪ್ರಭುತ್ವ ರಾಷ್ಟ್ರ ಹೇಗೆ ಕಾರ್ಯನಿರ್ವಹಿಸುತ್ತದೆ?. ಅವರು (ಬಿಜೆಪಿ) ಚುನಾವಣೆಯಲ್ಲಿ ಗೆದ್ದ ಪಕ್ಷಕ್ಕೆ ಸರ್ಕಾರ ನಡೆಸಲು ಬಿಡಬೇಕು ಎಂದು ಕೇಜ್ರಿವಾಲ್ ಆಕ್ರೋಶ ವ್ಯಕ್ತಪಡಿಸಿದರು. ಸೋಂಕರ್ ಚಂಡೀಗಢ ಮೇಯರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಎಎಪಿಯ ಮೂವರು ಕೌನ್ಸಿಲರ್ಗಳಾದ ನೇಹಾ, ಪೂನಂ ಮತ್ತು ಗುರುಚರಣ್ ಕಲಾ ಭಾನುವಾರ ಬಿಜೆಪಿಗೆ ಸೇರ್ಪಡೆಗೊಂಡರು.
ಎಎಪಿಗೆ ತಿರುಗೇಟು ನೀಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ, ಎಎಪಿ ಕೌನ್ಸಿಲರ್‌ಗಳು ತಮ್ಮ ಸ್ವಂತ ಇಚ್ಛೆಯ ಮೇರೆಗೆ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಪೂನಂ ಮತ್ತು ನೇಹಾ ಅವರಲ್ಲಿ ಒಬ್ಬರನ್ನು ಮೇಯರ್ ಮಾಡಲಾಗುವುದು ಎಂದು ಎಎಪಿ ಭರವಸೆ ನೀಡಿತ್ತು. ಆದರೆ ಪಕ್ಷವು ತನ್ನ ಭರವಸೆಗಳನ್ನು ಈಡೇರಿಸಲಿಲ್ಲ. ಈ ನಾಯಕರು ಬಿಜೆಪಿ ಸೇರುವುದರೊಂದಿಗೆ ಎಎಪಿಯ ಸುಳ್ಳುಗಳು ಬಯಲಾಗಿವೆ ಎಂದು ಟಾಂಗ್ ಕೊಟ್ಟರು.
ಮೂವರು ಎಎಪಿ ಕೌನ್ಸಿಲರ್‌ಗಳು ತಮ್ಮ ಪಕ್ಷವನ್ನು ಬದಲಾಯಿಸಿದ್ದಾರೆ. ಅವರು ನಮ್ಮ ಪಕ್ಷಕ್ಕೆ ಸೇರುವ ಮೊದಲು, 35 ಸದಸ್ಯರ ಚಂಡೀಗಢ ಮುನ್ಸಿಪಲ್ ಕಾರ್ಪೊರೇಶನ್‌ನಲ್ಲಿ ಬಿಜೆಪಿ 14 ಮತ್ತು ಎಎಪಿ 13 ಕೌನ್ಸಿಲರ್‌ಗಳನ್ನು ಹೊಂದಿತ್ತು. ಚಂಡೀಗಢದಲ್ಲಿ ಎಎಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟದಲ್ಲಿ ಕೇಜ್ರಿವಾಲ್ ಬಿರುಕುಗಳನ್ನು ಸೃಷ್ಟಿಸಿದ್ದಾರೆ. ಹೀಗಾಗಿ ಕೌನ್ಸಿಲರ್‌ಗಳು ಮತ್ತೊಂದು ಪಕ್ಷಕ್ಕೆ ಜಿಗಿಯಲು ಇದೊಂದು ಕಾರಣವಾಗಿದೆ ಎಂದು ತಾವ್ಡೆ ಆರೋಪಿಸಿದರು.
ಓದಿ: ಸಂದೇಶ್‌ಖಾಲಿ ಹಿಂಸಾಚಾರ ಪ್ರಕರಣ: ಸಿಬಿಐ, ಎಸ್‌ಐಟಿ ತನಿಖೆಗೆ ಕೋರಿ ಸಲ್ಲಿಸಲಾದ ಅರ್ಜಿ ವಜಾಗೊಳಿಸಿದ ಸುಪ್ರೀಂ