ಕಥುವಾ (ಜಮ್ಮು ಮತ್ತು ಕಾಶ್ಮೀರ): ಕಣಿವೆ ನಾಡು ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಮತ್ತೆ ಭಯೋತ್ಪಾದಕರ ದಾಳಿಗಳು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಮತ್ತು ಪಂಜಾಬ್ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಬಿಎಸ್‌ಎಫ್ ಅಧಿಕಾರಿಗಳ ನಡುವೆ ಉನ್ನತ ಮಟ್ಟದ ಅಂತರ್ ರಾಜ್ಯ ಭದ್ರತಾ ಸಭೆ ನಡೆಸಲಾಗಿದೆ.
ಕಥುವಾದಲ್ಲಿ ಗುರುವಾರ ನಡೆದ ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ಆರ್.ಆರ್.ಸ್ವೈನ್, ಪಂಜಾಬ್ ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ಮತ್ತು ಬಿಎಸ್‌ಎಫ್‌ನ ವಿಶೇಷ ಮಹಾನಿರ್ದೇಶಕ, ಪಶ್ಚಿಮ ಕಮಾಂಡ್ ವೈ.ಬಿ.ಖುರಾನಿಯಾ ಭಾಗವಹಿಸಿದ್ದರು. ಅಂತಾರಾಷ್ಟ್ರೀಯ ಗಡಿ ಉದ್ದಕ್ಕೂ ಭದ್ರತಾ ವ್ಯವಸ್ಥೆ ಪರಿಶೀಲಿಸಲು ಮತ್ತು ಯಾವುದೇ ಲೋಪದೋಷಗಳ ಉಂಟಾಗುವುದನ್ನು ಖಚಿತ ಪಡಿಸಿಕೊಳ್ಳುವ ಕುರಿತು ಅಧಿಕಾರಿಗಳು ಚರ್ಚಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ವಿಜಯ್ ಕುಮಾರ್, ಪಂಜಾಬ್ ಎಡಿಜಿ ಅರ್ಪಿತ್ ಶುಕ್ಲಾ ಮತ್ತು ಪಂಜಾಬ್ ಮತ್ತು ಜಮ್ಮುವಿನ ಇನ್ಸ್‌ಪೆಕ್ಟರ್ ಜನರಲ್ ಶ್ರೇಣಿಯ ಬಿಎಸ್‌ಎಫ್ ಅಧಿಕಾರಿಗಳು ಸಹ ಸಭೆಯಲ್ಲಿ ಉಪಸ್ಥಿತರಿದ್ದರು. ಗಡಿ ಜಿಲ್ಲೆಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳು ಮತ್ತು ಗಡಿಯಾಚೆಗಿನ ಮಾದಕವಸ್ತು ಕಳ್ಳಸಾಗಣೆಯನ್ನು ಹೆಚ್ಚಾಗಿರುವ ಬಗ್ಗೆ ಅವಲೋಕಿಸುವುದು ಸಭೆಯ ಪ್ರಮುಖ ಕಾರ್ಯಸೂಚಿಯಾಗಿದೆ ಎಂದು 'ಈಟಿವಿ ಭಾರತ್'ಗೆ ಮೂಲಗಳು ತಿಳಿಸಿವೆ.
ಇತ್ತೀಚೆಗೆ ಉಗ್ರರು ನಡೆಸಿದ ಹೊಂಚಿನ ದಾಳಿಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದಾರೆ. ಈ ಭಯೋತ್ಪಾದಕರು ಅಂತಾರಾಷ್ಟ್ರೀಯ ಗಡಿಯ ಮೂಲಕ ಯಶಸ್ವಿಯಾಗಿ ನುಸುಳಿದ್ದರು ಎಂದು ನಂಬಲಾಗಿದೆ. ಗಡಿದಾಟಿ ಉಧಮ್‌ಪುರದ ಬಸಂತ್‌ಗಢ್ ಮತ್ತು ದೋಡಾ ಜಿಲ್ಲೆಯ ಭದೇರ್ವಾಹ್ಅನ್ನು ಸಂಪರ್ಕಿಸುವ ಮಚೇಡಿಯ ದಟ್ಟವಾದ ಕಾಡುಗಳಿಗೆ ತಲುಪಿದ್ದರು ಎಂಬ ಮಾಹಿತಿಯನ್ನು ಅಧಿಕಾರಿಗಳು ಕಲೆ ಹಾಕಿದ್ದಾರೆ.
ಎರಡು ದಶಕಗಳ ಹಿಂದೆ ಈ ಪ್ರದೇಶದಲ್ಲಿ ಭಯೋತ್ಪಾದನೆ ಹೆಚ್ಚಾಗಿದಲ್ಲಿದ್ದಾಗಲೂ ಉಗ್ರರು ಗಡಿ ಒಳನುಸುಳಲು ಇದೇ ಮಾರ್ಗವನ್ನು ಬಳಸುತ್ತಿದ್ದರು. ಸದ್ಯ ಪ್ರದೇಶದಲ್ಲಿ ಭಯೋತ್ಪಾದಕರ ಹಾವಳಿ ತಗ್ಗಿದೆ. ಆದರೆ, ಇದರ ನಡುವೆ ಭಯೋತ್ಪಾದಕ ಚಟುವಟಿಕೆಗಳ ಮತ್ತೆ ಹೆಚ್ಚುತ್ತಿರುವುದು ಭದ್ರತೆ ಬಗ್ಗೆ ಗಂಭೀರ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಭದ್ರತಾ ಪಡೆಗಳು ನಿರಂತರವಾಗಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದು, ಬುಧವಾರ ಕನಿಷ್ಠ 24 ಜನರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಜುಲೈ 8ರಂದು ಅಂತಾರಾಷ್ಟ್ರೀಯ ಗಡಿಯಿಂದ ನುಸುಳಿದ್ದ ಭಯೋತ್ಪಾದಕರು ಕಥುವಾ ಜಿಲ್ಲಾ ಕೇಂದ್ರದಿಂದ ಸುಮಾರು 150 ಕಿಮೀ ದೂರದಲ್ಲಿರುವ ಬದ್ನೋಟಾ ಗ್ರಾಮದ ಬಳಿ ಮಚೇಡಿ-ಕಿಂಡ್ಲಿ-ಮಲ್ಹಾರ್ ಪರ್ವತ ರಸ್ತೆಯಲ್ಲಿ ಎರಡು ಸೇನಾ ವಾಹನಗಳ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಇದರಲ್ಲಿ ಐವರು ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದು, ಹಲವು ಸಿಬ್ಬಂದಿ ಗಾಯಗೊಂಡಿದ್ದರು.
ಇದನ್ನೂ ಓದಿ: ಎರಡು ತಿಂಗಳಲ್ಲಿ ಇಬ್ಬರು ಪುತ್ರರನ್ನು ದೇಶಕ್ಕೆ ಅರ್ಪಿಸಿದ ಕುಟುಂಬ!