ನವದೆಹಲಿ: ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಅವರು ಗುರುವಾರ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದರೊಂದಿಗೆ ಸುಪ್ರೀಂ ಕೋರ್ಟ್ನಲ್ಲಿ ದಲಿತ ನ್ಯಾಯಮೂರ್ತಿಗಳ ಸಂಖ್ಯೆ 3ಕ್ಕೇರಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ನ್ಯಾಯಮೂರ್ತಿ ವರಾಳೆ ಅವರಿಗೆ ಪ್ರಮಾಣ ವಚನ ಬೋಧಿಸಿದರು. ನ್ಯಾಯಮೂರ್ತಿ ವರಾಳೆ ಅವರ ಹೆಸರನ್ನು ಕೇಂದ್ರ ಸರ್ಕಾರ ಬುಧವಾರ ಅನುಮೋದಿಸಿತ್ತು.
ವರಾಳೆ ಪ್ರಮಾಣ ವಚನ ಸ್ವೀಕಾರದೊಂದಿಗೆ, ಸುಪ್ರೀಂ ಕೋರ್ಟ್ ಭಾರತದ ಮುಖ್ಯ ನ್ಯಾಯಮೂರ್ತಿ ಸೇರಿದಂತೆ 34 ನ್ಯಾಯಾಧೀಶರ ಪೂರ್ಣ ಬಲವನ್ನು ಸಾಧಿಸಿದೆ. ಈ ತಿಂಗಳ ಆರಂಭದಲ್ಲಿ ನ್ಯಾಯಮೂರ್ತಿ ವರಾಳೆ ಅವರ ಹೆಸರನ್ನು ಶಿಫಾರಸು ಮಾಡುವಾಗ, ಸುಪ್ರೀಂ ಕೋರ್ಟ್ ಕೊಲಿಜಿಯಂ ಅವರು ಹೈಕೋರ್ಟ್‌ನ ಹಿರಿಯ ನ್ಯಾಯಾಧೀಶರಲ್ಲಿ ಒಬ್ಬರು ಮತ್ತು ಪರಿಶಿಷ್ಟ ಜಾತಿಗೆ ಸೇರಿದ ಏಕೈಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಂಬ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ.
ಪ್ರಸ್ತುತ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿರುವ ನ್ಯಾಯಮೂರ್ತಿ ವರಾಳೆ ಅವರನ್ನು ಭಾರತೀಯ ಸಂವಿಧಾನದ 124ನೇ ವಿಧಿಯ ಕಲಂ (2)ರ ಅಡಿಯಲ್ಲಿ ನೀಡಲಾದ ಅಧಿಕಾರದ ಅಡಿಯಲ್ಲಿ ನೇಮಿಸಲಾಗಿದೆ. ಅವರು ಅಕ್ಟೋಬರ್ 15, 2022ರಿಂದ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದಾರೆ.
ನ್ಯಾ.ಪ್ರಸನ್ನ ಬಾಲಚಂದ್ರ ವರಾಳೆ ಜೂನ್ 23, 1962ರಂದು ಕರ್ನಾಟಕದ ನಿಪ್ಪಾಣಿಯಲ್ಲಿ ಜನಿಸಿದರು. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಮರಾಠಾವಾಡಾ ವಿಶ್ವ ವಿದ್ಯಾಲಯದಿಂದ ಕಲೆ ಮತ್ತು ಕಾನೂನಿನಲ್ಲಿ ಪದವಿ ಪಡೆದು 1985ರಲ್ಲಿ ವಕೀಲರಾದರು.
ಜುಲೈ 2008ರಲ್ಲಿ ಬಾಂಬೆ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡ ವರಾಳೆ ಅವರನ್ನು ಮೂರು ವರ್ಷಗಳ ನಂತರ ಖಾಯಂ ನ್ಯಾಯಾಧೀಶರನ್ನಾಗಿ ನೇಮಿಸಲಾಯಿತು. ಅಕ್ಟೋಬರ್ 2022ರಲ್ಲಿ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಳ್ಳುವವರೆಗೆ ಅವರು 14 ವರ್ಷಗಳ ಕಾಲ ಬಾಂಬೆ ಹೈಕೋರ್ಟ್ನಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದರು. ನ್ಯಾಯಮೂರ್ತಿ ಪ್ರಸನ್ನ ವರಾಳೆ ಸಾರ್ವಜನಿಕ ಹಿತದೃಷ್ಟಿಯಿಂದ ಸ್ವಯಂಪ್ರೇರಿತ ಪ್ರಕರಣಗಳನ್ನು ದಾಖಲಿಸಿಕೊಳ್ಳುವ ವಿಷಯದಲ್ಲಿ ಹೆಸರುವಾಸಿಯಾಗಿದ್ದಾರೆ.
ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರದ ಗರ್ಭಗುಡಿ ಪ್ರವೇಶಿಸಿದ ಕೋತಿ: ಸಾಕ್ಷಾತ್ ಹನುಮಂತನೇ ಬಂದ ಎಂದು ಭಕ್ತರ ಸಂತಸ