ನವದೆಹಲಿ: ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ ನೀಡಿದ್ದ 105 ಕೋಟಿ ರೂಪಾಯಿ ವಸೂಲಿ ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ. ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಯಶವಂತ್ ವರ್ಮಾ ನೇತೃತ್ವದ ಪೀಠ ತೀರ್ಪು ಕಾಯ್ದಿರಿಸಿ, ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯ ಆದೇಶದಲ್ಲಿ ಯಾವುದೇ ದೋಷ ಕಂಡು ಬಂದಿಲ್ಲ. ಈ ಆದೇಶಕ್ಕೆ ಕಾಂಗ್ರೆಸ್ ಪಕ್ಷವೇ ಹೊಣೆ . 2021 ರಿಂದ ತೆರಿಗೆ ಪಾವತಿಸಲು ಮನವಿ ಮಾಡಿದರೂ, ಅದನ್ನು ನಿರ್ಲಕ್ಷ್ಯ ಮಾಡಲಾಗಿದೆ. ಕಾಂಗ್ರೆಸ್ ಕಚೇರಿಯಲ್ಲಿ ಯಾರೋ ಮಲಗಿದ್ದರು ಎಂದು ಕಾಣುತ್ತದೆ ಎಂದು ಪೀಠ ಹೇಳಿದೆ.
ಕಾಂಗ್ರೆಸ್ ಪರ ವಾದ ಮಂಡಿಸಿದ ಹಿರಿಯ ವಕೀಲ ವಿವೇಕ್ ಟಂಖಾ ಅವರು, ಆದಾಯ ತೆರಿಗೆ ಇಲಾಖೆ ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದೆ. ಇದು ಚುನಾವಣಾ ಸಮಯವಾಗಿದ್ದು, ಅವರ ಬಳಿ ಹಣವಿಲ್ಲದಿದ್ದರೆ, ಚುನಾವಣೆಯನ್ನು ಹೇಗೆ ನಡೆಸುತ್ತಾರೆ. ಇದು ಪಕ್ಷವನ್ನು ಸಂಕಷ್ಟಕ್ಕೆ ಸಿಲುಕಿಸುತ್ತದೆ ಎಂದು ವಾದ ಮಂಡಿಸಿದ್ದಾರೆ.
2018-19ರ ಹಣಕಾಸು ವರ್ಷದ ತೆರಿಗೆಯನ್ನು ಮೌಲ್ಯಮಾಪನ ಮಾಡುವಾಗ ಆದಾಯ ತೆರಿಗೆ ಇಲಾಖೆಯು ಕಾಂಗ್ರೆಸ್ ಪಕ್ಷದಿಂದ 105 ಕೋಟಿ ರೂ.ಗಳನ್ನು ವಸೂಲಿ ಮಾಡಲು ಆದೇಶಿಸಿತ್ತು. 2018-19ರ ಅವಧಿಯಲ್ಲಿ ತಮಗೆ ಯಾವುದೇ ದೇಣಿಗೆ ಬಂದಿಲ್ಲ ಎಂಬ ಕಾಂಗ್ರೆಸ್ ಪಕ್ಷದ ವಾದವನ್ನು ಆದಾಯ ತೆರಿಗೆ ಇಲಾಖೆ ತಿರಸ್ಕರಿಸಿತ್ತು. ಕಾಂಗ್ರೆಸ್ ಪಕ್ಷವು ಅನೇಕ ಜನರಿಂದ 14.49 ಲಕ್ಷ ರೂ.ಗಳನ್ನು ದೇಣಿಗೆಯಾಗಿ ಸ್ವೀಕರಿಸಿದೆ ಮತ್ತು ರಿಟರ್ನ್ಸ್ ಅನ್ನು ಬಹಳ ತಡವಾಗಿ ಸಲ್ಲಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿತ್ತು. ಇದು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 13ಎ ಉಲ್ಲಂಘನೆಯಾಗಿದೆ.
ಇದನ್ನೂ ಓದಿ: ಚುನಾವಣಾ ಬಾಂಡ್‌ಗಳ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಎಸ್ಬಿಐ