ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಕಳೆದ ತಿಂಗಳು ಜಮ್ಮುವಿನ ಚೆನಾಬ್ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವಕನೋರ್ವನ ಮೃತದೇಹ ಪಾಕಿಸ್ತಾನಕ್ಕೆ ಹರಿದುಕೊಂಡು ಹೋಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಈಗಾಗಲೇ ಪಾಕಿಸ್ತಾನದ ಅಧಿಕಾರಿಗಳು ಆತನ ಮೃತದೇಹವನ್ನು ಹೂಳುವ ಮೂಲಕ ಅಂತ್ಯಸಂಸ್ಕಾರ ನಡೆಸಿದ್ದಾರೆ. ಈಗ ವಿಧಿ ವಿಧಾನಗಳ ಮೂಲಕ ಅಂತಿಮ ಕಾರ್ಯಕ್ಕಾಗಿ ಪಾರ್ಥಿವ ಶರೀರವನ್ನು ತವರಿಗೆ ತರಲು ನೆರವಾಗುವಂತೆ ಕೇಂದ್ರ ಸರ್ಕಾರಕ್ಕೆ ಕುಟುಂಬಸ್ಥರು ಮನವಿ ಮಾಡಿದ್ದಾರೆ.
ಜಮ್ಮು ಜಿಲ್ಲಾ ಕೇಂದ್ರದಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿರುವ ಅಖ್ನೂರ್‌ನ ಜುರಿಯನ್ ಪ್ರದೇಶದ ನಿವಾಸಿ ಹರಶ್ ನಗೋತ್ರಾ ಮೃತನೆಂದು ಗುರುತಿಸಲಾಗಿದೆ. ಜೂನ್ 11ರಂದು ಯುವಕ ನಾಪತ್ತೆಯಾಗಿದ್ದ. ನದಿಯ ದಡದಲ್ಲಿ ಬೈಕ್ ಪತ್ತೆಯಾಗಿತ್ತು. ಮರು ದಿನ ಕುಟುಂಬಸ್ಥರು ಹರಶ್ ಕಾಣೆಯಾದ ಬಗ್ಗೆ ಜುರಿಯನ್ ಪೊಲೀಸರಿಗೆ ದೂರು ನೀಡಿದ್ದರು. ನಂತರ ಪ್ರಕರಣವನ್ನು ತನಿಖೆಗಾಗಿ ಖೌರ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು. ಆನ್‌ಲೈನ್ ಗೇಮಿಂಗ್ ಅಪ್ಲಿಕೇಶನ್‌ನಲ್ಲಿ 80 ಸಾವಿರ ರೂ.ಗೂ ಹೆಚ್ಚು ನಷ್ಟ ಅನುಭವಿಸಿದ್ದರಿಂದ ಹರಶ್ ನದಿಗೆ ಹಾರಿದ್ದ ಎಂಬುವುದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.
ವಾಟ್ಸಾಪ್ ನಂಬರ್ಗೆ ಬಂತು ಪಾಕ್ ಸಂದೇಶ: ಇದೀಗ ಸುಮಾರು ಒಂದು ತಿಂಗಳ ನಂತರ ಪಾಕಿಸ್ತಾನಿ ಅಧಿಕಾರಿಯೊಬ್ಬರು ಹರಶ್ ತಂದೆ ಸುಭಾಷ್ ಶರ್ಮಾ ಅವರಿಗೆ ವಾಟ್ಸಾಪ್ ನಂಬರ್ಗೆ ಸಾವಿನ ಬಗ್ಗೆ ಸಂದೇಶ ರವಾನಿಸಿದ್ದರು. ಹರಶ್ ಈ ವಾಟ್ಸಾಪ್ ನಂಬರ್ ಬಳಸುತ್ತಿದ್ದ. ಬಳಿಕ ಕುಟುಂಬದವರು ಈ ಸಿಮ್ ಕಾರ್ಡ್ ಬ್ಲಾಕ್ ಮಾಡಿಸಿ, ತಮ್ಮ ಹೆಸರಿಗೆ ಮಾಡಿಸಿಕೊಂಡಿದ್ದರು. ಇದೇ ನಂಬರ್ಗೆ ಸಂದೇಶ ಕಳುಹಿಸಿರುವ ಪಾಕ್ ಅಧಿಕಾರಿ ತಾನು ಮರಣೋತ್ತರ ಪರೀಕ್ಷೆಯ ವಿಭಾಗದಲ್ಲಿ ಕರ್ತವ್ಯ ಮಾಡುತ್ತಿದ್ದೇನೆ. ಜೂನ್ 13ರಂದು ಪಂಜಾಬ್ ಪ್ರಾಂತ್ಯದ ಸಿಯಾಲ್‌ಕೋಟ್‌ನ ಕಾಲುವೆಯಲ್ಲಿ ಹರಶ್‌ನ ದೇಹ ಪತ್ತೆಯಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.
ನದಿ ಹಾರುವಾಗ ಹರಶ್ ಕೊರಳಲ್ಲಿ ಐ-ಕಾರ್ಡ್ ಹಾಕಿಕೊಂಡಿದ್ದ. ಈ ಕಾರ್ಡ್ನಲ್ಲಿ ಮೊಬೈಲ್ ಫೋನ್ ನಂಬರ್ ಸಹ ಇತ್ತು. ಸಾವಿನ ಸುದ್ದಿ ಖಾತ್ರಿ ಪಡಿಸಲು ಐಡಿ ಕಾರ್ಡ್ನ ಫೋಟೋವನ್ನೂ ಪಾಕಿಸ್ತಾನದ ಅಧಿಕಾರಿ ತಂದೆಗೆ ಕಳುಹಿಸಿದ್ದಾರೆ. ಪಾಕಿಸ್ತಾನದ ಪೊಲೀಸರು ಮತ್ತು ಆರೋಗ್ಯ ಅಧಿಕಾರಿಗಳು ಹಲವಾರು ಬಾರಿ ಈ ನಂಬರ್ಗೆ ಸಂಪರ್ಕಿಸಲು ಪ್ರಯತ್ನಿಸಿದ್ದರು. ಆದರೆ, ಅದು ಸ್ವಿಚ್ ಆಫ್ ಆಗಿದ್ದರಿಂದ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಸಿಯಾಲ್‌ಕೋಟ್‌ನಲ್ಲಿ ಮಣ್ಣು ಮಾಡಲಾಗಿದೆ ಎಂದು ಆ ಅಧಿಕಾರಿ ಹೇಳಿದ್ದಾರೆ ಎಂಬುವುದಾಗಿ ಕುಟುಂಬಸ್ಥರು ವಿವರಿಸಿದ್ದಾರೆ.
ಪಾಕಿಸ್ತಾನಿ ರೇಂಜರ್‌ಗಳ ಸಂಪರ್ಕಕ್ಕೆ ಪ್ರಯತ್ನ: ಹರಶ್ ಮೃತದೇಹವನ್ನು ಸ್ವದೇಶಕ್ಕೆ ತರುವಂತೆ ದುಃಖತಪ್ತ ಕುಟುಂಬಸ್ಥರು, ಪ್ರಧಾನಿ ಕಚೇರಿ, ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ. ''ನನ್ನ ಮಗನ ಮೃತದೇಹವನ್ನು ಅಂತಿಮ ಸಂಸ್ಕಾರಕ್ಕಾಗಿ ತವರಿಗೆ ತರಲು ನಮಗೆ ಸಹಾಯ ಮಾಡುವಂತೆ ನಾವು ನಮ್ಮ ಪ್ರಧಾನ ಮಂತ್ರಿಯನ್ನು ವಿನಂತಿಸುತ್ತೇವೆ. ನಮ್ಮ ಧರ್ಮದ ಪ್ರಕಾರ ಮಗನ ಅಂತ್ಯಕ್ರಿಯೆಯನ್ನು ಮಾಡಲು ನಾವು ಬಯಸುತ್ತೇವೆ'' ಎಂದು ಹರಶ್ ತಂದೆ ಸುಭಾಷ್ ಶರ್ಮಾ ಹೇಳಿದ್ದಾರೆ. ಇದೇ ವೇಳೆ, ಮೃತದೇಹವನ್ನು ಆದಷ್ಟು ಬೇಗ ತವರಿಗೆ ತರುವ ಕುರಿತು ಪಾಕಿಸ್ತಾನಿ ರೇಂಜರ್‌ಗಳೊಂದಿಗೆ ಮಾತನಾಡಲು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಬಿಎಸ್‌ಎಫ್ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: 'ಸುಳ್ಳು ದಾಖಲೆ, ರಸ್ತೆ ನಿಯಮ ಉಲ್ಲಂಘನೆ, ಅಕ್ರಮ ಮನೆ ನಿರ್ಮಾಣ': ಸಂಕಷ್ಟದಲ್ಲಿ ಟ್ರೇನಿ ಐಎಎಸ್ ಅಧಿಕಾರಿ ಪೂಜಾ