ಶ್ರೀನಗರ(ಜಮ್ಮು ಮತ್ತು ಕಾಶ್ಮೀರ): ಸಾಂಬಾ ಸೆಕ್ಟರ್‌ನಲ್ಲಿ ಅಂತಾರಾಷ್ಟ್ರೀಯ ಗಡಿ ದಾಟಲು ಯತ್ನಿಸುತ್ತಿದ್ದ ಪಾಕಿಸ್ತಾನಿ ಒಳ ನುಸುಳುಕೋರನೊಬ್ಬನನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಿಬ್ಬಂದಿ ಗುಂಡಿಕ್ಕಿ ಬೇಟೆಯಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ನುಸುಳುಕೋರ ಬುಧವಾರ ತಡರಾತ್ರಿ ಸಾಂಬಾ ಸೆಕ್ಟರ್ನ ಬಾರ್ಡರ್ ಔಟ್ ಪೋಸ್ಟ್ ಖೋರಾ ಬಳಿ ಭಾರತದ ಭೂಪ್ರದೇಶಕ್ಕೆ ನುಸುಳುತ್ತಿದ್ದುದನ್ನು ಬಿಎಸ್‌ಎಫ್ ಯೋಧರು ಗುರುತಿಸಿದ್ದರು. ನುಸುಳುಕೋರ ಬಿಎಸ್‌ಎಫ್ ಬೇಲಿಯನ್ನು ಸಮೀಪಿಸುತ್ತಿರುವುದನ್ನು ಗಮನಿಸಿದ ಭದ್ರತಾ ಪಡೆಗಳು ಒಳನುಸುಳುವಿಕೆ ಪ್ರಯತ್ನವನ್ನು ಯಶಸ್ವಿಯಾಗಿ ತಡೆದಿವೆ. ಹಿರಿಯ ಬಿಎಸ್‌ಎಫ್ ಮತ್ತು ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿದ್ದು, ಮೃತದೇಹವನ್ನು ಹೊರತೆಗೆಯುವ ಪ್ರಯತ್ನ ನಡೆಸಿದರು.
ಸ್ಥಳೀಯ ಪೊಲೀಸ್ ಅಂಕಿ ಅಂಶದ ಪ್ರಕಾರ, ಜಮ್ಮು ಮತ್ತು ಕಾಶ್ಮೀರದಲ್ಲಿ 2024ರ ಮೊದಲ ಏಳು ತಿಂಗಳಲ್ಲಿ 68 ಸಾವುಗಳು ವರದಿಯಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 62 ಸಾವುಗಳು ವರದಿಯಾಗಿದ್ದು, ಈ ವರ್ಷ ಹೆಚ್ಚಳವಾಗಿದೆ. ಆದರೆ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಇದು ಗಮನಾರ್ಹವಾಗಿ ಕಡಿಮೆಯಾಗಿದೆ.
2024ರ ಆರಂಭಿಕ ಏಳು ತಿಂಗಳುಗಳಲ್ಲಿ ಸಾವನ್ನಪ್ಪಿದವರಲ್ಲಿ 17 ನಾಗರಿಕರು, 17 ಭದ್ರತಾ ಸಿಬ್ಬಂದಿ ಮತ್ತು 34 ಉಗ್ರಗಾಮಿಗಳು ಸೇರಿದ್ದಾರೆ. 2019ರಲ್ಲಿ 22 ನಾಗರಿಕರು, 74 ಭದ್ರತಾ ಸಿಬ್ಬಂದಿ ಮತ್ತು 135 ಉಗ್ರಗಾಮಿಗಳು ಸೇರಿದಂತೆ ಒಟ್ಟು ಹತ್ಯೆಗೀಡಾದವರ ಸಂಖ್ಯೆ 231 ಕ್ಕೆ ತಲುಪಿತ್ತು. 2019 ಕಳೆದ ದಶಕದ ಅತ್ಯಂತ ಮಾರಣಾಂತಿಕ ವರ್ಷವಾಗಿದೆ. 2018 ಜುಲೈ ವೇಳೆಗೆ 218 ಸಾವುಗಳು ವರದಿಯಾದರೆ, 2014 ರಿಂದ ಅತಿ ಹೆಚ್ಚು 45 ನಾಗರಿಕ ಮತ್ತು 122 ಉಗ್ರಗಾಮಿಗಳು ಸಾವನ್ನಪ್ಪಿರುವುದಾಗಿ ದಾಖಲಾಗಿದೆ.
2019 ರಲ್ಲಿ, 74 ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದು, ಅತಿ ಹೆಚ್ಚು ಸಾವುನೋವುಗಳನ್ನು ಅನುಭವಿಸಿದ್ದಾರೆ. ವ್ಯತಿರಿಕ್ತವಾಗಿ, 2023 ರಲ್ಲಿ 9 ನಾಗರಿಕರು, 13 ಭದ್ರತಾ ಸಿಬ್ಬಂದಿ, 38 ಭಯೋತ್ಪಾದಕರು ಮತ್ತು ಇಬ್ಬರು ಅಪರಿಚಿತ ವ್ಯಕ್ತಿಗಳು ಸೇರಿದಂತೆ 62 ಸಾವುಗಳೊಂದಿಗೆ 2014 ರಿಂದ ಕಡಿಮೆಯಾಗಿದೆ.