ಶ್ರೀನಗರ: ಕೇಂದ್ರಾಡಳಿ ಪ್ರದೇಶವಾದ ಬಳಿಕ ಮೊದಲ ಬಾರಿಗೆ ವಿಧಾನಸಭಾ ಚುನಾವಣೆ ಎದುರಿಸಲು ಸಜ್ಜಾಗಿರುವ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಪಕ್ಷಗಳಿಂದ ಚುನಾವಣಾ ತಯಾರಿಗಳು ಭರದಿಂದ ಸಾಗಿವೆ. ಕಳೆದ ವಾರವಷ್ಟೇ ಕಾಂಗ್ರೆಸ್ ಜೊತೆಗೆ ಮೈತ್ರಿ ಸಭೆ ನಡೆಸಿದ್ದ ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ)ಯ ಉಪಾಧ್ಯಕ್ಷ ಓಮರ್ ಅಬ್ದುಲ್ಲಾ ಕೂಡ ಈ ಬಾರಿ ಚುನಾವಣೆಗೆ ಸ್ಪರ್ಧಿಸಲು ಸಜ್ಜಾಗಿದ್ದಾರೆ ಎಂದು ಪಕ್ಷ ತಿಳಿಸಿದೆ. ಅವರು ಗಂದರ್ಬಾಲ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಪಕ್ಷ ತಿಳಿಸಿದೆ. ಈ ಹಿಂದೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದ ಮಾಜಿ ಮುಖ್ಯಮಂತ್ರಿ ಇದೀಗ ಯೂಟರ್ನ್ ತೆಗೆದುಕೊಂಡಿದ್ದಾರೆ.
ನ್ಯಾಷನಲ್ ಕಾನ್ಫರೆನ್ಸ್ ಚುನಾವಣಾ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದ್ದು, 32 ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. ಇದರಲ್ಲಿ ಓಮರ್ ಅಬ್ದುಲ್ಲಾ ಗಂದರ್ಬಾಲ್ ಕ್ಷೇತ್ರದಿಂದ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಈ ಹಿಂದೆ 2009ರಿಂದ 2014ರ ವರೆಗೆ ಮುಖ್ಯಮಂತ್ರಿಯಾಗಿದ್ದಾಗ ಇದೇ ಕ್ಷೇತ್ರವನ್ನು ಅವರು ಪ್ರತಿನಿಧಿಸಿದ್ದರು.
ಪಟ್ಟಿ ಬಿಡುಗಡೆಗೆ ಮುನ್ನದಿನ ಮಾತನಾಡಿದ್ದ ಓಮರ್ ಅಬ್ದುಲ್ಲಾ, ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂಬ ತಮ್ಮ ಹೇಳಿಕೆಯನ್ನು ಮರು ಪರಿಶೀಲನೆ ಮಾಡುತ್ತೇನೆ ಎನ್ನುವ ಮೂಲಕ ಚುನಾವಣೆಗೆ ಸ್ಪರ್ಧಿಸುವ ಕುರಿತಾದ ಸುಳಿವನ್ನು ನೀಡಿದ್ದರು.
ಕಾಂಗ್ರೆಸ್ ಜೊತೆ ಮೈತ್ರಿ ಮೂಲಕ ಚುನಾವಣೆಗೆ ಸಜ್ಜಾಗಿರುವ ನ್ಯಾಷನಲ್ ಕಾನ್ಫರೆನ್ಸ್ ಸೀಟು ಹಂಚಿಕೆ ಕುರಿತಾಗಿ ನಡೆಸಿದ ಒಪ್ಪಂದವನ್ನು ಸೋಮವಾರ ಮಾಧ್ಯಮಗಳಲ್ಲಿ ತಿಳಿಸಿದ್ದರು. ನ್ಯಾಷನಲ್ ಕಾನ್ಫರೆನ್ಸ್ 51 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ, ಕಾಂಗ್ರೆಸ್ 32 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ.
ನಾಲ್ಕನೇ ಬಾರಿ ಗಂದರ್ಬಾಲ ಪ್ರತಿನಿಧಿಸಲು ಸಜ್ಜು: ಓಮರ್ ಅಬ್ದುಲ್ಲಾ ಗಂದರ್ಬಾಲ ಜಿಲ್ಲೆಯ ನುನೆರ್ ಗ್ರಾಮದವರಾಗಿದ್ದಾರೆ. 2009ರಿಂದ 2015ರ ವರೆಗೆ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿ ಹಾಗೂ ಪಕ್ಷದ ಅಧ್ಯಕ್ಷರಾಗಿ ಅವರು ಕಾರ್ಯ ನಿರ್ವಹಿಸಿದ್ದಾರೆ. ಗಂದರ್ಬಾಲ ಕ್ಷೇತ್ರವನ್ನು ಅವರು ಈಗಾಗಲೇ ಮೂರು ಬಾರಿ ಪ್ರತಿನಿಧಿಸಿದ್ದು, 2008 ಮತ್ತು 2013ರಲ್ಲಿ ಗೆಲುವು ಕಂಡರೆ, 2002ರಲ್ಲಿ ಪಿಡಿಪಿ ಅಭ್ಯರ್ಥಿ ವಿರುದ್ಧ ಸೋಲು ಕಂಡಿದ್ದರು.
ಜಮ್ಮು ಮತ್ತು ಕಾಶ್ಮೀರ ಮೂರು ಹಂತದ ಮತದಾನದಕ್ಕೆ ಸಜ್ಜಾಗಿದ್ದು, ಈ ಸಂಬಂಧ ಈಗಾಗಲೇ ಭಾರತೀಯ ಚುನಾವಣಾ ಆಯೋಗ ಸಿದ್ಧತೆ ನಡೆಸಿದೆ. ಮೊದಲ ಹಂತದ ಚುನಾವಣೆ ಸೆಪ್ಟೆಂಬರ್ 18ರಂದು 24 ಕ್ಷೇತ್ರದಲ್ಲಿ ನಡೆಯಲಿದೆ. ಎರಡನೇ ಹಂತದ ಚುನಾವಣೆ ಸೆಪ್ಟೆಂಬರ್ 25 ರಂದು ಅಕ್ಟೋಬರ್ 1ರಂದು ಮೂರನೇ ಹಂತದ ಚುನಾವಣೆ ನಡೆಯಲಿದೆ. ಮತ ಎಣಿಕೆ ಅಕ್ಟೋಬರ್ 4ರಂದು ನಡೆಯಲಿದೆ.
ಇದನ್ನೂ ಓದಿ: ಜಮ್ಮು- ಕಾಶ್ಮೀರ ಚುನಾವಣೆ: 9 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದ ಕಾಂಗ್ರೆಸ್