ವಿಶ್ವಸಂಸ್ಥೆ: ಗಡಿಯಾಚೆಗಿನ ಭಯೋತ್ಪಾದನೆಗೆ ತಕ್ಕ ಪ್ರತೀಕಾರ ಎದುರಿಸಬೇಕಾಗುತ್ತದೆ ಎಂದು ಪಾಕಿಸ್ತಾನಕ್ಕೆ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಖಡಕ್ ವಾರ್ನಿಂಗ್ ನೀಡಿದ್ದಾರೆ. ಶನಿವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದಲ್ಲಿ ಮಾತನಾಡಿದ ಅವರು, ಇತರ ದೇಶಗಳ ಮೇಲೆ ಭಯೋತ್ಪಾದಕ ದಾಳಿ ನಡೆಸಿದ ಪರಿಣಾಮ ಪಾಕಿಸ್ತಾನ ಈಗ 'ಕರ್ಮ' ಎದುರಿಸುತ್ತಿದೆ ಎಂದು ಟೀಕಿಸಿದರು.
"ಭಾರತದ ನಿಲುವನ್ನು ನಾನು ಸ್ಪಷ್ಟಪಡಿಸುತ್ತೇನೆ. ಪಾಕ್ನ ಗಡಿಯಾಚೆಗಿನ ಭಯೋತ್ಪಾದನಾ ನೀತಿ ಎಂದಿಗೂ ಯಶಸ್ವಿಯಾಗುವುದಿಲ್ಲ. ಅದಕ್ಕೆ ಖಂಡಿತಾಗಿಯೂ ತಕ್ಕ ಶಾಸ್ತಿ ಆಗಲಿದೆ" ಎಂದು ಜೈಶಂಕರ್ ಎಚ್ಚರಿಕೆ ಕೊಟ್ಟರು. ಈ ಮೂಲಕ ಜಾಗತಿಕ ವೇದಿಕೆಯಲ್ಲೇ ಭಾರತ ಕಠಿಣ ಸಂದೇಶ ರವಾನಿಸಿದೆ.
ಪಾಕಿಸ್ತಾನ ಪ್ರಧಾನಿ ಮುಹಮ್ಮದ್ ಶೆಹಬಾಜ್ ಷರೀಫ್ ಅವರು ವಿಶ್ವಸಂಸ್ಥೆಯಲ್ಲಿ ಶುಕ್ರವಾರ ಜಮ್ಮು ಕಾಶ್ಮೀರ ವಿಚಾರ ಪ್ರಸ್ತಾಪಿಸಿದ್ದರು.
"ತನ್ನ ಜನರಲ್ಲಿ ಮತಾಂಧತೆಯನ್ನು ಹುಟ್ಟುಹಾಕಿದ ದೇಶದಲ್ಲಿ, ಅದರ ಜಿಡಿಪಿಯನ್ನು ತೀವ್ರಗಾಮಿ ಮತ್ತು ಅದರ ರಫ್ತು ಪ್ರಮಾಣವನ್ನು ಭಯೋತ್ಪಾದನೆಯ ಮೂಲಕ ಮಾತ್ರ ಅಳೆಯಲು ಸಾಧ್ಯವಾಗುತ್ತದೆ" ಎಂದು ಅವರು ವಾಗ್ದಾಳಿ ನಡೆಸಿದರು.
#WATCH | New York, US | 79th session of the UN General Assembly | EAM Dr S Jaishankar says, " we heard some bizarre assertions from this very forum yesterday. let me make india's position very clear - pakistan's policy of cross-border terrorism will never succeed. and it can have… pic.twitter.com/eLzwy6ahu5
— ANI (@ANI) September 28, 2024
"ಇತರ ದೇಶಗಳ ಮೇಲಿನ ಭಯೋತ್ಪಾದಕ ದಾಳಿಗಳು ಮತ್ತು ಭಯೋತ್ಪಾದನೆಯನ್ನೇ ರಫ್ತು ಮಾಡಿರುವ ಪಾಕಿಸ್ತಾನ ಸದ್ಯ ಅದೇ ಭಯೋತ್ಪಾದನೆಗೆ ತಾನೇ ತುತ್ತಾಗುತ್ತಿದೆ. ಇದರಿಂದ ಆ ದೇಶ ಬೇರೆ ದೇಶದ ಮೇಲೆ ಗೂಬೆ ಕೂರಿಸುವಂತಿಲ್ಲ. ಇದು ಕರ್ಮ" ಎಂದು ಅವರು ಹೇಳಿದರು.
"ಅನೇಕ ದೇಶಗಳು ತಮ್ಮ ನಿಯಂತ್ರಣಕ್ಕೆ ಮೀರಿದ ಪರಿಸ್ಥಿತಿಗಳಿಂದಾಗಿ ಆರ್ಥಿಕವಾಗಿ ಹಿಂದುಳಿದಿವೆ. ಆದರೆ ಕೆಲ ದೇಶಗಳು ವಿನಾಶಕಾರಿ ಪರಿಣಾಮಗಳ ಪ್ರಜ್ಞಾಪೂರ್ವಕ ಆಯ್ಕೆಗಳನ್ನು ಮಾಡುತ್ತವೆ. ನಮ್ಮ ನೆರೆಯ ರಾಷ್ಟ್ರವಾದ ಪಾಕಿಸ್ತಾನವೂ ಇದಕ್ಕೆ ಒಂದು ಪ್ರಮುಖ ನಿದರ್ಶನ. ದುರದೃಷ್ಟವಶಾತ್, ಅವರ ದುಷ್ಕೃತ್ಯಗಳು ಇತರರ ಮೇಲೂ ಪರಿಣಾಮ ಬೀರುತ್ತವೆ, ವಿಶೇಷವಾಗಿ ನೆರೆಹೊರೆಯವರ ಮೇಲೆ ಪರಿಣಾಮ ಬೀರುತ್ತವೆ" ಎಂದು ಭಯೋತ್ಪಾದನೆ ಉತ್ತೇಜಿಸಿದ್ದರಿಂದ ಆಂತರಿಕವಾಗಿ ಎದುರಿಸುತ್ತಿರುವ ಪರಿಣಾಮಗಳ ಬಗ್ಗೆ ಜೈ ಶಂಕರ್ ವಿವರಿಸಿದರು.
"ಜಾಗತಿಕ ಭಯೋತ್ಪಾದಕರನ್ನು ಅನುಮೋದಿಸುವುದಕ್ಕೆ ರಾಜಕೀಯ ಕಾರಣಗಳಿಗಾಗಿ ವಿಶ್ವಸಂಸ್ಥೆ ಅಡ್ಡಿಪಡಿಸಬಾರದು" ಎಂದು ಚೀನಾ ಹೆಸರು ಹೇಳದೆ ತಿವಿದರು. "ಭಯೋತ್ಪಾದನೆಯು ಜಾಗತಿಕ ಎಲ್ಲ ನಿಲುವುಗಳಿಗೂ ವಿರೋಧಿಯಾಗಿದೆ. ಆದ್ದರಿಂದ ಅದರ ಎಲ್ಲ ರೂಪಗಳು ಮತ್ತು ಅಭಿವ್ಯಕ್ತಿಗಳನ್ನು ದೃಢವಾಗಿ ವಿರೋಧಿಸಬೇಕು" ಎಂದು ಜೈಶಂಕರ್ ಪ್ರತಿಪಾದಿಸಿದರು.
"ಜಮ್ಮು ಕಾಶ್ಮೀರದಲ್ಲಿ ಚುನಾವಣೆಗೆ ಅಡ್ಡಿಪಡಿಸಲು ಪಾಕಿಸ್ತಾನ ಭಯೋತ್ಪಾದನೆಯನ್ನು ಬಳಸುತ್ತಿದೆ" ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರ ಆರೋಪಗಳಿಗೆ ವಿಶ್ವಸಂಸ್ಥೆಯಲ್ಲಿನ ಭಾರತೀಯ ರಾಜತಾಂತ್ರಿಕ ಅಧಿಕಾರಿ ಭಾವಿಕಾ ಮಂಗಳಾನಂದ ಪ್ರತ್ಯುತ್ತರ ನೀಡಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ನಿಂದ ಮೀಸಲಾತಿ ಶೇ50ರಷ್ಟು ಹೆಚ್ಚಳ ಪರ ಕೂಗು, ಸಂವಿಧಾನ ಉಳಿಸಿ ಅಭಿಯಾನ - LoP Rahul Gandhi