ಲಖನೌ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಮಾಫಿಯಾ ಡಾನ್, ರಾಜಕಾರಣಿ ಮುಖ್ತಾರ್ ಅನ್ಸಾರಿ ಗುರುವಾರ ತಡರಾತ್ರಿ ಸಾವನ್ನಪ್ಪಿದ್ದಾರೆ. ಬಂದಾ ಜೈಲಿನಲ್ಲಿದ್ದ ಮುಖ್ತಾರ್ ಸಂಜೆ ಕುಸಿದು ಬಿದ್ದಿದ್ದರು. ಇದರಿಂದ ವೈದ್ಯಕೀಯ ಕಾಲೇಜಿನ ಐಸಿಯುಗೆ ಅವರನ್ನು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ವೇಳೆ ಅವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
19 ವರ್ಷಗಳಿಂದ ದೇಶದ ವಿವಿಧ ಜೈಲುಗಳಲ್ಲಿ ಮುಖ್ತಾರ್ ಅನ್ಸಾರಿ ಇದ್ದರು. ಎರಡು ದಿನಗಳ ಹಿಂದೆಯೂ ಆರೋಗ್ಯ ಹದಗೆಟ್ಟ ಕಾರಣ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು. ಮುಖ್ತಾರ್ ಅನ್ಸಾರಿ ಸಾವಿನ ಬೆನ್ನಲ್ಲೇ ಲಖನೌ, ಮೌ ಮತ್ತು ಗಾಜಿಪುರ ಜಿಲ್ಲೆಗಳಲ್ಲಿ ಅಲರ್ಟ್ ಘೋಷಿಸಲಾಗಿದೆ. ಮುಖ್ತಾರ್ ಅನ್ಸಾರಿ ಸಾವಿನ ಸುದ್ದಿ ಹರಡಿದ ತಕ್ಷಣವೇ ಗಾಜಿಪುರದ ನಿವಾಸದ ಹೊರಗೆ ಜನರು ಸೇರಿದ್ದಾರೆ.
ಮುಖ್ತಾರ್ ಅನ್ಸಾರಿ ಅವರನ್ನು ಬಂದಾ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಗಿದೆ ಎಂದು ಜೈಲಾಧಿಕಾರಿಗಳು ನನಗೆ ತಿಳಿಸಿದ್ದರು. ಆದರೆ, ಹೆಚ್ಚಿನ ಮಾಹಿತಿ ನೀಡಿಲ್ಲ ಎಂದು ಅನ್ಸಾರಿ ಪರ ವಕೀಲ ನಸೀಮ್ ಹೈದರ್ ಹೇಳಿದ್ದಾರೆ. ಇದೇ ತಿಂಗಳ ಆರಂಭದಲ್ಲಿ ವಾರಣಾಸಿಯ ವಿಶೇಷ ನ್ಯಾಯಾಲಯವು 34 ವರ್ಷ ಹಳೆಯದಾದ ನಕಲಿ ಶಸ್ತ್ರಾಸ್ತ್ರ ಪರವಾನಗಿ ಪ್ರಕರಣದಲ್ಲಿ ಅನ್ಸಾರಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಪೊಲೀಸ್ ಇಲಾಖೆಯ ಮಾಹಿತಿ ಪ್ರಕಾರ, ಉತ್ತರ ಪ್ರದೇಶ, ಪಂಜಾಬ್, ನವದೆಹಲಿ ಮತ್ತು ಇತರ ರಾಜ್ಯಗಳಲ್ಲಿ ಅನ್ಸಾರಿ ವಿರುದ್ಧ ಸುಮಾರು 60 ಪ್ರಕರಣಗಳು ದಾಖಲಾಗಿದ್ದವು.