ಇಂಧೋರ್ (ಮಧ್ಯಪ್ರದೇಶ): ವ್ಯಕ್ತಿಯೊಬ್ಬ ನಕಲಿ ದಾಖಲೆಗಳನ್ನು ಕೊಟ್ಟು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ)ನಲ್ಲಿ 10 ವರ್ಷಗಳ ಕಾಲ ಕೆಲಸ ಮಾಡಿರುವ ಮಹಾ ವಂಚನೆಯ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.
ಪೊಲೀಸರ ಪ್ರಕಾರ, ಮಥುರಾದ ವ್ಯಕ್ತಿಯೊಬ್ಬ ಪರ್ವತ್ ಆದಿವಾಸಿ ಎಂದು ಹೇಳಿಕೊಂಡು ಐಟಿಬಿಪಿಯಲ್ಲಿ ಜವಾನ್ ಆಗಿ ಕೆಲಸ ಮಾಡುತ್ತಿದ್ದ. ಆರೋಪಿ ಮಧ್ಯಪ್ರದೇಶದ ದಮೋಹ್ ಜಿಲ್ಲೆಯ ನಿವಾಸಿ ಎಂದು ದಾಖಲೆಗಳನ್ನು ಸಲ್ಲಿಸಿದ್ದ. ಮನೆಗೆ ಭೇಟಿ ನೀಡುವ ಸಲುವಾಗಿ ರಜೆ ತೆಗೆದುಕೊಂಡಿದ್ದ ಆರೋಪಿ, ಹಲವು ತಿಂಗಳು ಕಳೆದರೂ ಕೆಲಸಕ್ಕೆ ವಾಪಸ್ ಆಗಿರಲಿಲ್ಲ. ದೀರ್ಘಕಾಲ ಗೈರುಹಾಜರಾದ ಕಾರಣ ಆರೋಪಿ ನೀಡಿದ ನಕಲಿ ವಿಳಾಸಕ್ಕೆ ನೋಟಿಸ್ ಕಳುಹಿಸಲಾಗಿತ್ತು. ಆದರೆ ಇದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.
ಇದಾದ ನಂತರ, ಐಟಿಬಿಪಿ ಆತನನ್ನು ಬಂಧಿಸುವಂತೆ ದಾಮೋಹ್ ಪೊಲೀಸರಿಗೆ ಪತ್ರ ಬರೆದಿತ್ತು. ಆದರೆ ದಾಮೋಹ್ ಪೊಲೀಸರಿಗೆ ಆತನ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಬಳಿಕ ಆತನ ಪತ್ತೆಗೆ ಐಟಿಬಿಪಿ ಜವಾನ್ವೊಬ್ಬರನ್ನು ದಾಮೋಹ್ನ ಪಥರಿಯಾ ಗ್ರಾಮಕ್ಕೆ ಕಳುಹಿಸಿತ್ತು. ಯೋಧ ಆರೋಪಿ ನೀಡಿದ್ದ ವಿಳಾಸಕ್ಕೆ ಹೋಗಿ ನೋಡಿದಾಗ ಪರ್ವತ್ ಆದಿವಾಸಿ ಬೇರೆ ವ್ಯಕ್ತಿ ಮತ್ತು ಇಷ್ಟು ವರ್ಷ ಐಟಿಬಿಪಿಯಲ್ಲಿ ಕೆಲಸ ಮಾಡಿದವನೇ ಬೇರೆ ವ್ಯಕ್ತಿ ಎಂಬ ಅಂಶ ಬೆಳಕಿಗೆ ಬಂದಿದೆ.
ಈ ಕುರಿತು ಪರ್ವತ್ ಆದಿವಾಸಿ ಅವರನ್ನು ವಿಚಾರಿಸಿದಾಗ, "ನನ್ನ ಸಹೋದರಿಯೊಬ್ಬರು ಮಥುರಾದಲ್ಲಿ ವಾಸಿಸುತ್ತಿದ್ದಾರೆ. ನಾನು ಆಗಾಗ್ಗೆ ಅವರ ಮನೆಗೆ ಭೇಟಿ ನೀಡುತ್ತಿದ್ದೆ. ಈ ವೇಳೆ ಸಾಲಕ್ಕಾಗಿ ಸ್ಥಳೀಯ ವ್ಯಕ್ತಿಗೆ ನನ್ನ ದಾಖಲೆಗಳನ್ನು ನೀಡಿದ್ದೆ. ಆ ವ್ಯಕ್ತಿ ನನಗೆ ಚೆಕ್ ನೀಡಿದ್ದು, ನಂತರ ಅದು ನಕಲಿ ಎಂದು ಗೊತ್ತಾಯಿತು. ಅಂದಿನಿಂದ, ಆ ವ್ಯಕ್ತಿಯನ್ನು ಮರಳಿ ಭೇಟಿಯಾಗಿಲ್ಲ" ಎಂದು ತಿಳಿಸಿದ್ದಾರೆ.
"ವ್ಯಕ್ತಿಯೊಬ್ಬ ಪಥರಿಯಾ ಗ್ರಾಮದ ನಿವಾಸಿ ಪರ್ವತ್ ಆದಿವಾಸಿ ಅವರ ದಾಖಲೆಗಳನ್ನು ಬಳಸಿಕೊಂಡು ಐಟಿಬಿಪಿಯಲ್ಲಿ ಕೆಲಸ ಮಾಡುತ್ತಿದ್ದ ಅಂಶ ಬೆಳಕಿಗೆ ಬಂದಿದೆ. ಆರೋಪಿ ಹಲವು ದಿನಗಳಿಂದ ತಲೆಮರೆಸಿಕೊಂಡಿದ್ದಾನೆ. ಆರೋಪಿ ಪತ್ತೆಗೆ ಶೋಧ ನಡೆಸಲಾಗುತ್ತಿದೆ" ಎಂದು ದಾಮೋಹ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೃತಕೀರ್ತಿ ಸೋಮವಂಶಿ ಮಾಹಿತಿ ನೀಡಿದ್ದಾರೆ.
ಆರೋಪಿಯನ್ನು ಹುಡುಕಲು ಬಂದ ಐಟಿಬಿಪಿ ಜವಾನ್ ಅಮಿತ್ ಕುಮಾರ್ ಮಾತನಾಡಿ, "ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ನಕಲಿ ದಾಖಲೆಗಳನ್ನು ಬಳಸಿಕೊಂಡು ಕೆಲಸ ಮಾಡುತ್ತಾ ವಂಚಿಸಿದ್ದ ಆರೋಪಿಯನ್ನು ಶಿಕ್ಷಿಸಲಾಗುವುದು" ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪಕ್ಷಪಾತ ಆರೋಪ: ಮಹಾರಾಷ್ಟ್ರ ಡಿಜಿಪಿ ರಶ್ಮಿ ಶುಕ್ಲಾ ವರ್ಗಾವಣೆಗೆ ಚುನಾವಣಾ ಆಯೋಗ ಆದೇಶ