ಪೋರಬಂದರ್: ಗುಜರಾತಿನ ಕರಾವಳಿಯು ಮಾದಕವಸ್ತು ಕಳ್ಳಸಾಗಣೆ ಕೇಂದ್ರವಾಗಿ ಮಾರ್ಪಟ್ಟಿದೆ. ಇದರ ಹಿನ್ನೆಲೆ ಗುಜರಾತ್ ಎಟಿಎಸ್ ಮತ್ತು ಭಾರತೀಯ ನೌಕಾಪಡೆ, ಎನ್‌ಸಿಬಿಯಿಂದ ನಡೆದ ಕಾರ್ಯಾಚರಣೆ ವೇಳೆ, ಸಮುದ್ರ ಗಡಿಯಲ್ಲಿ ಚರಸ್ ಸೇರಿದಂತೆ ಅಪಾರ ಪ್ರಮಾಣದ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವರ ಮೌಲ್ಯ 1 ಸಾವಿರ ಕೋಟಿ ರೂ.ಗೂ ಹೆಚ್ಚು ಎಂದು ಅಂದಾಜಿಸಲಾಗಿದೆ.
1 ಸಾವಿರ ಕೋಟಿಗೂ ಅಧಿಕ ಮೌಲ್ಯದ ಡ್ರಗ್ಸ್ ವಶಕ್ಕೆ: ನಿರ್ದಿಷ್ಟ ಮಾಹಿತಿ ಆಧರಿಸಿ ಗುಜರಾತ್ ಎಟಿಎಸ್, ಭಾರತೀಯ ನೌಕಾಪಡೆ ಮತ್ತು ಎನ್ಸಿಬಿ ಜಂಟಿಯಾಗಿ ಅರಬ್ಬಿ ಸಮುದ್ರದಲ್ಲಿ ಕಾರ್ಯಾಚರಣೆ ಕೈಗೊಂಡಿದ್ದವು. ನಾಲ್ವರು ಇರಾನ್ ಸಿಬ್ಬಂದಿಯಿದ್ದ ದೋಣಿಯನ್ನು ತಡೆದು ನಿಲ್ಲಿಸಲಾಯಿತು. 1,000 ಕೋಟಿ ಮೌಲ್ಯದ ಅಂದಾಜು 2,000 ರಿಂದ 3,000 ಕೆಜಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಪತ್ರಿಕಾಗೋಷ್ಠಿ ನಡೆಸಿ ಅಧಿಕೃತ ವಿವರಗಳನ್ನು ನೀಡಿದೆ. ಅರಬ್ಬಿ ಸಮುದ್ರದಲ್ಲಿ ಕಾರ್ಯಾಚರಣೆಯ ಸಂದರ್ಭದಲ್ಲಿ, ದೋಣಿಯಿಂದ ಅಪಾರ ಪ್ರಮಾಣದ ಚರಸ್ (ಹಶಿಶ್) ಸೇರಿದಂತೆ ವಿವಿಧ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗುಜರಾತ್ ಎಟಿಎಸ್ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತನಿಖೆಯಿಂದ ಹೊರಬೀಳಲಿದೆ ಆಘಾತಕಾರಿ ಸಂಗತಿಗಳು: ವಶಪಡಿಸಿಕೊಂಡ ದೋಣಿ ಹಾಗೂ ಬಂಧನಕ್ಕೆ ಒಳಗಾಗಿರುವ ಸಿಬ್ಬಂದಿಯನ್ನು ದಡಕ್ಕೆ ಕರೆದುಕೊಂಡು ಬರಲಾಯಿತು. ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಪೋರಬಂದರ್ಗೆ ಬರುವ ಸಾಧ್ಯತೆ ಇತ್ತು. ಮೂರು ದಿನಗಳ ಹಿಂದೆ, ವೆರಾವಲ್ ಬಂದರಿನಿಂದ ಮೀನುಗಾರಿಕಾ ದೋಣಿಯಿಂದ 300 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿತ್ತು. ಆದ್ರೆ ಇದೀಗ ಇಷ್ಟು ದೊಡ್ಡ ಪ್ರಮಾಣದ ಡ್ರಗ್ಸ್ ಹೇಗೆ ಬಂದಿತು, ಯಾರು ಕಳುಹಿಸಿದ್ದಾರೆ ಮತ್ತು ಡ್ರಗ್ಸ್ ದಂಧೆ ನಡೆಸುತ್ತಿದ್ದವರು ಯಾರು ಮತ್ತು ಇಷ್ಟು ದೊಡ್ಡ ಪ್ರಮಾಣದ ಡ್ರಗ್ಸ್ ಆರ್ಡರ್ ಮಾಡಿದ್ದು ಏಕೆ ಎಂಬ ಆಘಾತಕಾರಿ ಸಂಗತಿಗಳು ತನಿಖೆಯಿಂದ ಹೊರಬೀಳಲಿವೆ.
ಇದನ್ನೂ ಓದಿ: ತೆರೆದ ವಾಹನದಲ್ಲಿ ಆಗಮಿಸಿದ ಪ್ರಧಾನಿ; ಮೋದಿ ಮೇಲೆ ಮೊಬೈಲ್ ಎಸೆತ - ವಿಡಿಯೋ ವೈರಲ್