ಉಧಂಪುರ (ಜಮ್ಮು ಮತ್ತು ಕಾಶ್ಮೀರ): ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡೆದ ಗುಂಡಿನ ಚಕಮಕಿಯಲ್ಲಿ ಗ್ರಾಮ ರಕ್ಷಣಾ ಸಿಬ್ಬಂದಿ (ವಿಡಿಜಿ) ಸದಸ್ಯರೊಬ್ಬರು ಮೃತಪಟ್ಟಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ.
ಉಧಂಪುರ ಜಿಲ್ಲೆಯ ಖಾನೇಡ್ ನಿವಾಸಿ ಮೊಹಮ್ಮದ್ ಷರೀಫ್ ಮೃತರೆಂದು ಗುರುತಿಸಲಾಗಿದೆ. ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ ಇವರನ್ನು ಆಸ್ಪತ್ರೆಗೆ ದಾಖಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ. ಭಯೋತ್ಪಾದಕರಿಗೆ ಕಡಿವಾಣ ಹಾಕಲು ಜಮ್ಮು ಮತ್ತು ಕಾಶ್ಮೀರ ಪೊಲೀಸರೊಂದಿಗೆ ಸೇರಿ ಹಲವಾರು ವರ್ಷಗಳಿಂದ ಗ್ರಾಮ ರಕ್ಷಣಾ ಸಿಬ್ಬಂದಿ ಶ್ರಮಿಸುತ್ತಿದ್ದಾರೆ.
ಬಸಂತಗಢ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ಸಂಜೆ ಅನುಮಾನಾಸ್ಪದ ವ್ಯಕ್ತಿಗಳ ಚಲನವಲನದ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಈ ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು. ಇದರ ಭಾಗವಾಗಿ ಇಂದು ಬೆಳಗ್ಗೆ ಬಸಂತಗಢ ಪನಾರಾ ಗ್ರಾಮದಲ್ಲಿ ಪೊಲೀಸ್ ಮತ್ತು ವಿಡಿಜಿ ತಂಡ ಗಸ್ತು ತಿರುಗುತ್ತಿತ್ತು. ಈ ವೇಳೆ, ಶಂಕಿತ ಭಯೋತ್ಪಾದಕರು ಅಡಗಿರುವ ಸುಳಿವು ಸಿಕ್ಕಿತ್ತು.
ಅಂತೆಯೇ, ಶೋಧ ಚುರುಕುಗೊಳಿಸಿದಾಗ 7:45ರ ಸುಮಾರಿಗೆ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಅರ್ಧ ಗಂಟೆಗೂ ಹೆಚ್ಚು ಕಾಲ ಈ ಪರಸ್ಪರ ಗುಂಡಿನ ದಾಳಿಯ ನಂತರ ಭಯೋತ್ಪಾದಕರು ಕಾಡಿನತ್ತ ಓಡಿಹೋಗಿದ್ದಾರೆ. ಅವರನ್ನು ಭದ್ರತಾ ಪಡೆಗಳು ಬೆನ್ನಟ್ಟುತ್ತಿದ್ದಾಗ ಉಗ್ರರ ಗುಂಡೇಟಿನಿಂದ ಮೊಹಮ್ಮದ್ ಷರೀಫ್ ಗಂಭೀರವಾಗಿ ಗಾಯಗೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಗುಜರಾತ್ ಕರಾವಳಿಯಲ್ಲಿ ₹ 600 ಕೋಟಿ ಮೌಲ್ಯದ 86 ಕೆಜಿ ಡ್ರಗ್ಸ್ ಜಪ್ತಿ: ಪಾಕ್ ದೋಣಿ, 14 ಜನ ವಶಕ್ಕೆ