ನವದೆಹಲಿ: ದೇಶದಲ್ಲಿ ಪ್ರತಿವರ್ಷ 41.36 ಲಕ್ಷ ಟನ್ (ಟಿಪಿಎ) ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು, ವಾರ್ಷಿಕ 7.82 ಲಕ್ಷ ಟಿಪಿಎ ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯೊಂದಿಗೆ ತಮಿಳುನಾಡು ಅತಿದೊಡ್ಡ ಮಾಲಿನ್ಯಕಾರಕ ರಾಜ್ಯವಾಗಿದೆ ಎಂದು ಸೋಮವಾರ ಸಂಸತ್ತಿಗೆ ಮಾಹಿತಿ ನೀಡಲಾಯಿತು.
2018-19ರಲ್ಲಿ 33.6 ಲಕ್ಷ ಟಿಪಿಎ, 2019-20ರಲ್ಲಿ 34.69 ಲಕ್ಷ ಟಿಪಿಎ, 2020-21ರಲ್ಲಿ 41.26 ಲಕ್ಷ ಟಿಪಿಎ, 2021-22ರಲ್ಲಿ 39.01 ಲಕ್ಷ ಟಿಪಿಎ ಮತ್ತು 2022-23ರಲ್ಲಿ 41.36 ಲಕ್ಷ ಟಿಪಿಎ ಹೀಗೆ ದೇಶದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆ ಸ್ಥಿರವಾಗಿ ಹೆಚ್ಚುತ್ತಿದೆ ಎಂದು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಲೋಕಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
5.28 ಲಕ್ಷ ಟಿಪಿಎ ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯೊಂದಿಗೆ ತೆಲಂಗಾಣವು ಪ್ಲಾಸ್ಟಿಕ್ ತ್ಯಾಜ್ಯದ ಎರಡನೇ ಅತಿದೊಡ್ಡ ರಾಜ್ಯವಾಗಿದೆ ಎಂದು ಸಚಿವರು ಅಮರ್ ಸಿಂಗ್ ಅವರ ಪ್ರಶ್ನೆಗೆ ಉತ್ತರಿಸಿದರು.
ಈಗಾಗಲೇ ವಾಯು ಮತ್ತು ಜಲ ಮಾಲಿನ್ಯವನ್ನು ನಿಭಾಯಿಸಲು ಹೆಣಗಾಡುತ್ತಿರುವ ದೆಹಲಿ ವಾರ್ಷಿಕ 4.03 ಲಕ್ಷ ಟನ್ಗಳೊಂದಿಗೆ ಮೂರನೇ ಅತಿದೊಡ್ಡ ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದಕನಾಗಿ ಹೊರಹೊಮ್ಮಿದೆ. ಮಹಾರಾಷ್ಟ್ರ (3.95 ಲಕ್ಷ ಟಿಪಿಎ) ಮತ್ತು ಕರ್ನಾಟಕ (3.6 ಲಕ್ಷ ಟಿಪಿಎ) ನಂತರದ ಸ್ಥಾನಗಳಲ್ಲಿವೆ.
ಉತ್ತರ ಪ್ರದೇಶದ 2022-23ರ ಅಂಕಿಅಂಶಗಳು ಲಭ್ಯವಿಲ್ಲದಿದ್ದರೂ, 2021-2022ರಲ್ಲಿ ರಾಜ್ಯದಲ್ಲಿ 3.75 ಲಕ್ಷ ಟಿಪಿಎ ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯಾಗಿದೆ ಉತ್ಪಾದಿಸಿದೆ ಎಂದು ಸಚಿವರು ಮಾಹಿತಿ ನೀಡಿದರು.
ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ಘಟಕಗಳ (ಪಿಡಬ್ಲ್ಯೂಎಂಯು) ದತ್ತಾಂಶವನ್ನು ಹಂಚಿಕೊಂಡ ಸಚಿವರು, ದೇಶದಲ್ಲಿ 978 ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ಘಟಕಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು. ತಮಿಳುನಾಡಿನಲ್ಲಿ ಗರಿಷ್ಠ 326, ಆಂಧ್ರಪ್ರದೇಶದಲ್ಲಿ 139, ಬಿಹಾರದಲ್ಲಿ 102, ಉತ್ತರ ಪ್ರದೇಶದಲ್ಲಿ 68, ಪಶ್ಚಿಮ ಬಂಗಾಳ ಮತ್ತು ಉತ್ತರಾಖಂಡದಲ್ಲಿ ತಲಾ 51, ಕೇರಳದಲ್ಲಿ 48, ಜಮ್ಮು ಮತ್ತು ಕಾಶ್ಮೀರದಲ್ಲಿ 43, ತೆಲಂಗಾಣ ಮತ್ತು ಹಿಮಾಚಲ ಪ್ರದೇಶದಲ್ಲಿ ತಲಾ 29 ಪಿಡಬ್ಲ್ಯೂಎಂಯು ಗಳಿವೆ.
"ಪಿಡಬ್ಲ್ಯೂಎಂಯುಗಳ ಸ್ಥಾಪನೆಗೆ ಸಂಬಂಧಿಸಿದಂತೆ, ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಎರಡನೇ ಹಂತದ ಮಾರ್ಗಸೂಚಿಗಳ ಪ್ರಕಾರ ಘಟಕ ನಿರ್ಮಾಣಕ್ಕೆ ಪ್ರತಿ ಬ್ಲಾಕ್ಗೆ 16 ಲಕ್ಷ ರೂ.ಗಳವರೆಗೆ ಆರ್ಥಿಕ ಸಹಾಯ ನೀಡಲಾಗುತ್ತಿದೆ. ಹೆಚ್ಚುವರಿಯಾಗಿ, ಅಗತ್ಯವನ್ನು ಅವಲಂಬಿಸಿ, ಪಿಡಬ್ಲ್ಯೂಎಂಯುಗಳನ್ನು ಆ ಬ್ಲಾಕ್ಗಳಿಗೆ ಲಭ್ಯವಿರುವ ಒಟ್ಟಾರೆ ಧನಸಹಾಯ ಮಿತಿಯೊಳಗೆ ಒಂದಕ್ಕಿಂತ ಹೆಚ್ಚು ಬ್ಲಾಕ್ಗಳಲ್ಲಿ ಕ್ಲಸ್ಟರ್ ಮೋಡ್ನಲ್ಲಿ ಸ್ಥಾಪಿಸಬಹುದು." ಎಂದು ಸಚಿವರು ತಿಳಿಸಿದರು.
ಮನೆ-ಮನೆ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಣೆಯ ಅನುಷ್ಠಾನವನ್ನು ಹೆಚ್ಚಿಸಲು ಸರ್ಕಾರ ಕೈಗೊಂಡ ಹಾಗೂ ಕೈಗೊಳ್ಳಲು ಉದ್ದೇಶಿಸಿರುವ ಕ್ರಮಗಳೇನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ನಿಯಮಗಳು, 2016ರ ಪ್ರಕಾರ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಣೆ ಹಾಗೂ ಸಾಗಾಟ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯಿತಿಗಳ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಇದನ್ನೂ ಓದಿ: 'ನಾವೇನು ಲಾಲಿಪಾಪ್ ತಿನ್ತಿರ್ತೀವಾ?' ಬಂಗಾಳ ನಮ್ದೆಂದ ಬಾಂಗ್ಲಾದೇಶಕ್ಕೆ ಸಿಎಂ ಮಮತಾ ತಿರುಗೇಟು