ನವದೆಹಲಿ: ಭಾರತ ಪ್ರವಾಸದಲ್ಲಿರುವ ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ದಿಸ್ಸಾನಾಯಕೆ ಅವರಿಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ನವದೆಹಲಿಯಲ್ಲಿ ಭೇಟಿಯಾಗಿದ್ದು, ಉಭಯ ದೇಶಗಳ ನಡುವೆ ಪ್ರಮುಖ ಒಡಂಬಡಿಕೆಗಳಿಗೆ ಸಹಿ ಬಿದ್ದಿದೆ.
ಬಳಿಕ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಶ್ರೀಲಂಕಾದ ಅಭಿವೃದ್ಧಿಗೆ ಭಾರತದ ಬೆಂಬಲ ದೃಢವಾಗಿದೆ. ಇದುವರೆಗೆ ನಾವು 5 ಬಿಲಿಯನ್ ಡಾಲರ್ ಸಾಲ ನೀಡಿದ್ದೇವೆ. ಭಾರತದ ಸಹಾಯದಿಂದ ಮಹೊ-ಅನುರಧಾಪುರ ರೈಲ್ವೆ ಸಿಗ್ನಲಿಂಗ್ ವ್ಯವಸ್ಥೆ ಮತ್ತು ಕಂಕಸತುರೈ ಬಂದರಿನ ಪುನರ್ವಸತಿ ಕೆಲಸ ನಡೆಯಲಿದೆ ಎಂದು ಅವರು ಇದೇ ವೇಳೆ ತಿಳಿಸಿದರು.
ಶ್ರೀಲಂಕಾದ ಜೊತೆಗೆ ಭಾರತದ ಅಭಿವೃದ್ಧಿ ಸಹಕಾರದ ಹೊಸ ಉಪಕ್ರಮಗಳ ಕುರಿತು ಮುಂದುವರೆದು ಮಾಹಿತಿ ನೀಡಿದ ಪ್ರಧಾನಿ, ಮುಂದಿನ ಐದು ವರ್ಷ ಜಾಫ್ನಾ ಯುನಿವರ್ಸಿಟಿ ಮತ್ತು ಪೂರ್ವ ಪ್ರಾಂತ್ಯದಲ್ಲಿ 200 ವಿದ್ಯಾರ್ಥಿಗಳಿಗೆ ಮಾಸಿಕ ಸ್ಕಾಲರ್ಶಿಪ್ ನೀಡಲಾಗುವುದು. ಹಾಗೆಯೇ ಮುಂದಿನ ಐದು ವರ್ಷ ಶ್ರೀಲಂಕಾದ 1,500 ನಾಗರಿಕ ಸೇವಾದಾರರಿಗೆ ಭಾರತದಲ್ಲಿ ತರಬೇತಿ ನೀಡಲಾಗುವುದು ಎಂದರು.
ಗೃಹ, ನವೀಕರಿಸಬಹುದಾದ ವಿದ್ಯುತ್ ಶಕ್ತಿ, ಕೃಷಿ, ಡೈರಿ, ಮೀನುಗಾರಿಕೆ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಗೆ ಭಾರತ ಒತ್ತು ನೀಡಲಿದೆ. ಶ್ರೀಲಂಕಾದಲ್ಲಿನ ಡಿಜಿಟಲ್ ಯೋಜನೆಯಲ್ಲಿಯೂ ಭಾರತ ಭಾಗಿಯಾಗಲಿದೆ ಎಂದು ತಿಳಿಸಿದರು.
ಭಾರತ ಮತ್ತು ಶ್ರೀಲಂಕಾ ನಡುವೆ 2,500 ವರ್ಷಗಳ ಹಳೆಯ ಸಂಬಂಧವಿದೆ. ಪುರಾತನ ನಾಗರಿಕತೆ ಮತ್ತು ಇತಿಹಾಸದ ನಂಟಿದೆ. ಇದರ ಜೊತೆಗೆ, ನೆರೆಹೊರೆ ಮೊದಲು ಎಂಬ ನಮ್ಮ ನೀತಿಯಲ್ಲಿ ಇದು ಸಂಪರ್ಕವನ್ನು ಹೆಚ್ಚಿಸುತ್ತದೆ. ಭದ್ರತೆ ಮತ್ತು ಬೆಳವಣಿಗೆ ಕೂಡ ಭಾರತದ ಸಾಗರ ಯೋಜನೆಯ ಭಾಗ ಎಂದು ಹೇಳಿದರು.
ಇದನ್ನೂ ಓದಿ: ಭಾರತ ಪ್ರವಾಸ ಕೈಗೊಂಡಿರುವ ಶ್ರೀಲಂಕಾ ಅಧ್ಯಕ್ಷ; ಇಂದು ಪ್ರಧಾನಿ ಭೇಟಿಯಾಗಲಿರುವ ದಿಸ್ಸಾನಾಯಕೆ