ಬಿಹಾರ: ಇಲ್ಲಿಯ ಗೋಪಾಲಗಂಜ್ ಲೋಕಸಭಾ ಕ್ಷೇತ್ರಕ್ಕೆ ಮೇ 25 ರಂದು 6ನೇ ಹಂತದಲ್ಲಿ ಮತದಾನ ನಡೆಯಲಿದ್ದು, ಅಭ್ಯರ್ಥಿಗಳು ಈಗಾಗಲೇ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ತರಹೇವಾರಿ ಪ್ರಚಾರದ ಮೂಲಕ ಮತದಾರರ ಗಮನ ಸೆಳೆಯರಲು ಇನ್ನಿಲ್ಲದ ಕಸರತ್ತಿಗೆ ಮುಂದಾಗಿದ್ದಾರೆ. ಅದರಲ್ಲಿ ಸ್ವತಂತ್ರ ಅಭ್ಯರ್ಥಿಯೊಬ್ಬ ಕತ್ತೆಯ ಮೇಲೆ ಕುಳಿತು ಕ್ಷೇತ್ರದಲ್ಲಿ ವಿಭಿನ್ನವಾಗಿ ಪ್ರಚಾರ ನಡೆಸುವ ಮೂಲಕ ಸುದ್ದಿಯಾಗಿದ್ದಾರೆ. ಕುಚಯ್‌ಕೋಟ್ ಬ್ಲಾಕ್‌ನ ಶ್ಯಾಮಪುರ ಗ್ರಾಮದ ಸತ್ಯೇಂದ್ರ ಬೈಠಾ ಎಂಬುವರೇ ಕತ್ತೆ ಮೇಲೆ ಕುಳಿತು ಕ್ಷೇತ್ರದ ಪ್ರಚಾರ ನಡೆಸಿರುವ ಸ್ವತಂತ್ರ ಅಭ್ಯರ್ಥಿ.
![Independent candidate takes donkey ride to campaign in Bihar's Gopalganj](https://etvbharatimages.akamaized.net/etvbharat/prod-images/18-05-2024/21499388_donkly-2.jpg)
ನಾಮಪತ್ರ ಸಲ್ಲಿಸಲು ಕತ್ತೆಯ ಮೇಲೆ ಸವಾರಿ ಮಾಡಿಕೊಂಡು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದ ಸತ್ಯೇಂದ್ರ ಬೈಠಾ, ತಾವು ಕತ್ತೆಯ ಮೇಲೆ ಕುಳಿತುಕೊಂಡೇ ಪ್ರಚಾರಕ್ಕೆ ತೆರಳುವುದಾಗಿ ಹೇಳಿದ್ದರು. ಅದರಂತೆ ಅಲ್ಲಿಂದ ಮರಳುವಾಗಲೂ ಕತ್ತೆ ಮೇಲೆ ಕುಳಿತು ಕ್ಷೇತ್ರದ ಗಲ್ಲಿ ಗಲ್ಲಿಗೆ ತೆರಳಿ ತಮಗೆ ಮತ ನೀಡುವಂತೆ ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಅವರ ಈ ವಿಭಿನ್ನ ಪ್ರಚಾರದ ಶೈಲಿ ನೋಡಲೆಂದೇ ನೂರಾರು ಜನ ಬೀದಿಗೆ ಆಗಮಿಸಿದ್ದರು.
'ಚುನಾವಣೆಯಲ್ಲಿ ಗೆದ್ದರೆ ಗೋಪಾಲಗಂಜ್ ಜಿಲ್ಲೆಯನ್ನು ಸ್ವಚ್ಛ ಮಾಡುತ್ತೇವೆ, ಸಕ್ಕರೆ ಕಾರ್ಖಾನೆ ತೆರೆಯುವೆ, ವಿಶ್ವವಿದ್ಯಾಲಯ ನಿರ್ಮಿಸುವೆ, ನೈರ್ಮಲ್ಯವೇ ನನ್ನ ಮೊದಲ ಆದ್ಯತೆ ಎಂದು ಭರವಸೆ ನೀಡಿರುವ ಸತ್ಯೇಂದ್ರ ಬೈಠಾ, ಈ ಹಿಂದೆ ಚುನಾವಣೆಯಲ್ಲಿ ಗೆದ್ದವರಾರೂ ಐದು ವರ್ಷಗಳ ಕಾಲ ಜಿಲ್ಲೆಯಲ್ಲಿ ಕಾಣಿಸಿಕೊಂಡಿಲ್ಲ, ನಾನು ಸ್ಥಳೀಯ ನಿವಾಸಿಯಾಗಿದ್ದು, ಸಾರ್ವಜನಿಕರಿಗೆ 24 ಗಂಟೆಯೂ ಲಭ್ಯವಿದ್ದೇನೆ' ಎಂದು ಈ ವೇಳೆ ಮತದಾರರಿಗೆ ತಮ್ಮ ಅನಿಸಿಕೆ ಹೇಳಿಕೊಂಡಿದ್ದಾರೆ.
![Independent candidate takes donkey ride to campaign in Bihar's Gopalganj](https://etvbharatimages.akamaized.net/etvbharat/prod-images/18-05-2024/21499388_donkly-3.jpg)
'ಚುನಾವಣೆಯಲ್ಲಿ ಗೆದ್ದ ನಂತರ ಎಲ್ಲರೂ ಐದು ವರ್ಷಗಳ ಕಾಲ ಮತದಾರರನ್ನು ಮೂರ್ಖರನ್ನಾಗಿ ಮಾಡುತ್ತಾರೆ. ಗೋಪಾಲಗಂಜ್ ಕ್ಷೇತ್ರ 30-40 ವರ್ಷಗಳಿಂದ ಇದ್ದಂತೆ ಇದೆ. ಯಾವ ಜನಪ್ರತಿನಿಧಿಯೂ ಅಭಿವೃದ್ಧಿ ಮಾಡಿಲ್ಲ. ಗೆದ್ದವರೆಲ್ಲರೂ ತಮ್ಮ ತಮ್ಮ ಮನೆಗಳನ್ನು ಮಾತ್ರ ಅಭಿವೃದ್ಧಿ ಮಾಡಿಕೊಂಡಿದ್ದಾರೆ. ತಾವು ಗೆದ್ದು ಮತದಾರರನ್ನು ಸೋಲಿಸಿದ್ದಾರೆ. ಹೀಗಾಗಿ ಸಾರ್ವಜನಿಕರಿಗೆ ಅರಿವು ಮೂಡಿಸಲು ಕತ್ತೆ ಮೇಲೆ ಕುಳಿತು ಪ್ರಚಾರಕ್ಕೆ ಬಂದಿರುವೆ' ಎಂದಿದ್ದಾರೆ.
ಆದರೆ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಕತ್ತೆ ಮೇಲೆ ಕೂತು ಪ್ರಚಾರ ನಡೆಸುತ್ತಿದ್ದಾರೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಗೋಪಾಲ್‌ಗಂಜ್ ಲೋಕಸಭಾ ಕ್ಷೇತ್ರದಿಂದ ಡಾ.ಅಲೋಕ್ ಕುಮಾರ್ ಸುಮನ್ ಅವರನ್ನು ಎನ್‌ಡಿಎ ತನ್ನ ಅಭ್ಯರ್ಥಿಯನ್ನಾಗಿ ಮಾಡಿದ್ದು ಇಂಡಿಯಾ ಒಕ್ಕೂಟ ವಿಐಪಿ ಚಂಚಲ್ ಕುಮಾರ್ ಅಲಿಯಾಸ್ ಚಂಚಲ್ ಪಾಸ್ವಾನ್ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಮಾಡಿದೆ. ಮೇ 25 ರಂದು ಮತದಾನ ನಡೆಯಲಿದೆ.