ಚೆನ್ನೈ/ಕೃಷ್ಣಗಿರಿ (ತಮಿಳುನಾಡು): ಕರ್ನಾಟಕದ ಬೆಂಗಳೂರಿನ ಕೆ.ಆರ್.ಪುರ ಶಾಸಕ ಬೈರತಿ ಬಸವರಾಜ್ ಅವರ ಆಪ್ತ ಸಹಾಯಕರ (ಪಿಎ) ಸಂಬಂಧಿ ಮನೆ ಮೇಲೆ ತಮಿಳುನಾಡಿನ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕೃಷ್ಣಗಿರಿ ಜಿಲ್ಲೆಯ ಹೊಸೂರಿನಲ್ಲಿರುವ ಲೋಕೇಶ್ ಕುಮಾರ್ ಎಂಬುವರ ಮನೆ ಮೇಲೆ ಈ ದಾಳಿ ಮಾಡಲಾಗಿದ್ದು, 100 ಪವನ್ ಚಿನ್ನಾಭರಣ ಮತ್ತು 1.20 ಕೋಟಿ ರೂಪಾಯಿ ನಗದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಈ ಲೋಕೇಶ್ ಕುಮಾರ್ ಎಸ್ಎಬಿಎಲ್ ಬ್ಲೂ ಮೆಟಲ್ ಎಂಬ ಕ್ರಷರ್ ಕಾರ್ಖಾನೆ ನಡೆಸುತ್ತಿದ್ದಾರೆ. ಮಾರ್ಚ್ 28ರಂದು ಬೆಂಗಳೂರಿನಿಂದ ಹೊಸೂರಿಗೆ ತೆರಳುತ್ತಿದ್ದಾಗ ಚುನಾವಣಾ ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ಸಿಬ್ಬಂದಿ ಇವರ ಕಾರಿನ ಮೇಲೆ ದಾಳಿ ನಡೆಸಿದ್ದರು. ಆ ವೇಳೆ ಈತನಿಂದ 10 ಲಕ್ಷ ರೂ. ಪತ್ತೆ ಮಾಡಿ ವಶಕ್ಕೆ ಪಡೆದಿದ್ದರು. ಬಳಿಕ ಅಧಿಕಾರಿಗಳು ಹಣದ ಬಗ್ಗೆ ಹೆಚ್ಚಿನ ಪರಿಶೀಲನೆ ನಡೆಸಿದ್ದರು.
ಇದೀಗ ಆದಾಯ ತೆರಿಗೆ ಇಲಾಖೆಯ ಹೊಸೂರು ಉಪ ಆಯುಕ್ತ ವಿಷ್ಣುಪ್ರಸಾದ್ ನೇತೃತ್ವದಲ್ಲಿ 6 ಮಂದಿಯ ತಂಡ ಇಂದು ಬೆಳಗಿವ ಜಾವ 3 ಗಂಟೆಯಿಂದ ಲೋಕೇಶ್ ಕುಮಾರ್ ಮನೆ ಮೇಲೆ ದಾಳಿ, ತಪಾಸಣೆ ನಡೆಸುತ್ತಿದ್ದಾರೆ. ಇದರಿಂದ ಇಡೀ ಪ್ರದೇಶದಲ್ಲಿ ಸಂಚಲನ ಉಂಟಾಗಿದೆ. ಸದ್ಯದ ಮಾಹಿತಿ ಪ್ರಕಾರ ಅಧಿಕಾರಿಗಳು, ಮನೆಯಲ್ಲಿ 100 ಪವನ್ ಚಿನ್ನಾಭರಣ ಮತ್ತು ಒಂದು ಕೋಟಿ 20 ಲಕ್ಷ ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಕಾಂಗ್ರೆಸ್ ಕೋಟ್ಯಂತರ ಹಣ ಲೂಟಿ ಮಾಡಿದೆ, ಹೀಗಾಗಿ ಐಟಿ ನೋಟಿಸ್ ಕೊಟ್ಟಿದೆ: ಪ್ರಹ್ಲಾದ್ ಜೋಶಿ