ನವದೆಹಲಿ: ಗೋವಾ, ಮಹಾರಾಷ್ಟ್ರದ ಹಲವು ಭಾಗ ಸೇರಿದಂತೆ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಜೂನ್ 11ರ ವರೆಗೆ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.
ಬಿರು ಬಿಸಿಲಿನಿಂದ ಕಂಗೆಟ್ಟಿದ್ದ ಮತ್ತು ರಾಜ್ಯದ ಹಲವು ಭಾಗಗಳಲ್ಲಿ ತೀವ್ರ ನೀರಿನ ಕೊರತೆ ಎದುರಿಸಿದ್ದ ಮಹಾರಾಷ್ಟ್ರದಲ್ಲಿ ಇದೀಗ ನೈರುತ್ಯ ಮಾನ್ಸೂನ್ ಸಾಕಷ್ಟು ನಿರಾಳತೆ ತರಲಿದೆ. ಐಎಂಡಿ ಪ್ರಕಾರ, ಕೊಂಕಣ ಮತ್ತು ಗೋವಾ, ಮರಾಠವಾಡ, ಕರ್ನಾಟಕ, ಕೇರಳ, ಮಾಹೆ ಮತ್ತು ಲಕ್ಷದ್ವೀಪದಲ್ಲಿ ಗುಡುಗು ಮಿಂಚಿನೊಂದಿಗೆ ಮಳೆಯಾಗಲಿದ್ದು, ಇಲ್ಲಿ ಗಾಳಿ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಬೀಸಲಿದೆ.
ಮೇ 31ಕ್ಕೆ ಕೇರಳಕ್ಕೆ ಮಾನ್ಸೂನ್ ಆಗಮಿಸಿದ್ದು, ಅಂದಿನಿಂದ ದಕ್ಷಿಣ ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದೆ. ಕೇರಳ ಮತ್ತು ಮಾಹೆಯ ಒಳ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ಕರ್ನಾಟಕದ ಒಳನಾಡು ಪ್ರದೇಶದಲ್ಲಿ ಕೂಡ ಜೂನ್ 8 ಮತ್ತು 9 ಹಾಗೂ ತೆಲಂಗಾಣದಲ್ಲಿ ಜೂನ್ 10, ಕೇರಳ ಮತ್ತು ಮಾಹೆಯಲ್ಲಿ ಜೂನ್ 8ರಂದು ಅಧಿಕ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
ಇತರೆ ರಾಜ್ಯದಲ್ಲಿ ಮಳೆ: ಮುಂದಿನ ಎರಡು ವಾರ ವಾಯುವ್ಯ ಭಾರತದ ಅನೇಕ ಪ್ರದೇಶದಲ್ಲಿ ಕೂಡ ಗುಡುಗು ಮಿಂಚಿನಿಂದ ಕೂಡಿದ ಮಳೆಯನ್ನು ನಿರೀಕ್ಷಿಸಲಾಗಿದೆ. ಐಎಂಡಿ ಪ್ರಕಾರ, ಪಂಜಾಬ್, ಹರಿಯಾಣ- ಚಂಡೀಗಢ, ದೆಹಲಿ ಮತ್ತು ರಾಜಸ್ಥಾನದಲ್ಲಿ ಜೂನ್ 8ರಂದು ಗಾಳಿಯ ವೇಗ ಗಂಟೆಗೆ 40 ರಿಂದ 50 ಕಿ.ಮೀ ಇರಲಿದೆ. ಇಲ್ಲೂ ಕೂಡ ಗುಡುಗು ಮಿಂಚಿನಿಂದ ಕೂಡಿದ ಹಗುರ ಮಳೆಯಾಗಲಿದೆ.
ಜಮ್ಮು ಕಾಶ್ಮೀರ, ಲಡಾಖ್, ಗಿಲ್ಗಿಟ್- ಮುಜಾಫರಬಾದ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ್ನಲ್ಲಿ ಜೂನ್ 8- 9ರಂದು ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಲಿದೆ. ಅರುಣಾಚಲ ಪ್ರದೇಶ, ಅಸ್ಸೋಂ, ಮೇಘಾಲಯ, ನಾಗಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ ಮತ್ತು ಉಪ ಹಿಮಾಲಯದ ಪಶ್ಚಿಮ ಬಂಗಾಳ, ಸಿಕ್ಕಿಂನಲ್ಲಿ ಮುಂದಿನ ಏಳು ದಿನ ಮಳೆಯಾಗುವ ಸಾಧ್ಯತೆ ಇದೆ.
ರಾಷ್ಟ್ರ ರಾಜಧಾನಿ ಹವಾಮಾನ: ಕಳೆದ ಮೂರು ವಾರದಿಂದ ದಾಖಲೆ ಮಟ್ಟದ ಬಿಸಿಲಿಗೆ ತತ್ತರಿಸಿರುವ ದೆಹಲಿಯಲ್ಲಿ ತಾಪಮಾನ 50 ಡಿಗ್ರಿ ಸೆಲ್ಸಿಯಸ್ ಮುಟ್ಟಿದೆ. ಕಳೆದ ಕೆಲವು ದಿನಗಳಿಂದ ಹಗುರ ಮಳೆಯಾಗುತ್ತಿರುವ ಹಿನ್ನೆಲೆ ತಾಪಮಾನದಲ್ಲಿ 3-4 ಡಿಗ್ರಿ ಸೆಲ್ಸಿಯಸ್ ಇಳಿಕೆ ಕಂಡಿದೆ. ದೆಹಲಿಯಲ್ಲಿ ಮೋಡ ಕವಿದ ವಾತಾವರಣ ರೂಪುಗೊಂಡಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾದೇಶಿಕ ಹವಾಮಾನ ಅಧಿಕಾರಿಗಳು ದೆಹಲಿಯಲ್ಲಿ ಯೆಲ್ಲೋ ಆಲರ್ಟ್ ನೀಡಿದ್ದು, ತಾಪಮಾನ 42 ರಿಂದ 29 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ತಿಳಿಸಿದ್ದಾರೆ. ದೆಹಲಿಯಲ್ಲಿನ ಈ ಹವಾಮಾನ ಬದಲಾವಣೆಯಲ್ಲಿ ಪಶ್ಚಿಮದ ಅಡೆತಡೆಗಳ ಪ್ರಭಾವ ಹೆಚ್ಚಿದೆ. ಶುಕ್ರವಾರದಂದು ರಾಷ್ಟ್ರ ರಾಜಧಾನಿಯಲ್ಲಿ ಆರೆಂಟ್ ಅಲರ್ಟ್ ನೀಡಲಾಗಿತ್ತು.
ಇದನ್ನೂ ಓದಿ: ಗೋಕರ್ಣದಲ್ಲಿ ಮಳೆ ಅವಾಂತರ: ಪರಶಿವನ ಗರ್ಭಗುಡಿಗೆ ನುಗ್ಗಿದ ನೀರು