ಶಿಮ್ಲಾ (ಹಿಮಾಚಲ ಪ್ರದೇಶ): ಪರೀಕ್ಷಾ ಅಕ್ರಮದ ಪ್ರಕರಣದ ಸಂಬಂಧ ಹಿಮಾಚಲ ಪ್ರದೇಶ ಕೇಡರ್ ಐಎಎಸ್ ನವೀನ್ ತನ್ವಾರ್ ಎಂಬುವರನ್ನು ರಾಜ್ಯ ಸರ್ಕಾರ ಅಮಾನತು ಮಾಡಿ ಆದೇಶ ಹೊರಡಿಸಿದೆ. ತನಿಖಾ ಹಂತದ ಭಾಗವಾಗಿ ಕಳೆದ ತಿಂಗಳಷ್ಟೇ ಇವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಇದರೊಂದಿಗೆ ಕೇಂದ್ರೀಯ ತನಿಖಾ ದಳದ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಶಿವಂ ವರ್ಮಾ ಅವರು 50 ಸಾವಿರ ರೂಪಾಯಿ ದಂಡ ಸಹ ವಿಧಿಸಿದ್ದರು.
2019ರ ಬ್ಯಾಚ್‌ನ ಹಿಮಾಚಲ ಕೇಡರ್‌ನ ಐಎಎಸ್ ಅಧಿಕಾರಿಯಾಗಿರುವ ನವೀನ್, ಝಾನ್ಸಿಯ ಅಮಿತ್ ಎಂಬುವರ ಬದಲಿಗೆ ಬ್ಯಾಂಕ್ ಕ್ಲರ್ಕ್ ನೇಮಕಾತಿ ಪರೀಕ್ಷೆಗೆ ಹಾಜರಾಗಿದ್ದಾರೆ ಎಂದು ಆರೋಪ ಕೇಳಿ ಬಂದಿತ್ತು. ಗಾಜಿಯಾಬಾದ್‌ನ ಐಡಿಯಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ 13 ಡಿ. 2014 ರಂದು ನಡೆದ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ಕ್ಲರ್ಕ್ ನೇಮಕಾತಿ ಪರೀಕ್ಷೆಗೆ ಹಾಜರಾಗಿದ್ದರು ಎಂಬ ಮಾಹಿತಿ ತನಿಖೆಯಿಂದ ಲಭ್ಯವಾಗಿತ್ತು. ಪ್ರಸ್ತುತ ನವೀನ್ ಅವರು ರಾಜ್ಯದ ಚಂಬಾ ಜಿಲ್ಲೆಯ ಭರ್ಮೋರ್‌ನಲ್ಲಿ ಸಹಾಯಕ ಉಪ ಆಯುಕ್ತರಾಗಿ (ADC) ಕಾರ್ಯ ನಿರ್ವಹಿಸುತ್ತಿದ್ದರು.
ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಆರೋಪ ಕೇಳಿ ಬಂದ ಹಿನ್ನೆಲೆ ಸರ್ಕಾರ ತನಿಖೆಗೆ ವಹಿಸಿತ್ತು. ಸದ್ಯ ಆರೋಪ ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸಲಾಗಿದೆ. ಸಿಎಂ ಸುಖ್ವಿಂದರ್ ಸಿಂಗ್ ಸುಖು ಅಧಿಕಾರಿಯ ಅಮಾನತು ಕಡತಕ್ಕೆ ಸಹಿ ಹಾಕಿದ ಬಳಿಕ ಈ ಕ್ರಮ ಜರುಗಿಸಲಾಗಿದೆ. ಅದಕ್ಕೂ ಮುನ್ನ ಈ ಪ್ರಕರಣದಲ್ಲಿ ಮೊದಲು ಕಾನೂನು ಇಲಾಖೆಯಿಂದ ಈ ವಿಚಾರದಲ್ಲಿ ಸಲಹೆ ಸಹ ಪಡೆಯಲಾಗಿತ್ತು. ಯಾವುದೇ ಪ್ರಕರಣಲ್ಲಿ ಸರ್ಕಾರಿ ನೌಕರ ಅಥವಾ ಅಧಿಕಾರಿ 48 ಗಂಟೆಗಳ ಕಾಲಕ್ಕೂ ಹೆಚ್ಚು ಸಮಯ ಜೈಲಿನಲ್ಲಿದ್ದರೆ, ಅವರನ್ನು ಸ್ವಯಂಚಾಲಿತವಾಗಿ ಅಮಾನತುಗೊಳಿಸಲಾಗುತ್ತದೆ ಎಂದು ಇಲಾಖೆ ಸ್ಪಷ್ಟಪಡಿಸಿತ್ತು.
ಪರೀಕ್ಷೆಯಲ್ಲಿ ನವೀನ್ ತನ್ವರ್ ಮತ್ತು ಇತರ 6 ಮಂದಿ ತಪ್ಪಿತಸ್ಥರೆಂದು ಸಿಬಿಐ ನ್ಯಾಯಾಲಯವು ಸಾಬೀತುಪಡಿಸಿದೆ. ಮೂರು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ಸಹ ವಿಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವೂ ಮಾರ್ಚ್ 18ರಂದು ಸಿಬಿಐನಿಂದ ಮಾಹಿತಿ ಕೇಳಿತ್ತು. 9 ವರ್ಷಗಳ ಹಿಂದೆ 2014 ರಲ್ಲಿ ಝಾನ್ಸಿಯ ಅಮಿತ್ ಬದಲಿಗೆ ನವೀನ್ ತನ್ವರ್ ಕ್ಲರ್ಕ್ ಪರೀಕ್ಷೆಗೆ ಹಾಜರಾಗಿದ್ದರು ಎಂಬುದು ತನಿಖೆಯಿಂದ ತಿಳಿದು ಬಂದಿದ್ದರಿಂದ ಈ ಕ್ರಮ ಜರುಗಿಸಲಾಗಿದೆ. 2019 ರಲ್ಲಿ, ನಡೆದ ಯುಪಿಎಸ್ಸಿ (Union Public Service Commission) ಪರೀಕ್ಷೆಯಲ್ಲಿ ಉತ್ತೀರ್ಣರಾದ ನವೀನ್ ಭಾರತೀಯ ಆಡಳಿತ ಸೇವೆಗೆ (IAS) ಆಯ್ಕೆಯಾಗಿದ್ದರು. ಬೇರೆಯವರ ಬದಲು ತಾವು ಪರೀಕ್ಷೆ ಬರೆದ ಪ್ರಕರಣದಲ್ಲಿ ಸುಮಾರು ಒಂದು ವರ್ಷದಿಂದ ವಿಚಾರಣೆ ನಡೆಯುತ್ತಿದ್ದು, ಇದರಲ್ಲಿ ನವೀನ್ ತನ್ವರ್ ತಪ್ಪಿತಸ್ಥ ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಇದನ್ನೂ ಓದಿ: ಬೆಂಗಳೂರು: ಕ್ಲರ್ಕ್ ಹುದ್ದೆಗೆ ಪರೀಕ್ಷೆ ಬರೆಯಲು ನಕಲಿ ಅಭ್ಯರ್ಥಿಗಳನ್ನ ಕಳಿಸಿದ್ದ ಇಬ್ಬರು ಆರೋಪಿಗಳ ಬಂಧನ - CRIME NEWS