ಕಲಬುರಗಿ: ನಾನು ರಾಮ ಭಕ್ತ. ರಾಮ ಮಂದಿರ ಕಟ್ಟಲು ಹಣ ಕೂಡಿಸಿಕೊಡಲು ಹೇಳಿದ್ದಾಗ 2 ಕೋಟಿ ಹಣ ಕೂಡಿಸಿ ಕೊಟ್ಟಿದ್ದೇನೆ. ಆದರೆ, ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನ ಬಂದಿಲ್ಲ. ಹೀಗಾಗಿ ನಾನು ಹೋಗುವುದಿಲ್ಲ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿದ್ದಾರೆ.
ಕಾರ್ಯಕ್ರಮವೊಂದರ ನಿಮಿತ್ತ ಶುಕ್ರವಾರ ಕಲಬುರಗಿಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ರಾಮ ಮಂದಿರ ನಿರ್ಮಾಣ ಆಗಿರುವುದು ಖುಷಿ ವಿಚಾರ. ರಾಮ ಮಂದಿರ ಅನ್ನೋದು ಧಾರ್ಮಿಕತೆ ಮತ್ತು ಧರ್ಮದ ಸಂಕೇತ. ಧರ್ಮ ಜಾಗೃತಿ ಮೂಡಿಸಲು ಮತ್ತು ದೇಶ ಒಂದುಗೂಡಿಸಲು ಇರುವಂತದ್ದು. ಆದರೆ, ಶ್ರೀರಾಮ ಮಂದಿರ ವಿಚಾರದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ರಾಜಕಾರಣದಲ್ಲಿ ಧರ್ಮ ಇರಬೇಕೆ ಹೊರೆತು, ಧರ್ಮದಲ್ಲಿ ರಾಜಕಾರಣ ಬರಬಾರದು. ಸದ್ಯಕ್ಕೆ ಅಯ್ಯೋಧೆಗೆ ಹೋಗಲ್ಲ. ಆದರೆ, ಮುಂದಿನ ದಿನಗಳಲ್ಲಿ ಹೋಗಿ ಶ್ರೀರಾಮನ ದರ್ಶನ ಪಡೆಯುತ್ತೇನೆ ಎಂದು ಹೇಳಿದರು.
ಕಾಂಗ್ರೆಸ್ ನಾಯಕರು ಉದ್ಘಾಟನೆಗೆ ಹಾಜರಾಗದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಶೆಟ್ಟರ್, ಆಹ್ವಾನ ಬಂದಂಥವರು ಬೇರೆ ಬೇರೆ ಕಾರಣದಿಂದ ಹೋಗಲ್ಲ ಅಂತಾ ಹೇಳಿದ್ದಾರೆ. ಅದಕ್ಕೆ ಬಿಜೆಪಿಯವರು ಸಾಕಷ್ಟು ಟೀಕೆ ಮಾಡಿದ್ದಾರೆ. ಕಾಂಗ್ರೆಸ್ ಹಿಂದೂ ವಿರೋಧಿ ಅಲ್ಲ. ಹಿಂದೂ ವಿರೋಧಿ ಇದ್ದರೆ 135 ಸೀಟ್ ಹೇಗೆ ಬರುತ್ತಿದ್ದವು? ಆಹ್ವಾನ ಬಂದವರು ಹೋಗೊದು ಬಿಡೋದು ಅವರಿಗೆ ಬಿಟ್ಟ ವಿಚಾರ. ಹೋಗಲ್ಲ ಅನ್ನೋ ಕಾರಣಕ್ಕೆ ಕಾಂಗ್ರೆಸ್ ಬಗ್ಗೆ ಟೀಕೆ ಟಿಪ್ಪಣೆ ಮಾಡುವುದು ಸರಿಯಲ್ಲ. ಈ ರೀತಿ ಟೀಕೆ ಮಾಡುವುದನ್ನು ಬಿಜೆಪಿಯವರು ಬಿಟ್ಟುಬಿಡಬೇಕು ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.
ಬಿಜೆಪಿಗೆ ಮರಳುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಿಎಂ, ನಾನು ಅಧಿಕಾರದ ಆಸೆ ಇಟ್ಟುಕೊಂಡು ಕಾಂಗ್ರೆಸ್ ಪಕ್ಷಕ್ಕೆ ಹೋಗಿಲ್ಲ. ನನಗೆ ಸದ್ಯ ಸಮಾಧಾನವಿದೆ. ಆಗ ನನಗೆ ಅಪಮಾನ ಆಗಿತ್ತು. ಅವರಿಗೆ ಪಾಠ ಕಲಿಸಬೇಕಿತ್ತು, ಕಲಿಸಿದ್ದೇನೆ. ನಾನು ಲೋಕಸಭೆ ಚುನಾವಣೆಗೆ ನಿಲ್ಲಲ್ಲ ಅಂತಾ ಹಲವು ಬಾರಿ ಹೇಳಿದ್ದೇನೆ. ನಾನು ಲೋಕಸಭೆ ಚುನಾವಣೆ ಆಕಾಂಕ್ಷಿಯೂ ಅಲ್ಲ, ನನಗೆ ಯಾರು ಸಂಪರ್ಕ ಮಾಡಿಲ್ಲ. ನಾನು ವಾಪಸ್ ಬಿಜೆಪಿಗೆ ಹೋಗುವ ಪ್ರಶ್ನೆಯೂ ಇಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಮೂರು ಡಿಸಿಎಂ ಚರ್ಚೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದು ಹೈಕಮಾಂಡ್ಗೆ ಬಿಟ್ಟ ವಿಚಾರ. ಯಾರು ಈ ಬಗ್ಗೆ ಚರ್ಚೆ ಮಾಡಬಾರದೆಂದು ತಿಳಿ ಹೇಳಲಾಗಿದೆ. ಅಲ್ಲದೆ ಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ 12 ರಿಂದ 15ಕ್ಕೂ ಅಧಿಕ ಸ್ಥಾನ ಪಡೆಯಲಿದೆ ಎಂದು ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಇಡೀ ಒಕ್ಕಲಿಗ ಸಮಾಜ ಒಟ್ಟಾಗಿ ಹೋದ್ರೆ ಯಶಸ್ಸು ಸಾಧ್ಯ: ಡಿ ಕೆ ಶಿವಕುಮಾರ್