ತೆಂಕಶಿ (ತಮಿಳುನಾಡು): ಪಟಾಕಿ ತಯಾರಿಕೆ ವೇಳೆ ಇದ್ದಕ್ಕಿದ್ದಂತೆ ಸ್ಫೋಟ ಸಂಭವಿಸಿ ವ್ಯಕ್ತಿಯೋರ್ವ ಮೃತಪಟ್ಟು, ಆತನ ಹೆಂಡತಿ ಗಂಭೀರವಾಗಿ ಗಾಯಗೊಂಡ ಘಟನೆ ತಮಿಳುನಾಡಿನ ತೆಂಕಶಿ ಜಿಲ್ಲೆಯಲ್ಲಿ ನಡೆದಿದೆ. ಅಲ್ಲದೇ, ಈ ಸ್ಫೋಟದಲ್ಲಿ 12ಕ್ಕೂ ಹೆಚ್ಚು ಮನೆಗಳು ಹಾಗೂ ಮೇಕೆ ಶೆಡ್ಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ.
ತಿರುವೆಂಕಡಂ ತಾಲೂಕಿನ ಕೊಕ್ಕುಕುಲಂ ಗ್ರಾಮದ ಮನೆಯೊಂದಲ್ಲಿ ಈ ದುರ್ಘಟನೆ ಜರುಗಿದೆ. ಶಕ್ತಿ ಈಶ್ವರನ್ ಎಂಬುವವರೇ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಪತ್ನಿ ರಾಮಲಕ್ಷ್ಮೀ ಸುಟ್ಟಗಾಯಗಳೊಂದಿಗೆ ಕೋವಿಲ್‌ಪಟ್ಟಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆಯ ಮಾಹಿತಿ ತಿಳಿದ ಡಿಎಸ್ಪಿ ಸುಧೀರ್ ಹಾಗೂ ಪೊಲೀಸರು ಸ್ಥಳಖ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ, ಶಂಕರಕೋವಿಲ್ ಶಾಸಕ ರಾಜಾ ಸಹ ಸ್ಥಳಕ್ಕೆ ಭೇಟಿ ಕೊಟ್ಟು ಮಾಹಿತಿ ಪಡೆದಿದ್ದಾರೆ.
ಶಕ್ತಿ ಈಶ್ವರನ್ ಮತ್ತು ರಾಮಲಕ್ಷ್ಮೀ ದಂಪತಿ ಶಿವಕಾಶಿಯಿಂದ ಕಚ್ಚಾ ವಸ್ತುಗಳನ್ನು ಖರೀದಿಸಿ ತಂದು ಪಟಾಕಿಗಳನ್ನು ತಯಾರಿಸುತ್ತಿದ್ದರು. ಅಲ್ಲದೇ, ಅವುಗಳನ್ನು ಹಬ್ಬಗಳ ಸಂದರ್ಭದಲ್ಲಿ ಮಾರಾಟ ಮಾಡುತ್ತಿದ್ದರು. ಮನೆಯಲ್ಲಿ ಎಂದಿನಂತೆ ಪಟಾಕಿ ತಯಾರಿಕೆಯಲ್ಲಿ ತೊಡಗಿದ್ದಾಗ ಇದ್ದಕ್ಕಿದ್ದಂತೆ ಸ್ಫೋಟ ಸಂಭವಿಸಿದೆ. ಈ ಸ್ಫೋಟದಲ್ಲಿ ಈಶ್ವರನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೊಂದೆಡೆ, ಪತ್ನಿ ರಾಮಲಕ್ಷ್ಮೀ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪಟಾಕಿ ಸ್ಫೋಟದ ಮಾಹಿತಿ ಬಂದ ಕೂಡಲೇ ಶಂಕರಕೋವಿಲ್ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಸದ್ಯ ಪೊಲೀಸರು ಸ್ಫೋಟದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಪಟಾಕಿ ಕಾರ್ಖಾನೆಗೆ ಬೆಂಕಿ; ಏಳು ಮಂದಿ ಸಾವು, ಅನೇಕರಿಗೆ ಗಾಯ