ನವದೆಹಲಿ: ದೆಹಲಿಯ ಬೇಗಂಪುರದಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪತಿಯೇ ತನ್ನ ಪತ್ನಿಯನ್ನು ಬೆಂಕಿ ಹಚ್ಚಿ ಜೀವಂತವಾಗಿ ಸುಟ್ಟು ಹಾಕಿರುವ ಘಟನೆ ನಡೆದಿದೆ. ಮಾಹಿತಿಯ ಪ್ರಕಾರ, ಡಿಟಿಸಿಯಲ್ಲಿ ಕಂಡಕ್ಟರ್ ಆಗಿರುವ ಆರೋಪಿ ಪತಿ ರಾಜ್‌ವೀರ್, ಎಂಸಿಡಿ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಪತ್ನಿಯನ್ನು ಆಸ್ತಿ ನೀಡದ ಕಾರಣಕ್ಕೆ ಜೀವಂತವಾಗಿ ಸುಟ್ಟುಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಆರೋಪಿ ಕೊಲೆ ಪ್ರಕರಣವನ್ನು ಮರೆಮಾಚಲು ಗ್ಯಾಸ್ ಸೋರಿಕೆಯಿಂದ ಅಗ್ನಿ ಅವಘಡ ಸಂಭವಿಸಿ ಈ ಘಟನೆ ನಡೆದಿದೆ ಎಂದು ಬಿಂಬಿಸಲು ಪ್ರಯತ್ನಿಸಿದ್ದ. ಆದರೆ, ದಂಪತಿಯ 12 ವರ್ಷದ ಮಗಳು ನೀಡಿದ ಹೇಳಿಕೆಯಿಂದ ಪ್ರಕರಣದ ಸತ್ಯಾಂಶ ಬಹಿರಂಗಗೊಂಡಿದೆ.
ಮೃತ ಮಹಿಳೆಯ ಕುಟುಂಬಸ್ಥರ ಮಾಹಿತಿಯ ಪ್ರಕಾರ, "ಮೃತ ಮಹಿಳೆ 2009 ರಲ್ಲಿ ಝಜ್ಜರ್ ನಿವಾಸಿಯನ್ನು ವಿವಾಹವಾಗಿದ್ದರು. ಮೃತ ಮಹಿಳೆ ಪೋಲಿಯೊದಿಂದ ಬಳಲುತ್ತಿದ್ದರು. ಮದುವೆಯಾದ ಕೆಲವೇ ದಿನಗಳಲ್ಲಿ, ಮಹಿಳೆ ಎಂಸಿಡಿ ಶಾಲೆಯಲ್ಲಿ ಶಿಕ್ಷಕಿಯಾಗಿ ನೇಮಕಗೊಂಡಿದ್ದರು. ದಂಪತಿ ಜೈನ್ ನಗರದಲ್ಲಿ ವಾಸವಾಗಿದ್ದರು. ಇವರಿಗೆ 12 ವರ್ಷ ಮತ್ತು ಒಂದೂವರೆ ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮದುವೆಯ ಸಮಯದಲ್ಲಿ ರಾಜ್‌ವೀರ್ ಡಿಟಿಸಿಯಲ್ಲಿ ಕಂಡಕ್ಟರ್ ಆಗಿ ಕಾರ್ಯನಿರ್ವಸುತ್ತಿದ್ದರು. ಆದರೆ ಅವರು ವಿರಳವಾಗಿ ಕೆಲಸಕ್ಕೆ ಹೋಗುತ್ತಿದ್ದರು. ಮೃತಳ ಎಟಿಎಂ ಕಾರ್ಡ್ಗಳನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದ ರಾಜ್‌ವೀರ್ ಆಗಾಗ ಪತ್ನಿ ಮತ್ತು ಮಕ್ಕಳ ಮೇಲೆ ಹಲ್ಲೆ ನಡೆಸುತ್ತಿದ್ದ. ಕಳೆದ ಗುರುವಾರವೂ ಆತ ತನ್ನ ಪತ್ನಿಗೆ ಆಕೆಯ ಪೋಷಕರ ಮುಂದೆಯೇ ಕೊಲೆ ಬೆದರಿಕೆ ಹಾಕಿದ್ದ" ಎಂದು ತಿಳಿಸಿದ್ದಾರೆ.
ಸೋಮವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಪತಿ ಆಕೆಗೆ ಬೆಂಕಿ ಹಚ್ಚಿದ್ದಾನೆ. ಮಹಿಳೆ ಪೋಲಿಯೊದಿಂದ ಬಳಲುತ್ತಿದ್ದ ಕಾರಣ ಓಡಿಹೋಗಲು ಸಾಧ್ಯವಾಗಿಲ್ಲ ಮತ್ತು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ ನಂತರ ಅವರು ಕೂಗಲು ಪ್ರಾರಂಭಿಸಿದ್ದಾರೆ, ಆಗ ಇಬ್ಬರು ಮಕ್ಕಳು ಎಚ್ಚರಗೊಂಡಿದ್ದು, ತಾಯಿಯನ್ನು ರಕ್ಷಿಸುವ ವೇಳೆ ಇಬ್ಬರು ಮಕ್ಕಳಿಗೂ ಸುಟ್ಟ ಗಾಯಗಳಾಗಿವೆ. ಬೆಂಕಿಯ ಕೆನ್ನಾಲಿಗೆಯಿಂದ ಹೊರಗೆ ಓಡಿ ಬಂದ ಮಹಿಳೆಯ ಪತಿ, ಐಜಿಎಲ್ ಪೈಪ್ಲೈನ್ ಸೋರಿಕೆಯು ಬೆಂಕಿ ಅವಘಡಕ್ಕೆ ಕಾರಣವಾಗಿದೆ ಎಂದು ಜನರಿಗೆ ತಿಳಿಸಿದ್ದಾನೆ.
ನಂತರ ಎರಡು ಅಗ್ನಿಶಾಮಕ ವಾಹನಗಳು ಧಾವಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿವೆ. ಗಾಯಗೊಂಡ ಎಲ್ಲರನ್ನು ಮಹಾರಾಜ ಅಗ್ರಸೇನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಮಹಿಳೆ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದರು. ಇಬ್ಬರು ಹೆಣ್ಣುಮಕ್ಕಳಿಗೆ ಸುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಆರೋಪಿಗೆ ಶೇಕಡಾ 40 ರಷ್ಟು ಸುಟ್ಟ ಗಾಯಗಳಾಗಿವೆ, ಆದ್ದರಿಂದ ಆತನನ್ನು ಚಿಕಿತ್ಸೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರು ಮೃತಳ ಹಿರಿಯ ಮಗಳನ್ನು ವಿಚಾರಿಸಿದಾಗ, ಆಕೆ ಮನೆಯಲ್ಲಿ ನಡೆದ ಕಥೆಯನ್ನು ಪೊಲೀಸರಿಗೆ ವಿವರಿಸಿದ್ದಾಳೆ. ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
ಇದನ್ನೂ ಓದಿ: ಮದುವೆಯಾಗಲು ನಿರಾಕರಿಸಿದ ಪುತ್ರಿಯನ್ನು ಕೊಂದ ತಂದೆ