ನವದೆಹಲಿ: ಹಿಂಡೆನ್‌ಬರ್ಗ್ ಕಂಪನಿ ವರದಿಯ ಆರೋಪಗಳ ಆಧಾರದ ಮೇಲೆ ಸೆಬಿ ಅಧ್ಯಕ್ಷೆ ಮಾಧವಿ ಪುರಿ ಬುಚ್ ಅವರ ರಾಜೀನಾಮೆ ಮತ್ತು ಅದಾನಿ ಗ್ರೂಪ್ ಮೇಲಿನ ಆರೋಪಗಳನ್ನು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಗೆ ನೀಡಬೇಕು ಎಂದು ಒತ್ತಾಯಿಸಿ ಆಗಸ್ಟ್ 22ರಂದು ರಾಷ್ಟ್ರವ್ಯಾಪಿ ಆಂದೋಲನ ನಡೆಸುವುದಾಗಿ ಕಾಂಗ್ರೆಸ್ ಮಂಗಳವಾರ ಘೋಷಿಸಿತು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ನಡೆದ ಪಕ್ಷದ ಪ್ರಧಾನ ಕಾರ್ಯದರ್ಶಿಗಳು, ರಾಜ್ಯ ಘಟಕದ ಅಧ್ಯಕ್ಷರು ಮತ್ತು ಎಐಸಿಸಿ ರಾಜ್ಯ ಉಸ್ತುವಾರಿಗಳೊಂದಿಗಿನ ಸಭೆಯ ನಂತರ ಈ ನಿರ್ಧಾರ ಪ್ರಕಟಿಸಲಾಗಿದೆ. ಇದರ ಜೊತೆಗೆ ಮುಂಬರುವ ವಿಧಾನಸಭೆ ಚುನಾವಣೆ, ಪಕ್ಷ ಸಂಘಟನೆ, ರಾಷ್ಟ್ರೀಯ ವಿಷಯಗಳ ಬಗ್ಗೆ ಚರ್ಚೆ ಕುರಿತೂ ಚರ್ಚೆ ನಡೆಸಲಾಗಿದೆ.
We convened a meeting of AICC General Secretaries, In-charges and Pradesh Congress Committee Presidents to discuss Organisational matters and various issues of national importance for election preparedness.
— Mallikarjun Kharge (@kharge) August 13, 2024
1⃣The shocking revelations of nexus between SEBI and Adani needs to a… pic.twitter.com/jNOmGRI22V
ಜೆಪಿಸಿ ತನಿಖೆಯ ಅಗತ್ಯವಿದೆ: ಸಭೆಯ ನಂತರ ಸಾಮಾಜಿಕ ಜಾಲತಾಣ 'ಎಕ್ಸ್' ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಮಲ್ಲಿಕಾರ್ಜುನ್ ಖರ್ಗೆ, 'ಸೆಬಿ ಅಧ್ಯಕ್ಷರು ಮತ್ತು ಅದಾನಿ ಗ್ರೂಪ್ ನಡುವೆ ವ್ಯವಹಾರಿಕ ಸಂಬಂಧದ ಬಗ್ಗೆ ತನಿಖೆಯ ಅಗತ್ಯವಿದೆ. ಷೇರು ಮಾರುಕಟ್ಟೆಯಲ್ಲಿ ಸಣ್ಣ ಹೂಡಿಕೆದಾರರ ಹಣ ನಷ್ಟವಾಗದಂತೆ ತಡೆಯಬೇಕಿದೆ. ಕೇಂದ್ರ ಸರ್ಕಾರ ತಕ್ಷಣವೇ ಸೆಬಿ ಅಧ್ಯಕ್ಷರ ರಾಜೀನಾಮೆ ಪಡೆಯಬೇಕು. ಈ ನಿಟ್ಟಿನಲ್ಲಿ ಜೆಪಿಸಿ ರಚನೆ ಮಾಡಬೇಕು' ಎಂದು ಒತ್ತಾಯಿಸಿದ್ದಾರೆ.
ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, "ಸೆಬಿ ಅಧ್ಯಕ್ಷರ ರಾಜೀನಾಮೆ ಮತ್ತು ಅದಾನಿ ವಿಷಯದ ಬಗ್ಗೆ ಜೆಪಿಸಿ ತನಿಖೆಗೆ ಒತ್ತಾಯಿಸಿ ಆಗಸ್ಟ್ 22ರಂದು ಪಕ್ಷವು ರಾಷ್ಟ್ರವ್ಯಾಪಿ ಆಂದೋಲನವನ್ನು ನಡೆಸಲು ಸಭೆಯಲ್ಲಿ ಸರ್ವಾನುಮತದಿಂದ ನಿರ್ಧರಿಸಲಾಗಿದೆ. ಆಗಸ್ಟ್ 10 ರಂದು ಹಿಂಡೆನ್‌ಬರ್ಗ್ ವರದಿಯು SEBI ಅಧ್ಯಕ್ಷೆ ಮಾಧವಿ ಪುರಿ ಬುಚ್ ಮತ್ತು ಅವರ ಪತಿ ಧವಳ್ ಬುಚ್ ಅವರು ಅದಾನಿ ಗ್ರೂಪ್ನ ಬೇನಾಮಿ ವಿದೇಶಿ ಕಂಪನಿಗಳಲ್ಲಿ ಹೂಡಿಕೆ ಮಾಡಿರುವುದು ತಿಳಿದುಬಂದಿದೆ. ಹೀಗಾಗಿ ಅದಾನಿ ಅವ್ಯವಹಾರಗಳ ಬಗ್ಗೆ ಜೆಪಿಸಿ ತನಿಖೆ ಅಗತ್ಯವಿದೆ" ಎಂದರು.
ಬಿಜೆಪಿ ನಿರಾಕರಣೆ: ಹಿಂಡೆನ್‌ಬರ್ಗ್ ವರದಿಯನ್ನು ಅಂಗೀಕರಿಸಿದ ಕಾಂಗ್ರೆಸ್ ಮತ್ತು ವಿಪಕ್ಷಗಳ ನಡೆಯನ್ನು ಬಿಜೆಪಿ ತೀವ್ರವಾಗಿ ಟೀಕಿಸಿದೆ. ದೇಶದ ಆರ್ಥಿಕತೆಯನ್ನು ಹಾಳು ಮಾಡಲು ಕಾಂಗ್ರೆಸ್ ಬಯಸುತ್ತಿದೆ. ಹೀಗಾಗಿ ಹಿಂಡೆನ್‌ಬರ್ಗ್ ಆರೋಪಗಳನ್ನು ಅದು ಬೆಂಬಲ ನೀಡಿದೆ. ಪ್ರಕರಣದಲ್ಲಿ ಜೆಪಿಸಿ ತನಿಖೆಯು ಅಗತ್ಯವಿಲ್ಲ ಎಂದು ಹೇಳಿದೆ.
ಇತ್ತ, ಸೆಬಿ ಅಧ್ಯಕ್ಷೆ ಮಾಧವಿ ಬುಚ್ ಮತ್ತು ಆಕೆಯ ಪತಿ ಧವಳ್ ಬುಜ್ ಅವರು ತಮ್ಮ ವಿರುದ್ಧ ಕೇಳಿಬಂದ ಎಲ್ಲ ಆರೋಪಗಳು ಆಧಾರರಹಿತ ಎಂದು ತಳ್ಳಿಹಾಕಿದ್ದಾರೆ. ಹಿಂಡೆನ್‌ಬರ್ಗ್ ವರದಿಯು ಬಂಡವಾಳ ಮಾರುಕಟ್ಟೆಗಳ ನಿಯಂತ್ರಕವಾದ ಸೆಬಿಯ ವಿಶ್ವಾಸಾರ್ಹತೆಯ ಮೇಲೆ ದಾಳಿ ಮಾಡುತ್ತಿದೆ. ಭಾರತದ ನೀತಿಗಳ ಉಲ್ಲಂಘನೆಗಾಗಿ ನೀಡಿದ ಶೋಕಾಸ್ ನೋಟಿಸ್‌ಗೆ ಉತ್ತರಿಸುವ ಬದಲು, ಸೆಬಿ ಮುಖ್ಯಸ್ಥರ ಮೇಲೆಯೇ ಆರೋಪ ಮಾಡಿ ನುಣುಚಿಕೊಳ್ಳುತ್ತಿದೆ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ: ದೇಶದ ಆರ್ಥಿಕತೆ ಹಾಳು ಮಾಡಲು ಕಾಂಗ್ರೆಸ್ ಪಿತೂರಿ: ಬಿಜೆಪಿ ಗಂಭೀರ ಆರೋಪ - Hindenburg Allegations