ಮುಂಬೈ(ಮಹಾರಾಷ್ಟ್ರ): ಲೋಕಸಭಾ ಚುನಾವಣೆ ಹಿನ್ನೆಲೆ ಹೆಲಿಕಾಪ್ಟರ್ಗಳಿಗೆ ಬೇಡಿಕೆ ಹೆಚ್ಚಿದೆ. ಚುನಾವಣಾ ಪ್ರಚಾರಕ್ಕೆ ಧುಮುಕಿರುವ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು, ಕ್ಷೇತ್ರಗಳನ್ನು ಸಲೀಸಾಗಿ ಸುತ್ತಬಹುದು ಎಂಬ ಕಾರಣದಿಂದ ಭಾರಿ ಪ್ರಮಾಣದ ಹಣ ವ್ಯಯಿಸಿ ಹೆಲಿಕಾಪ್ಟರ್‌ಗಳನ್ನು ಕಾಯ್ದಿರಿಸುತ್ತಿದ್ದಾರೆ. ರಾಜ್ಯದಲ್ಲಿ ಪ್ರತಿ ಗಂಟೆಗೆ 4 ರಿಂದ 5 ಲಕ್ಷ ರೂ. ಬಾಡಿಗೆ ಪಾವತಿಸಿ ಬಿರುಸಿನ ಪ್ರಚಾರ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಪ್ರಮುಖ ಪಕ್ಷಗಳ ಸ್ಟಾರ್ ಪ್ರಚಾರಕರು ಹೆಚ್ಚಾಗಿ ಹೆಲಿಕಾಪ್ಟರ್‌ಗಳನ್ನು ಕಾಯ್ದಿರಿಸುತ್ತಿರುವುದರಿಂದ ಅದರ ದರಗಳು ಇದೀಗ ಸುಮಾರು ಮೂರು ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ವಿಮಾನಯಾನ ಕಂಪನಿಗಳು ಮಾಹಿತಿ ನೀಡಿವೆ. ಮುಂದಿನ ಒಂದೂವರೆ ತಿಂಗಳಿಗೆ ಈಗಾಗಲೇ ಹೆಲಿಕಾಪ್ಟರ್‌ಗಳನ್ನು ಕಾಯ್ದಿರಿಸಲಾಗಿದೆ. ಕಡಿಮೆ ಸಮಯದಲ್ಲಿ ಹೆಚ್ಚು ಸಭೆ-ಸಮಾರಂಭಗಳಲ್ಲಿ ಭಾಗಿಯಾಗಬಹುದು, ನಿರೀಕ್ಷಿತ ಮಟ್ಟದಲ್ಲಿ ಜನರನ್ನು ಭೇಟಿಯಾಗಿ ಮತಯಾಚನೆ ಮಾಡಬಹುದು ಎಂಬ ಕಾರಣದಿಂದ ಹೆಚ್ಚು ಹೆಚ್ಚು ಹೆಲಿಕಾಪ್ಟರ್‌ಗಳನ್ನು ಹೆಚ್ಚಾಗಿ ಕಾಯ್ದಿರಿಸುತ್ತಿದ್ದಾರೆ. ಸಹಜವಾಗಿ ಸಾಮಾನ್ಯ ದಿನಮಾನಕ್ಕಿಂತ ಚುನಾವಣೆ ಅವಧಿಯಲ್ಲಿ ಇವುಗಳ ಬೇಡಿಕೆ ಹೆಚ್ಚಿರುತ್ತದೆ ಎಂದು ನಿರ್ವಿಕ್ ಏವಿಯೇಷನ್‌ನ ವ್ಯವಸ್ಥಾಪಕ ನಿರ್ದೇಶಕ ಸುಬೋಧ್ ಜಾಧವ್ ಮಾಹಿತಿ ನೀಡಿದ್ದಾರೆ.
ಹೆಲಿಕಾಪ್ಟರ್‌ಗಳನ್ನು ಸುಮಾರು ಒಂದೂವರೆ ವರ್ಷಗಳ ಹಿಂದೆಯೇ ವಿವಿಧ ಪಕ್ಷಗಳು ಕಾಯ್ದಿರಿಸಿವೆ. ಚುನಾವಣೆ ಘೋಷಣೆಯಾದ ದಿನದಿಂದ ಕಾಯ್ದಿರಿಸುವಿಕೆಯ ಪ್ರಮಾಣ ಹೆಚ್ಚಾಗಿದೆ. ಸದ್ಯ ಮಹಾರಾಷ್ಟ್ರದಲ್ಲಿ 40ರಿಂದ 50 ಹೆಲಿಕಾಪ್ಟರ್‌ಗಳು ಹಾರಾಟ ನಡೆಸಿವೆ. ಹೆಲಿಕಾಪ್ಟರ್‌ಗಳು ದಿನಕ್ಕೆ 4 ರಿಂದ 5 ಗಂಟೆಗಳ ಕಾಲ ಹಾರಬಲ್ಲವು. ಆ ರೀತಿ ಪ್ಲಾನ್ ಮಾಡಿಕೊಂಡು ಪಕ್ಷದ ಮುಖಂಡರು ಹೆಲಿಕಾಪ್ಟರ್ನಲ್ಲಿ ಸಭೆಗೆ ತೆರಳುತ್ತಾರೆ. ಈ ನಿಟ್ಟಿನಲ್ಲಿ ಎರಡು ದಿನ ಮುಂಚಿತವಾಗಿ ಯೋಜನೆ ರೂಪಿಸಬೇಕೆಂದು ವಿಮಾನಯಾನ ಕಂಪನಿ ಹೇಳಿದೆ. ಸದ್ಯ ನಾಲ್ಕು ಆಸನ ಮತ್ತು 10 ಆಸನಗಳ ಹೆಲಿಕಾಪ್ಟರ್‌ಗಳು ಲಭ್ಯ ಇದ್ದು, ಈ ಎರಡು ರೀತಿಯ ಹೆಲಿಕಾಪ್ಟರ್‌ಗಳಿಗೂ ಹೆಚ್ಚಿನ ಬೇಡಿಕೆಯಿದೆ. ಚುನಾವಣೆ ಇದ್ದುದರಿಂದ ನಾಲ್ಕು ಆಸನಗಳ ಹೆಲಿಕಾಪ್ಟರ್ ದರ ಗಂಟೆಗೆ 4 ರಿಂದ 5 ಲಕ್ಷ ರೂಪಾಯಿ ಇದ್ದರೆ ಹತ್ತು ಸೀಟುಗಳಿಗೆ ಗಂಟೆಗೆ 5 ರಿಂದ 6 ಲಕ್ಷ ರೂಪಾಯಿ ಭರಿಸಬೇಕು. ರಾಜ್ಯದ ಎಲ್ಲಾ ಹೆಲಿಕಾಪ್ಟರ್‌ಗಳನ್ನು ಏಪ್ರಿಲ್ ಮತ್ತು ಮೇ ತಿಂಗಳಿಗೆ ಕಾಯ್ದಿರಿಸಲಾಗಿದೆ ಎಂದು ಸುಬೋಧ್ ಜಾಧವ್ ಮಾಹಿತಿ ನೀಡಿದ್ದಾರೆ.
ರಾಜಕೀಯ ಪಕ್ಷಗಳು ತಮ್ಮ ಉನ್ನತ ನಾಯಕರು, ತಾರಾ ಪ್ರಚಾರಕರನ್ನು ಕರೆದೊಯ್ಯುವುದಕ್ಕಾಗಿ ಹೆಲಿಕಾಪ್ಟರ್‌ಗಳನ್ನು ಬಾಡಿಗೆಗೆ ಪಡೆಯುತ್ತವೆ. ಇವುಗಳು ಒಂದು ದಿನದಲ್ಲಿ ಸುಮಾರು 600 ರಿಂದ 700 ಕಿಲೋಮೀಟರ್ ಮಾತ್ರ ಹಾರಬಲ್ಲವು. ಹೆಲಿಕಾಪ್ಟರ್‌ಗಳ ಮೂಲಕ ರಾಜಕಾರಣಿಗಳು ಬಂದು ಮತ ಕೇಳುವ ದೃಶ್ಯಗಳು ಚುನಾವಣೆಗಳಲ್ಲಿ ಸಾಮಾನ್ಯ. ಹಾಗಾಗಿ ಅವುಗಳ ಕಾಯ್ದಿರಿಸುವಿಕೆಯ ಪೈಪೋಟಿ ಕೂಡ ಸಹಜವಾಗಿದೆ. ಈಗಾಗಲೇ ಹೆಲಿಕಾಪ್ಟರ್‌ಗಳನ್ನು ಮೀಸಲಿಟ್ಟಿರುವುದರಿಂದ ತಕ್ಷಣ ಸೌಲಭ್ಯ ಕಲ್ಪಿಸಲು ಸಾಧ್ಯವಿಲ್ಲ ಎಂದು ಉದ್ಯಮಿ ಮಂದಾರ ಭರಡೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಹೆಲಿಕಾಪ್ಟರ್ ಹತ್ತುವಾಗ ಎಡವಿದ ಸಿಎಂ ಮಮತಾ ಬ್ಯಾನರ್ಜಿ - Mamata Banerjee tripped