ಅಲಿಗಢ (ಉತ್ತರಪ್ರದೇಶ): ನಾಯಿ ದಾಳಿ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಉತ್ತರಪ್ರದೇಶದ ಅಲಿಗಢದಲ್ಲಿ ಮತ್ತೊಂದು ನಾಯಿ ದಾಳಿ ಘಟನೆ ನಡೆದಿದೆ. ಮನೆಯ ಪಕ್ಕದಲ್ಲಿದ್ದ ಅಂಗಡಿಗೆ ತೆರಳಿದ್ದ 5 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳು ಎರಗಿ ಘಾಸಿ ಮಾಡಿವೆ. ಮಗುವಿನ ಕಿರುಚಾಟ ಕೇಳಿಸಿಕೊಂಡ ಜನರು ಶ್ವಾನಗಳನ್ನು ಓಡಿಸಿ ಮಗುವನ್ನು ಬದುಕಿಸಿದ್ದಾರೆ.
ಏನಾಯ್ತು?: ಘಟನೆಯು ಭಾನುವಾರ ನಡೆಸಿದ್ದು, ನಾಯಿ ದಾಳಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. 5 ವರ್ಷದ ಕಂದಮ್ಮ ಚಾಕೊಲೇಟ್ ಖರೀದಿಸಲು ಮನೆಯ ಪಕ್ಕದ ಅಂಗಡಿಗೆ ತೆರಳಿದ್ದಾಳೆ. ರಸ್ತೆಯಲ್ಲಿದ್ದ ಬೀದಿನಾಯಿಗಳು ಮಗುವನ್ನು ಅಟ್ಟಿಸಿಕೊಂಡು ಹೋಗಿ ದಾಳಿ ಮಾಡಿವೆ. ಶ್ವಾನಗಳ ಗುಂಪಿಗೆ ಸಿಲುಕಿ ಮಗು ಕಿರುಚಾಡಿದೆ. ಈ ವೇಳೆ ಅಲ್ಲಿಯೇ ಇದ್ದ ಜನರು ಓಡಿ ಬಂದು ನಾಯಿಗಳನ್ನು ಓಡಿಸಿದ್ದಾರೆ.
ತೀವ್ರ ಗಾಯಗೊಂಡಿದ್ದ ಮಗುವನ್ನು ತಕ್ಷಣವೇ ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ದು, ಚಿಕಿತ್ಸೆ ಕೊಡಿಸಿದ್ದಾರೆ. ಘಟನೆಯ ಪೂರ್ಣ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಷಯ ತಿಳಿದ ಮುನ್ಸಿಪಲ್ ಕಾರ್ಪೊರೇಷನ್ ತಂಡ ಗಾಯಗೊಂಡ ಬಾಲಕಿಯ ಮನೆಗೆ ಭೇಟಿ ನೀಡಿ, ಆಕೆಯ ಯೋಗಕ್ಷೇಮ ವಿಚಾರಿಸಿದೆ. ಘಟನೆಯು ನಗರದ ಸಿವಿಲ್ ಲೈನ್ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡಪುರ ಪ್ರದೇಶದಲ್ಲಿ ಭಾನುವಾರ ನಡೆದಿದೆ. ಇದಾದ ನಂತರ ನಗರ ಪಾಲಿಕೆ ತಂಡವು 5 ರಿಂದ 6 ಬೀದಿನಾಯಿಗಳನ್ನು ಹಿಡಿದಿದೆ ಎಂದು ಮಾಹಿತಿ ಸಿಕ್ಕಿದೆ.
ಇದನ್ನೂ ಓದಿ: ಚಿಕ್ಕೋಡಿ: ನ್ಯಾಯಾಲಯದ ಆವರಣಕ್ಕೆ ಹುಚ್ಚು ನಾಯಿ ನುಗ್ಗಿ 6 ಜನರ ಮೇಲೆ ದಾಳಿ - MAD DOG ATTACK