ಈರೋಡ್ (ತಮಿಳುನಾಡು): ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿರುವಾಗಲೇ ದಿಢೀರ್ ಎದೆ ಹಿಡಿದುಕೊಂಡು ಕುಸಿದುಬಿದ್ದ ಶಿಕ್ಷಕ ಹೃದಯಸ್ತಂಭನ(cardiac arrest)ದಿಂದ ಸಾವನ್ನಪ್ಪಿದ ಘಟನೆ ತಮಿಳುನಾಡಿನ ಸುಂದಪುರ್ ಜಿಲ್ಲೆಯ ಪಂಚಾಯತ್ ಯೂನಿಯನ್ ಮಾಧ್ಯಮಿಕ ಶಾಲೆಯಲ್ಲಿ ನಡೆದಿದೆ.
49 ವರ್ಷದ ಆಂಟೋನಿ ಗೆರಾಲ್ಡ್ ಸಾವನ್ನಪ್ಪಿದ ಶಿಕ್ಷಕ. ಬೂದಪಡ್ಡಿ ಗ್ರಾಮದ ನಿವಾಸಿಯಾಗಿದ್ದ ಶಿಕ್ಷಕ ಬುಧವಾರ ಎಂದಿನಿಂದ ಶಾಲೆಗೆ ಆಗಮಿಸಿ, ಪಾಠ-ಪ್ರವಚನದಲ್ಲಿ ಮಗ್ನರಾಗಿದ್ದರು. ನಾಲ್ಕನೇ ತರಗತಿ ಮಕ್ಕಳಿಗೆ ಪಾಠ ಮಾಡುವಾಗ ದಿಢೀರ್ ಎದೆ ನೋವು ಕಾಣಿಸಿಕೊಂಡಿದ್ದರಿಂದ ತಕ್ಷಣಕ್ಕೆ ಕುಸಿದುಬಿದ್ದ ಅವರು ಸಾವನ್ನಪ್ಪಿದ್ದಾರೆ.
ಶಿಕ್ಷಕರು ಎದೆ ಹಿಡಿದುಕೊಂಡು ಕುಸಿದಿದ್ದರಿಂದ ಆತಂಕಕ್ಕೆ ಒಳಗಾದ ವಿದ್ಯಾರ್ಥಿಗಳು ತಕ್ಷಣಕ್ಕೆ ಶಾಲೆಯ ಮುಖ್ಯೋಪಾಧ್ಯಾಯರಿಗೆ ಮಾಹಿತಿ ನೀಡಿದ್ದರು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷೆ ಬಳಿಕ ಅವರು ಹೃದಯಸ್ತಂಭನದಿಂದ ಸಾವನ್ನಪ್ಪಿರುವುದು ದೃಢಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆ ಶಾಲಾ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೊಳಿ ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ. ಗುರುವಾರ ಮೃತ ಶಿಕ್ಷಕನಿಗೆ ಶಾಲಾ ಸಿಬ್ಬಂದಿ ಮತ್ತು ಪೋಷಕರು ಅಂತಿಮ ಗೌರವ ನಮನ ಸಲ್ಲಿಸಿದರು. ಕಳೆದ ಏಳು ವರ್ಷದಿಂದ ಆಂಟೋನಿ ಈ ಶಾಲೆಯಲ್ಲಿ ಶಿಕ್ಷಕ ವೃತ್ತಿ ನಿಭಾಯಿಸುತ್ತಿದ್ದು, ಮಕ್ಕಳ ಜ್ಞಾನಾಭಿವೃದ್ಧಿಗೆ ಅವರ ಕೊಡುಗೆ ಅಪಾರ ಎಂದು ಶಾಲೆ ಸ್ಮರಿಸಿದೆ.
ಯಾವುದೇ ರೋಗಲಕ್ಷಣಗಳಿಲ್ಲದೆ ಇದ್ದರೂ ಅನೇಕ ಜನರಿಗೆ ಹೃದಯಸ್ತಂಭನ ಸಂಭವಿಸುತ್ತದೆ. ಯಾವುದೇ ರೋಗಲಕ್ಷಣಗಳಿಲ್ಲದೇ ಮತ್ತು ಯಾವುದೇ ನೋವು ಇಲ್ಲದೆ ಸಂಭವಿಸುವುದನ್ನು 'ಸೈಲೆಂಟ್ ಹೃದಯಾಘಾತ' ಅಂತ ಹೇಳುತ್ತಾರೆ.
ಈ ರೀತಿಯ ಆರೋಗ್ಯ ಸಮಸ್ಯೆಯ ಲಕ್ಷಣಗಳೇನು? ದಿಢೀರ್ ಪ್ರಾಣಕ್ಕೆ ಕುತ್ತು ತರುವ ಹೃದಯಾಘಾತ ಅಥವಾ ಹೃದಯಸ್ತಂಭನ ಸೈಲೆಂಟಾಗಿಯೇ ಸಂಭವಿಸುತ್ತದೆ. ಆಯಾಸ, ಅಜೀರ್ಣ, ಉಸಿರಾಟದ ತೊಂದರೆ, ಹೊಟ್ಟೆನೋವು, ವಾಕರಿಕೆ ಅಂತಹ ಲಕ್ಷಣಗಳು ಈ ಸಂದರ್ಭದಲ್ಲಿ ಕಾಣಿಸಿಕೊಳ್ಳುತ್ತವೆ ಎಂದು ತಜ್ಞರು ತಿಳಿಸುತ್ತಾರೆ.
ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು; ಇದ್ದಕ್ಕಿದ್ದಂತೆ ಪ್ರಾಣಪಕ್ಷಿ ಹಾರಿಹೋಗುವ ಹಲವು ಪ್ರಕರಣಗಳು ದಿನದಿಂದ ದಿನಕ್ಕೆ ವರದಿಯಾಗುತ್ತಲೇ ಇವೆ. ಇದಕ್ಕಾಗಿ ಜನ ಕೆಲ ಮುನ್ನೆಚ್ಚರಿಕೆಗಳನ್ನು ವಹಿಸುವುದು ಮುಖ್ಯವಾಗುತ್ತದೆ. ಹೃದಯದ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಕೊಬ್ಬಿನ ಆಹಾರ ಸೇವಿಸದೇ ಸಮತೋಲಿತ ಆಹಾರಕ್ಕೆ ಆದ್ಯತೆ ನೀಡಬೇಕು. ನಿಯಮಿತ ವ್ಯಾಯಾಮ ಮಾಡಬೇಕು, ಧೂಮಪಾನ-ಮದ್ಯಪಾನದಿಂದ ದೂರ ಇರುವುದು ಒಳ್ಳೆಯದು ಅಲ್ಲದೆ, ದೇಹದ ತೂಕವನ್ನು ಸಹ ನಿಯಂತ್ರಣದಲ್ಲಿಡಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಈ ಸುದ್ದಿಯನ್ನೂ ಓದಿ: ಸೈಲೆಂಟ್ ಹಾರ್ಟ್ ಅಟ್ಯಾಕ್ನ ಕಾರಣ & ಲಕ್ಷಣಗಳೇನು? ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ನೀವು ಸುರಕ್ಷಿತ