ನವದೆಹಲಿ: ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ಕಾಯ್ದಿರಿಸಿದ ಯಾವುದೇ ಖಾಲಿ ಹುದ್ದೆಯನ್ನು ಈ ವರ್ಗಗಳ ಸಾಕಷ್ಟು ಅಭ್ಯರ್ಥಿಗಳು ಲಭ್ಯವಿರದಿದ್ದರೆ ಅದನ್ನು ''ಮೀಸಲುರಹಿತ ಎಂದು ಘೋಷಿಸಬಹುದು'' ಎಂದು ಪ್ರಸ್ತಾಪಿಸುವ ವಿಶ್ವವಿದ್ಯಾಲಯ ಧನಸಹಾಯ ಆಯೋಗದ(ಯುಜಿಸಿ) ಕರಡು ಮಾರ್ಗಸೂಚಿಯ ಕುರಿತು ಭಾನುವಾರ ವಿವಾದ ಭುಗಿಲೆದ್ದಿತು. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿಯನ್ನು ತೆಗೆದುಹಾಕುವ ಹುನ್ನಾರ ನಡೆದಿದೆ ಎಂಬ ಆರೋಪಗಳು ಕೇಳಿಬಂದವು.
ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸ್ಪಷ್ಟನೆ: ''ಕೇಂದ್ರ ಶಿಕ್ಷಣ ಸಂಸ್ಥೆಗಳ (ಶಿಕ್ಷಕರ ವೃಂದದಲ್ಲಿ ಮೀಸಲಾತಿ) ಕಾಯಿದೆ- 2019 ಪರಿಚಯಿಸಿದ ನಂತರ ಒಂದೇ ಒಂದು ಹುದ್ದೆಯ ಮೀಸಲಾತಿ ರದ್ದತಿಯನ್ನೂ ಮಾಡುವುದಿಲ್ಲ. ಮೀಸಲಾತಿಯ ಬಗ್ಗೆ ಯಾವುದೇ ಅಸ್ಪಷ್ಟತೆಗೆ ಅವಕಾಶವಿಲ್ಲ'' ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸ್ಪಷ್ಟಪಡಿಸಿದ್ದಾರೆ.
ಯುಜಿಸಿ ಅಧ್ಯಕ್ಷ ಎಂ.ಜಗದೇಶ್ ಕುಮಾರ್ ಪ್ರತಿಕ್ರಿಯಿಸಿ, ''ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ (ಸಿಇಐ) ಈ ಹಿಂದೆ ಯಾವುದೇ ಮೀಸಲಾತಿ ವರ್ಗದ ಹುದ್ದೆಗಳ ಮೀಸಲಾತಿ ರದ್ದುಗೊಳಿಸಿಲ್ಲ'' ಎಂದು ತಿಳಿಸಿದ್ದಾರೆ.
ಯುಜಿಸಿ ಕರಡು ಮಾರ್ಗಸೂಚಿಗಳಿಗೆ ಆಕ್ಷೇಪ: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಭಾರತ ಸರ್ಕಾರದ ಮೀಸಲಾತಿ ನೀತಿಯ ಅನುಷ್ಠಾನದ ಕರಡು ಮಾರ್ಗಸೂಚಿಗಳಿಗೆ ಜನವರಿ 28ರವರೆಗೆ ಸಾರ್ವಜನಿಕರಿಂದ ಪ್ರತಿಕ್ರಿಯೆ ಕೇಳಲಾಗಿತ್ತು. ಈ ಮಾರ್ಗಸೂಚಿಗಳಿಗೆ ಹಲವೆಡೆಗಳಿಂದ ಆಕ್ಷೇಪ ಕೇಳಿಬಂದಿವೆ. ''ಬಿಜೆಪಿ ಕೇವಲ ಯುವಕರ ಉದ್ಯೋಗ ಕಿತ್ತುಕೊಳ್ಳುವುದರಲ್ಲಿ ನಿರತವಾಗಿದೆ'' ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ. ''ಈ ಪ್ರಸ್ತಾವನೆಯನ್ನು ಕೂಡಲೇ ಹಿಂಪಡೆಯಬೇಕು'' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಆಗ್ರಹಿಸಿದ್ದರು.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಜೈರಾಮ್ ರಮೇಶ್, ''ಕೆಲವು ವರ್ಷಗಳ ಹಿಂದೆ ಆರ್‌ಎಸ್‌ಎಸ್ (ರಾಷ್ಟ್ರೀಯ ಸ್ವಯಂಸೇವಕ ಸಂಘ) ಮುಖ್ಯಸ್ಥ ಮೋಹನ್ ಭಾಗವತ್ ಮೀಸಲಾತಿಯನ್ನು ಪರಿಶೀಲಿಸುವ ಬಗ್ಗೆ ಮಾತನಾಡಿದ್ದರು. ಈಗ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಿಗೆ ನೀಡಲಾದ ಮೀಸಲಾತಿಯನ್ನು ಕೊನೆಗೊಳಿಸಲು ಪಿತೂರಿ ನಡೆಯುತ್ತಿದೆ. ದಲಿತರು, ಹಿಂದುಳಿದ ವರ್ಗಗಳು ಮತ್ತು ಬುಡಕಟ್ಟು ಜನರ ಸಮಸ್ಯೆಗಳೊಂದಿಗೆ ಕೇಂದ್ರ ಸರ್ಕಾರ ರಾಜಕಾರಣ ಮಾಡುತ್ತಿದೆ'' ಎಂದು ಆರೋಪಿಸಿದ್ದಾರೆ.
ಜೆಎನ್‌ಯು ವಿದ್ಯಾರ್ಥಿ ಸಂಘ (ಜೆಎನ್‌ಯುಎಸ್‌ಯು) ಯುಜಿಸಿ ಅಧ್ಯಕ್ಷ ಕುಮಾರ್ ವಿರುದ್ಧ ಸೋಮವಾರ ಪ್ರತಿಭಟನೆ ನಡೆಸುವುದಾಗಿ ಘೋಷಿಸಿತ್ತು. 2019ರ ಕಾಯಿದೆಯ ಪ್ರಕಾರ, ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಶಿಕ್ಷಣ ಸಚಿವಾಲಯವು ಎಲ್ಲಾ ಸಿಇಐಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ ಎಂದು ಕುಮಾರ್ ಸ್ಪಷ್ಟೀಕರಣ ಕೊಟ್ಟಿದ್ದಾರೆ.
"ಕೇಂದ್ರ ಶಿಕ್ಷಣ ಸಂಸ್ಥೆಗಳಲ್ಲಿ (ಶಿಕ್ಷಕರ ಕೇಡರ್‌ನಲ್ಲಿ ಮೀಸಲಾತಿ) ಕಾಯಿದೆ- 2019ರ ಪ್ರಕಾರ ಶಿಕ್ಷಕರ ಹುದ್ದೆಗಳ ನೇರ ನೇಮಕಾತಿಯಲ್ಲಿ ಕೇಂದ್ರ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ಒದಗಿಸಲಾಗಿದೆ. ಆದ್ರೆ, ಯಾವುದೇ ಮೀಸಲಾತಿಯನ್ನು ರದ್ದುಗೊಳಿಸಲಾಗಿಲ್ಲ" ಎಂದು ಶಿಕ್ಷಣ ಸಚಿವಾಲಯವು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತಿಳಿಸಿದೆ. ಯುಜಿಸಿ ಅಧ್ಯಕ್ಷರೂ ಸಹ ಪೋಸ್ಟ್ ಮಾಡಿದ್ದು, ''ಈ ಹಿಂದೆ ಕೇಂದ್ರ ಶಿಕ್ಷಣ ಸಂಸ್ಥೆಗಳಲ್ಲಿ ಯಾವುದೇ ಮೀಸಲಾತಿ ವರ್ಗದ ಹುದ್ದೆಗಳ ಮೀಸಲಾತಿ ರದ್ದು ಮಾಡಿಲ್ಲ'' ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಶ್ರೀರಾಮಲಲ್ಲಾನ ಮುಡಿಗೇರಲಿದೆ 11 ಕೋಟಿ ರೂ. ಮೌಲ್ಯದ ವಜ್ರಖಚಿತ ಕಿರೀಟ