ಚೆನ್ನೈ (ತಮಿಳುನಾಡು): ಪ್ರಧಾನಿ ಮೋದಿ ಅವರ ತಮಿಳುನಾಡು ಭೇಟಿಯನ್ನು ವಿರೋಧಿಸಿ ಡಿಎಂಕೆ ವಕೀಲರೊಬ್ಬರು 'ಗೋ ಬ್ಯಾಕ್ ಮೋದಿ' ಎಂಬ ಘೋಷಣೆಯುಳ್ಳ ಪೋಸ್ಟರ್‌ಗಳನ್ನು ಚೆನ್ನೈನ ವಿವಿಧೆಡೆ ಅಂಟಿಸಿ ಸಂಚಲನ ಮೂಡಿಸಿದ್ದಾರೆ. ಭಾರತದ 18ನೇ ಲೋಕಸಭೆ ಚುನಾವಣೆ ಮುಕ್ತಾಯದ ಹಂತದಲ್ಲಿದೆ. ಇದುವರೆಗೆ 6 ಹಂತದ ಮತದಾನ ಪೂರ್ಣಗೊಂಡಿದೆ. ಇಂದು 7ನೇ ಹಂತದ ಮತದಾನದ ಬಹಿರಂಗ ಚುನಾವಣೆ ಪ್ರಚಾರ ಮುಕ್ತಾಯಗೊಂಡಿದೆ. ಜೂನ್ 1ರಂದು 7ನೇ ಹಂತದ ಮತದಾನ ನಡೆಯಲಿದ್ದು, ಜೂನ್ 4ರಂದು ಮತ ಎಣಿಕೆ ನಡೆಯಲಿದೆ.
![prime minister Narendra modi](https://etvbharatimages.akamaized.net/etvbharat/prod-images/30-05-2024/21597386_thu.jpg)
ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರು, ಬಹಿರಂಗ ಚುನಾವಣೆ ಪ್ರಚಾರಕ್ಕೆ ತೆರೆ ಬೀಳುತ್ತಿದ್ದಂತೆ ಇಂದು ಸಂಜೆ ತಮಿಳುನಾಡಿನ ಕನ್ಯಾಕುಮಾರಿ ವಿವೇಕಾನಂದ ರಾಕ್ ಸ್ಮಾರಕಕ್ಕೆ ಭೇಟಿ ನೀಡಿ ಧ್ಯಾನಾಸಕ್ತರಾಗಿದ್ದಾರೆ. ಇಂದಿನಿಂದ ಜೂನ್ 1ರವರೆಗೆ 3 ದಿನಗಳ ಕಾಲ ಮೋದಿ ಇಲ್ಲಿ ಧ್ಯಾನ ಮಾಡಲಿದ್ದಾರೆ.
![modi](https://etvbharatimages.akamaized.net/etvbharat/prod-images/30-05-2024/21597386_thumpp.jpg)
ಸ್ವಾಮಿ ವಿವೇಕಾನಂದರು ಭಾರತ ಮಾತೆಯ ದರ್ಶನ ಪಡೆದ ಸ್ಥಳ ಕನ್ಯಾಕುಮಾರಿ. ಈ ಬಂಡೆಯು ಸ್ವಾಮಿ ವಿವೇಕಾನಂದರ ಜೀವನದ ಮೇಲೆ ಹೆಚ್ಚಿನ ಪ್ರಭಾವ ಬೀರಿತು. ಗೌತಮ ಬುದ್ಧನ ಜೀವನದಲ್ಲಿ ಸಾರನಾಥಕ್ಕೆ ವಿಶೇಷ ಸ್ಥಾನವಿದೆ ಎಂದು ಜನರು ನಂಬುತ್ತಾರೆ. ಈ ಬಂಡೆ ಸ್ವಾಮಿ ವಿವೇಕಾನಂದರ ಜೀವನದಲ್ಲಿಯೂ ಸಹ ಅದೇ ಸ್ಥಾನವನ್ನು ಹೊಂದಿದೆ.
![MODI](https://etvbharatimages.akamaized.net/etvbharat/prod-images/30-05-2024/21597386_thumbppp.jpg)
ಮೋದಿ ಅವರ ಈ ಭೇಟಿ ಈಗ ದೇಶಾದ್ಯಂತ ಭಾರಿ ಸದ್ದು ಮಾಡುತ್ತಿದೆ. ಇನ್ನೊಂದು ಕಡೆ ಡಿಎಂಕೆ ಪರ ವಕೀಲ ಹೇಮಂತ್ ಅಣ್ಣಾದೊರೈ ಅವರು ಮೋದಿಯ ತಮಿಳುನಾಡು ಭೇಟಿಯನ್ನು ಖಂಡಿಸಿ 'ಗೋ ಬ್ಯಾಕ್ ಮೋದಿ' ಎಂಬ ಪೋಸ್ಟರ್‌ಗಳನ್ನು ತಯಾರಿಸಿ ಚೆನ್ನೈನ ಪ್ರಮುಖ ಪ್ರದೇಶಗಳಾದ ಟ್ರಿಪ್ಲಿಕೇನ್, ಪೂಕಡೈ ಮತ್ತು ಪ್ಯಾರಿಸ್ ಕಾರ್ನರ್‌ನಲ್ಲಿ ಅಂಟಿಸಿದ್ದಾರೆ.
![MODI](https://etvbharatimages.akamaized.net/etvbharat/prod-images/30-05-2024/21597386_thumblll.jpg)
ಅದರಲ್ಲಿ ವಕೀಲರು ತಮ್ಮ ಪೋಟೋ ಇರುವ ಪೋಸ್ಟರ್ಗಳೊಂದಿಗೆ, ''ತಮಿಳು ಜನರನ್ನು ಅವಮಾನಿಸಿ ಮತ್ತೆ ತಮಿಳುನಾಡಿಗೆ ಬಂದಿದ್ದೀರಾ ಮೋದಿ?. ಗೋ ಬ್ಯಾಕ್ ಮೋದಿ‘‘ ಎಂಬಂತಹ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ. ಈಗ ಇವು ಎಲ್ಲೆಡೆ ವೈರಲ್ ಆಗುತ್ತಿವೆ.
![Bhagwati Amman Temple](https://etvbharatimages.akamaized.net/etvbharat/prod-images/30-05-2024/21597386_thumbna.jpg)
ಇನ್ನೊಂದು ಕಡೆ ತಿರುನಲ್ವೇಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಗಿದೆ. ನೆಲ್ಲೈ ಕೊಕ್ರಕುಲಂನಲ್ಲಿರುವ ಕಾಂಗ್ರೆಸ್ ಪಕ್ಷದ ಕಚೇರಿಯ ಮಹಡಿಯಲ್ಲಿ ಜಿಲ್ಲಾಧ್ಯಕ್ಷ ಶಂಕರ ಪಾಂಡಿಯನ್ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಮಂದಿ ಪ್ರತಿಭಟನೆ ನಡೆಸಿ, ತಮಿಳರನ್ನು ಕಳ್ಳರೆಂದು ದೂಷಿಸಿದ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಸಿನಿಮಾ ಮೂಲಕ ಸಾರ್ವಜನಿಕ ವಲಯಕ್ಕೆ ಬಂದರು ಎಂಬ ತಪ್ಪು ವಿಚಾರಗಳನ್ನು ಹರಡುತ್ತಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿ ಪ್ರಧಾನಿ ಭೇಟಿಯನ್ನು ಖಂಡಿಸಿದ್ದಾರೆ. ಧರಣಿ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರತಿಭಟನೆ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ.
ಭಗವತಿ ಅಮ್ಮನ್ ದೇವಸ್ಥಾನದಲ್ಲಿ ಪ್ರಾರ್ಥನೆ: ಲೋಕಸಭೆ ಚುನಾವಣೆ ಪ್ರಚಾರದ ಮುಕ್ತಾಯದ ನಂತರ ಪ್ರಧಾನಿ ನರೇಂದ್ರ ಮೋದಿ ಗುರುವಾರ ತಮಿಳುನಾಡಿನ ಕನ್ಯಾಕುಮಾರಿಯಲ್ಲಿರುವ ಭಗವತಿ ಅಮ್ಮನ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಪ್ರಧಾನಿಯವರು 'ಧೋತಿ' ಧರಿಸಿ ತಮ್ಮ ಮೈಮೇಲೆ ಬಿಳಿ ಬಣ್ಣದ ಶಾಲನ್ನು ಹೊದ್ದುಕೊಂಡಿರುವುದು ಕಂಡುಬಂತು.