ಲಕ್ನೋ: ಗ್ಯಾಂಗ್ಸ್ಟರ್ ಹಾಗೂ ರಾಜಕಾರಣಿ ಮುಖ್ತಾರ್ ಅನ್ಸಾರಿ ಜೈಲಿನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆಯೇ ಹೊರತು ಸ್ಲೋ ಪಾಯ್ಸನಿಂಗ್ನಿಂದಲ್ಲ ಎಂದು ಉತ್ತರ ಪ್ರದೇಶದ ಬಂಡಾ ಜಿಲ್ಲೆಯ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಸೋಮವಾರ ವರದಿ ಸಲ್ಲಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯನ್ನು ದೃಢೀಕರಿಸುವ ಈ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ.
ಬಂಡಾ ಜೈಲಿನಲ್ಲಿದ್ದ ಬಂದಿಯಾಗಿದ್ದ ಮುಖ್ತಾರ್ ಅನ್ಸಾರಿ ಈ ವರ್ಷದ ಮಾರ್ಚ್ 28ರಂದು ರಾಣಿ ದುರ್ಗಾವತಿ ವೈದ್ಯಕೀಯ ಕಾಲೇಜಿನಲ್ಲಿ ನಿಧನರಾಗಿದ್ದರು. ಮರಣೋತ್ತರ ವರದಿಯಲ್ಲಿ ಅವರ ಸಾವಿಗೆ ಹೃದಯಾಘಾತ ಕಾರಣ ಎಂದು ಹೇಳಲಾಗಿತ್ತು. ಆದರೆ ಜೈಲು ಅಧಿಕಾರಿಗಳು ಅವರನ್ನು ಸ್ಲೋ ಪಾಯ್ಸನಿಂಗ್ ಮೂಲಕ ಕೊಲೆ ಮಾಡಿದ್ದಾರೆ ಎಂದು ಅವರ ಕುಟುಂಬದವರು ಆರೋಪಿಸಿದ್ದರು. ಕುಟುಂಬ ವರ್ಗದವರ ಪ್ರತಿಭಟನೆಯ ನಂತರ ರಾಜ್ಯ ಸರ್ಕಾರವು ಅನ್ಸಾರಿ ಸಾವಿನ ಬಗ್ಗೆ ತನಿಖೆ ನಡೆಸಲು ಮ್ಯಾಜಿಸ್ಟೀರಿಯಲ್ ಸಮಿತಿಯನ್ನು ನೇಮಕ ಮಾಡಿತ್ತು.
ಆರೋಪಗಳಿಗೆ ಸಂಬಂಧಿಸಿದಂತೆ ಹೇಳಿಕೆ ನೀಡುವಂತೆ ಅನ್ಸಾರಿ ಅವರ ಕುಟುಂಬ ಸದಸ್ಯರಿಗೆ ಅನೇಕ ಬಾರಿ ನೋಟಿಸ್ ನೀಡಿದರೂ ಯಾರೂ ಹಾಜರಾಗಲಿಲ್ಲ ಎಂದು ಮ್ಯಾಜಿಸ್ಟೀರಿಯಲ್ ವಿಚಾರಣೆ ನಡೆಸಿದ ಎಡಿಎಂ ರಾಜೇಶ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದರು.
ಮೌ ಸದರ್ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿದ್ದ ಮುಖ್ತಾರ್ ಅನ್ಸಾರಿ ಉತ್ತರ ಪ್ರದೇಶದ ಜೈಲಿಗೆ ಸ್ಥಳಾಂತರಿಸುವ ಮುನ್ನ 2005ರಿಂದ ಪಂಜಾಬ್ ಜೈಲಿನಲ್ಲಿದ್ದರು. ಈತನ ವಿರುದ್ಧ 60ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಸೆಪ್ಟೆಂಬರ್ 2022ರಿಂದ ವಿವಿಧ ನ್ಯಾಯಾಲಯಗಳಿಂದ ಕನಿಷ್ಠ ಎಂಟು ಪ್ರಕರಣಗಳಲ್ಲಿ ಇವರಿಗೆ ಶಿಕ್ಷೆ ವಿಧಿಸಲಾಗಿದೆ. ನಂತರ ಬಂಡಾ ಜೈಲಿನಲ್ಲಿದ್ದ ಇವರು ಮಾರ್ಚ್‌ನಲ್ಲಿ ನಿಧನರಾದರು.
ತಮ್ಮ ತಂದೆಯನ್ನು ಜೈಲಿನಲ್ಲಿ ಸ್ಲೋ ಪಾಯ್ಸನಿಂಗ್ ಮೂಲಕ ಸಾಯಿಸಲಾಗಿದೆ ಎಂದು ಆರೋಪಿಸಿದ್ದ ಅನ್ಸಾರಿ ಅವರ ಪುತ್ರ ಉಮರ್ ಅನ್ಸಾರಿ ಸಾವಿನ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದರು.
ರಾಣಿ ದುರ್ಗಾವತಿ ವೈದ್ಯಕೀಯ ಕಾಲೇಜಿನ ವೈದ್ಯರ ಸಮಿತಿಯು ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿ ಹೃದಯಾಘಾತವೇ ಸಾವಿಗೆ ಕಾರಣ ಎಂದು ತಿಳಿದು ಬಂದಿತ್ತು. ಶವಪರೀಕ್ಷೆ ನಡೆಸಿದ ಸಂದರ್ಭದಲ್ಲಿ ಅನ್ಸಾರಿ ಕುಟುಂಬಸ್ಥರು ಕೂಡ ಹಾಜರಿದ್ದರು ಮತ್ತು ಇಡೀ ಪ್ರಕ್ರಿಯೆಯನ್ನು ವೀಡಿಯೊ ರೆಕಾರ್ಡ್ ಮಾಡಲಾಗಿತ್ತು. ಅನ್ಸಾರಿ ಸಾವಿಗೆ ಹೃದಯಾಘಾತವೇ ಕಾರಣ ಎಂದು ಸೋಮವಾರದ ಮ್ಯಾಜಿಸ್ಟೀರಿಯಲ್ ತನಿಖಾ ವರದಿ ಪುನರುಚ್ಚರಿಸುವುದರೊಂದಿಗೆ, ಅವರ ಸಾವಿನ ಬಗೆಗಿನ ವಿವಾದವು ಕೊನೆಗೊಳ್ಳುವ ಸಾಧ್ಯತೆಯಿದೆ.
ಇದನ್ನೂ ಓದಿ: ಎಂಜಿನಿಯರ್ ರಶೀದ್, ಜಮಾತೆ ಇಸ್ಲಾಮಿ ಇಬ್ಬರೂ ಆರೆಸ್ಸೆಸ್ನ ಮಿತ್ರರು: ಫಾರೂಕ್ ಅಬ್ದುಲ್ಲಾ ಆರೋಪ - Jammu Kashmir elections