ನವದೆಹಲಿ: ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿನ ಭದ್ರತೆಯ ಹಿನ್ನೆಲೆಯಲ್ಲಿ ಪೂರ್ಣ ದೇಹವನ್ನು ಜಾಲಾಡುವ ಸ್ಕ್ಯಾನರ್‌ಗಳನ್ನು ಏಪ್ರಿಲ್ ಅಂತ್ಯದ ವೇಳೆಗೆ ಅಳವಡಿಸುವ ಸಾಧ್ಯತೆಯಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಇಂದು ಮಾಹಿತಿ ನೀಡಿದ್ದಾರೆ.
ವಿಮಾನಗಳ ಮೂಲಕ ವಿದೇಶಗಳಿಂದ ಅಕ್ರಮ ಸಾಗಾಟ ಹೆಚ್ಚುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ತಂತ್ರಜ್ಞಾನದ ಮೊರೆ ಹೋಗುತ್ತಿದೆ. ಬೆಂಗಳೂರು, ದೆಹಲಿ ಸೇರಿದಂತೆ ಪ್ರಮುಖ ನಾಲ್ಕು ನಿಲ್ದಾಣಗಳಲ್ಲಿ ಮೊದಲ ಹಂತದಲ್ಲಿ ಅಳವಡಿಕೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ ಪ್ರಕಾರ, ಬೆಂಗಳೂರು, ಚೆನ್ನೈ, ದೆಹಲಿ ವಿಮಾನ ನಿಲ್ದಾಣಗಳು ಅತಿಸೂಕ್ಷ್ಮ ವರ್ಗಕ್ಕೆ ಸೇರಿವೆ. ಇಲ್ಲಿ 5 ಮಿಲಿಯನ್ಗೂ ಅಧಿಕ ಜನರು ಪ್ರಯಾಣ ಬೆಳೆಸುತ್ತಿದ್ದಾರೆ. ಭದ್ರತೆಯ ವಿಚಾರದಲ್ಲಿ ಯಾವುದೇ ಲೋಪದೋಷ ಉಂಟಾಗದಂತೆ ತಡೆಯುವ ಅಗತ್ಯವಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಈಚೆಗೆ ವಿಮಾನ ನಿಲ್ದಾಣ ನಿರ್ವಾಹಕರೊಂದಿಗೆ ನಡೆದ ಸಭೆಯಲ್ಲಿ ಫುಲ್ ಬಾಡಿ ಸ್ಕ್ಯಾನರ್‌ಗಳನ್ನು ಅಳವಡಿಸುವ ಬಗ್ಗೆ ಮಾಹಿತಿ ನೀಡಲಾಗಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಈಗಾಗಲೇ ಫುಲ್ ಬಾಡಿ ಸ್ಕ್ಯಾನಿಂಗ್ ಯಂತ್ರವನ್ನು ಪ್ರಾಯೋಗಿಕವಾಗಿ ಅಳವಡಿಸಲಾಗಿದ್ದು, ಈ ತಂತ್ರಾಂಶ ಬಳಸಿದ ಮೊದಲ ನಿಲ್ದಾಣವಾಗಿದೆ. ದೆಹಲಿ ವಿಮಾನ ನಿಲ್ದಾಣವು ಶೀಘ್ರದಲ್ಲೇ ಈ ವೈಶಿಷ್ಟ್ಯಕ್ಕೆ ಸೇರಲಿದೆ ಎಂದು ತಿಳಿಸಿದ್ದಾರೆ.
ಫುಲ್ ಬಾಡಿ ಸ್ಕ್ಯಾನರ್‌ಗಳು ಪ್ರಯಾಣಿಕರ ತಪಾಸಣೆಯ ಸಮಯವನ್ನು ಅರ್ಧದಷ್ಟು ಕಡಿತಗೊಳಿಸುತ್ತವೆ. ಸೂಚಿತ ವಿಮಾನ ನಿಲ್ದಾಣಗಳಲ್ಲಿ ಫುಲ್ ಬಾಡಿ ಸ್ಕ್ಯಾನರ್‌ಗಳನ್ನು ಅಳವಡಿಸಿದ ಬಳಿಕ, ಅವುಗಳ ಯಶಸ್ಸಿನ ಅನುಸಾರ ಇತರ ವಿಮಾನ ನಿಲ್ದಾಣಗಳಲ್ಲಿ ಕೂಡ ಈ ಭದ್ರತಾ ವ್ಯವಸ್ಥೆಯಲ್ಲಿ ಜಾರಿಗೆ ತರುವ ಬಗ್ಗೆ ಯೋಜಿಸಲಾಗುವುದು. ಯಂತ್ರಗಳ ಖರೀದಿ, ಅಳವಡಿಕೆ, ಭದ್ರತಾ ಸಿಬ್ಬಂದಿಯ ತರಬೇತಿ ಮತ್ತು ಅವುಗಳ ಕಾರ್ಯಾಚರಣೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿಸಿದರು.
ಫುಲ್ ಬಾಡಿ ಸ್ಕ್ಯಾನರ್‌ಗಳು ತರಂಗ ತಂತ್ರಜ್ಞಾನ ಆಧರಿತ ತಂತ್ರಾಂಶದ ಮೇಲೆ ಕೆಲಸ ಮಾಡುತ್ತವೆ. ಈ ಸ್ಕ್ಯಾನರ್‌ಗಳು ದೇಹದ ಬಾಹ್ಯ, ಆಂತರಿಕವಾಗಿ ಮರೆಮಾಡಿದ ವಸ್ತುಗಳನ್ನು ಪತ್ತೆ ಹಚ್ಚುತ್ತವೆ. ಅಕ್ರಮವಾಗಿ ಸಾಗಾಟ ನಡೆಸುವಾಗ ಸಲೀಸಾಗಿ ಆರೋಪಿಗಳನ್ನು ಹಿಡಿಯಲು ಸಹಾಯ ಮಾಡುತ್ತವೆ.
ಇದನ್ನೂ ಓದಿ: 3,500 ಕೋಟಿ ರೂ. ತೆರಿಗೆ ನೋಟಿಸ್ ವಿಚಾರ: ಕಾಂಗ್ರೆಸ್ಗೆ ಬಿಗ್ ರಿಲೀಫ್ - SUPREME COURT